ಸುರಪುರ: ಬರಗಾಲದಂತಹ ಇಂದಿನ ಪರಿಸ್ಥಿತಿಯಲ್ಲಿ ಲಕ್ಷಾಂತರ ರೂ. ಖರ್ಚಿನಲ್ಲಿ ಮದುವೆ ಮಾಡಿಕೊಳ್ಳುವುದು ಸರಿಯಲ್ಲ. ಸಾಲ ಇಲ್ಲದೆ ಅತ್ಯಂತ ಸರಳವಾಗಿ ಸಾಮೂಹಿಕ ವಿವಾಹಗಳಲ್ಲಿ ಮದುವೆ ಮಾಡಿಕೊಳ್ಳುವುದು ಯೋಗ್ಯವಾಗಿದೆ ಎಂದು ದೇವಾಪುರ ಜಡಿಶಾಂತ ಲಿಂಗೇಶ್ವರ ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಬೈರಿಮಡ್ಡಿ ಗ್ರಾಮದಲ್ಲಿ ಜಯ ಕರ್ನಾಟಕ ಸಂಘಟನೆ ವತಿಯಿಂದ ಶುಕ್ರವಾರ ಏರ್ಪಡಿಸಲಾಗಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಸ್ವಾಮೀಜಿ ಮಾತನಾಡಿದರು.
ಸಾಮೂಹಿಕ ವಿವಾಹಗಳಿಂದ ಬಡವರಿಗೆ ಹೆಚ್ಚು ಅನುಕೂಲವಾಗುತ್ತದೆ. ಖರ್ಚು ವೆಚ್ಚಕ್ಕೂ ಕಡಿವಾಣ ಹಾಕಿದಂತಾಗುತ್ತದೆ. ಇಂದಿನ ಬರಗಾಲದಿದಂತ ಸಂಕಷ್ಟದ ದಿನಗಳಲ್ಲಿ ಜಯ ಕರ್ನಾಟಕ ಸಂಘಟನೆ ಪದಾಧಿಕಾರಿಗಳು ಸಮಾಜಮುಖೀ ಕಾರ್ಯದಲ್ಲಿ ತೊಡಗಿಸಿಕೊಂಡು ಬಡವರಿಗೆ ನೆರವಾಗುವ ನಿಟ್ಟಿನಲ್ಲಿ ಸಾಮೂಹಿಕ ವಿವಾಹ ಏರ್ಪಡಿಸುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಶ್ಲಾಘಿಸಿದರು.
ಲಕ್ಷ್ಮೀಪುರ ಶ್ರೀಗಿಮಮರಿ ಮಠದ ಬಸವಲಿಂಗ ದೇವರು ಮಾತನಾಡಿ, ಸಾಮೂಹಿಕ ವಿವಾಹಗಳ ಬಗ್ಗೆ ಬಹುತೇಕ ಗ್ರಾಮೀಣ ಜನರಲ್ಲಿ ಕೀಳರಿಮೆ ಇದೆ. ಈ ಬಗ್ಗೆ ಸಂಘಟನೆಯವರು ಆಗಾಗ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಸಾಮೂಹಿಕ ವಿವಾಹಗಳು ಹೆಚ್ಚು ಹೆಚ್ಚು ಏರ್ಪಡಿಸಬೇಕು. ಇವುಗಳಿಂದ ಸಮಾಜದಲ್ಲಿ ಸಾಮರಸ್ಯ ಇನ್ನಷ್ಟು ಗಟ್ಟಿಯಾಗುತ್ತದೆ. ಇಂತಹ ವಿವಾಹ ಕಾರ್ಯಕ್ರಮದಲ್ಲಿ ಸಾರ್ವಜನಿಕರು ತಮ್ಮ ಮಕ್ಕಳ ಮದುವೆ ಮಾಡಿ ಅವಕಾಶ ಸದ್ಬಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿಶ್ವಕರ್ಮ ಏಕದಂಡಗಿ ಮಠದ ಕಾಳಹಸ್ತೇಂದ್ರ ಮಹಾಸ್ವಾಮಿ ಮಾತನಾಡಿ, ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಂಪತಿಗಳು ಮಿತ ಸಂತಾನಕ್ಕೆ ಆದ್ಯತೆ ನೀಡಬೇಕು. ಅತ್ತೆ ಮಾವಂದಿರನ್ನು ತಂದೆ, ತಾಯಿಯಂತೆ ನೋಡಿಕೊಳ್ಳಬೇಕು. ಅತ್ತೆ ಮಾವಂದಿರು ಕೂಡ ಸೊಸೆಯನ್ನು ಮಗಳಂತೆ ಪರಿಗಣಿಸಬೇಕು. ಒಟ್ಟಾರೆಯಾಗಿ ಕುಟುಂಬದ ಸಾಮರಸ್ಯ ಕದಡದಂತಿರಲಿ. ವಧು ವರರ ಬಾಳು ಬಂಗಾರವಾಗಲಿ. ಬದುಕು ಚಿರಾಯವಾಗಲಿ ಎಂದು ಶುಭ ಕೋರಿದರು.
ಜಯ ಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ಆರ್. ಚಂದ್ರಪ್ಪ ಮಾತನಾಡಿ, ಸಂಘಟನೆ ಕೇವಲ ಹೋರಾಟಕ್ಕೆ ಸೀಮಿತವಾಗಿಲ್ಲ. ಸರಕಾರಿ ಸೌಲಭ್ಯಗಳ ಅನುಷ್ಠಾನಕ್ಕೆ ನೆರವು, ಕುಡಿಯುವ ನೀರು, ಶಾಲೆಗಳ ಅಭಿವೃದ್ಧಿ, ಸಾಮೂಹಿಕ ವಿವಾಹ, ಅಸಹಾಯಕರಿಗೆ, ಕುಷ್ಠ ರೋಗಿಗಳು ಸೇರಿದಂತೆ ಅನೇಕ ಬಡವರಿಗೆ ಸಹಾಯ ಹಸ್ತ ಚಾಚುವ ಮೂಲಕ ಸಂಘಟನೆ ಸಮಾಜಮುಖೀ ಕೆಲಸದಲ್ಲೂ ತೊಡಗಿಸಿಕೊಂಡು ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ಹೇಳಿದರು.
ನಿಷ್ಠಿ ಕಡ್ಲೆಪ್ಪ ಮಠದ ಪ್ರಭುಲಿಂಗ ಸ್ವಾಮೀಜಿ, ದೇವರಗೀನಾಲದ ಮಾರ್ಥಂಡಪ್ಪ ಮುತ್ಯಾ, ವೀರಗೊಟ್ಟದ ಅಡವಿಲಿಂಗ ಮಹಾರಾಜ, ಆನಂದಶ್ರಮದ ರಾಮಲಿಂಗ ಶರಣ, ಸಂಘಟನೆ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಅಣ್ಣಪ್ಪ ಓಲೇಕಾರ, ರಾಜ್ಯ ಕಾರ್ಯದರ್ಶಿ ರಾಮಚಂದ್ರಪ್ಪ, ರಾಜ್ಯ ಸಂಚಾಲಕ ಕೃಷ್ಣಪ್ಪ, ಪಿ. ಆನಂದರೆಡ್ಡಿ, ಜಿಲ್ಲಾಧ್ಯಕ್ಷ ಹಣಮಂತ ಪೂಜಾರಿ, ವಿಶ್ವನಾಥ, ತಾಲೂಕು ಅಧ್ಯಕ್ಷ ರವಿನಾಯಕ ಬೈರಿಮಡ್ಡಿ, ವೆಂಕಟೇಶ ಬೈರಿಮಡ್ಡಿ, ಶರಣು ಬೈರಿಮಡ್ಡಿ ಇದ್ದರು.