Advertisement

ಬಾಡಿಗೆ ಹಸುವಿಗೆ ದೇಶದ ಮೊದಲ ಐವಿಎಫ್ ಕರು ಜನನ!

04:05 PM Aug 26, 2017 | |

ಪುಣೆ: ಪ್ರಗತಿಪರ ರೈತ ಮಜೀದ್‌ ಪಠಾಣ್‌ ಅವರ ಸಂತೋಷಕ್ಕೆ ಪಾರವೇ ಇಲ್ಲ! ತಮ್ಮ ತೋಟದ ಸಂಚಾರಿ ಪ್ರಯೋಗಾಲಯದಲ್ಲಿ ಬಾಡಿಗೆ ಹಸುವಿನ ಗರ್ಭದಲ್ಲಿ ಐವಿಎಫ್ ತಂತ್ರಜ್ಞಾನದಲ್ಲಿ ಹುಟ್ಟಿದ ಗಂಡು ಕರುವನ್ನು (ವಿಜಯ್‌) ಎತ್ತಿಕೊಂಡು ಮುದ್ದಾಡಿದ್ದೇ ಮುದ್ದಾಡಿದ್ದು!

Advertisement

ಭಾರತದಲ್ಲಿ ಹಸು ಹಾಗೂ ಎಮ್ಮೆ ತಳಿಗಳ ಸಂಶೋಧನೆಯಲ್ಲಿ ದೊಡ್ಡ ಮಟ್ಟದ ಕೆಲಸ ಮಾಡುತ್ತಿರುವ ಜೆ.ಕೆ. ಟ್ರಸ್ಟ್‌ನ ಸಿಇಒ ಹಾಗೂ ಜೆಕೆ ಬೊವಾ ಜೆನಿಕ್ಸ್‌ ಸಂಸ್ಥೆಯ ಪ್ರಧಾನ ವಿಜ್ಞಾನಿ ಡಾ| ಶ್ಯಾಮ್‌ ಝವಾರ್‌ ಅವರ ಪ್ರಯೋಗದ ಫ‌ಲವಾಗಿ ಗಿರ್‌ ತಳಿಯ ಈ ಕರು ಆ. 20ರಂದು ಪುಣೆಯಿಂದ 150 ಕಿಮೀ ದೂರದಲ್ಲಿರುವ ಇಂದಾಪುರ ತಾಲೂಕಿನ ಲೋನಿ ದೇವಕಾರ್‌ ಗ್ರಾಮದಲ್ಲಿ ಜನಿಸಿದೆ. 

ರೈತರೊಬ್ಬರ ಮನೆಬಾಗಿಲಲ್ಲಿ ಐವಿಎಫ್ ತಂತ್ರಜ್ಞಾನದಲ್ಲಿ ಜನಿಸಿದ ಮೊದಲ ಕರು ಇದೆಂಬ ಕೀರ್ತಿಗೂ ಪಾತ್ರವಾಗಿದ್ದು, ಆರೋಗ್ಯಪೂರ್ಣವಾಗಿದೆ.

ಹೇಗೆ ನಡೆಯಿತು ಪ್ರಯೋಗ? 
“ಪ್ರಣಾಳ ಶಿಶು’ ತಂತ್ರಜ್ಞಾನದ ಮಾದರಿಯಲ್ಲೇ ಈ ಸಂಶೋಧನೆ ನಡೆಸಲಾಗಿದ್ದು. ತಮ್ಮ ಸಂಸ್ಥೆ ಮಹಾರಾಷ್ಟ್ರ ಹಾಗೂ ಚಂಡೀಗಢದಲ್ಲಿ ಐವಿಎಫ್ ಕರುಗಳ ಸೃಷ್ಟಿಸುವ ಎರಡು ಅತ್ಯುನ್ನತ ಪ್ರಯೋಗಾಲಯಗಳನ್ನು ಹೊಂದಿದೆ. 

ಈ ಸಲ ಈ ಪ್ರಯೋಗವನ್ನು ರೈತನ ಸಮ್ಮುಖದಲ್ಲೇ ನಡೆಸಲು ನಿರ್ಧರಿಸಿ ಯಶಸ್ವಿಯಾದೆವು. ಇದಕ್ಕಾಗಿ ವಿಶೇಷವಾಗಿ ವಿನ್ಯಾಸ ಗೊಳಿಸಿದ ಇಟಿ-ಐವಿಎಫ್ ವ್ಯಾನ್‌ ಎಂಬ ಸಂಚಾರಿ ಪ್ರಯೋಗಾಲಯ ರೂಪಿಸಿದೆವು. ಅದನ್ನು ರಚನಾ ಖೀಲಾರ್‌ ಫಾರ್ಮ್ಗೆ ಒಯ್ದು, ಅಲ್ಲಿ ದಾನಿ ಹಸುವಿನ (ರತನ್‌) ಇನ್ನೂ ಫ‌ಲಿತಗೊಳ್ಳದ ಅಂಡಗಳನ್ನು (ಊಕೈಟ್ಸ್‌) ಕಳೆದ ವರ್ಷ ನ. 9ರಂದು ಸಂಗ್ರಹಿಸಿದೆವು. 

Advertisement

ಅದನ್ನು ಉತ್ಕೃಷ್ಟ ಗುಣಮಟ್ಟದ ಎತ್ತಿನ ವೀರ್ಯಾಣುಗಳೊಂದಿಗೆ ಸಂಯೋಗಗೊಳಿಸಿದೆವು. ಇದರ ಪರಿಣಾಮ ಉತ್ತಮ ಗುಣಮಟ್ಟದ ಭ್ರೂಣ ಸಿದ್ಧವಾಯಿತು. ಅದನ್ನು 7 ದಿನಗಳ ಬಳಿಕ (ನ. 16) ಬಾಡಿಗೆ ಹಸುವಿಗೆ ವರ್ಗಾಯಿಸಲಾಯಿತು. ಕಳೆದ ಆ. 20ರಂದು ಈ ಹಸು ಆರೋಗ್ಯಪೂರ್ಣ ಕರುವಿಗೆ ಜನ್ಮ ನೀಡಿತೆಂದು ಝವಾರ್‌ ಹರ್ಷ ವ್ಯಕ್ತಪಡಿಸಿದರು.

ಇನ್ನೂ ಮೂರು ಕಡೆ 
ಜೆಕೆ ಟ್ರಸ್ಟ್‌ನ ಅಧ್ಯಕ್ಷ ಡಾ| ವಿಜಯಪಥ್‌ ಸಿಂಘಾನಿಯಾ ಅವರ ಕನಸಿನ ಕೂಸಾದ ಈ ಸಂಶೋಧನೆ ಯಶಸ್ವಿಯಾಗಿರುವುದು ದೇಸೀ ತಳಿಗಳ ಸಂರಕ್ಷಣೆಯಲ್ಲಿ ಹೊಸ ಆಶಾಭಾವ ಮೂಡಿಸಿದೆ. 

ಪಠಾಣ್‌ ಅವರ ಹೊಲ ಮಾತ್ರವಲ್ಲದೆ, ಪುಣೆಯ ಇನ್ನೂ ಮೂರು ಕಡೆಗಳಲ್ಲಿ ಐವಿಎಫ್ ತಂತ್ರಜ್ಞಾನದಿಂದ ಗಿರ್‌, ಖೀಲಾರ್‌ ಹಾಗೂ ಥಾರಪಾರಕರ್‌ ತಳಿಗಳ ಅಭಿವೃದ್ಧಿ ಪ್ರಕ್ರಿಯೆ ಜಾರಿಯಲ್ಲಿದ್ದು, ಇನ್ನು ಕೆಲವೇ ದಿನಗಳಲ್ಲಿ ಅಲ್ಲಿಯೂ ಕರುಗಳ ಜನನ ಆಗಲಿದೆ. 

ಹಸುವೊಂದು ತನ್ನ ಸರಾಸರಿ 15 ವರ್ಷಗಳ ಜೀವಿತಾವಧಿಯಲ್ಲಿ ಗರಿಷ್ಠ 10 ಕರುಗಳಿಗೆ ಜನ್ಮ ನೀಡಬಲ್ಲದು. ಐವಿಎಫ್ ತಂತ್ರಜ್ಞಾನದಿಂದ 200 ಕರುಗಳ ಸೃಷ್ಟಿ ಸಾಧ್ಯ. ಕೇಂದ್ರ ಸರಕಾರದ ರಾಷ್ಟ್ರೀಯ ಗೋಕುಲ ಮಿಷನ್‌ ಕೂಡ ಈ ದಿಸೆಯಲ್ಲಿ ಕಾರ್ಯೋನ್ಮುಖವಾಗಿದೆ ಎಂದು ಡಾ| ಝವಾರ್‌ ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next