ಕೀವ್ : ಅಂತಾರಾಷ್ಟ್ರೀಯ ಗಡಿಗಳೆಲ್ಲ ಮುಚ್ಚಿರುವುದರಿಂದ ಉಕ್ರೇನ್‌ನಲ್ಲಿ ಬಾಡಿಗೆ ತಾಯಂದಿರಿಗೆ ಜನಿಸಿದ ಮಕ್ಕಳು ತಮ್ಮ ಪಾಲಕರನ್ನು ಸೇರಲಾಗದೆ ಆಸ್ಪತ್ರೆಗಳಲ್ಲಿ ಅನಾಥ ಸ್ಥಿತಿಯಲ್ಲಿವೆ.
ಕೋವಿಡ್‌ನಿಂದಾಗಿ ವಾಯುಯಾನ ರದ್ದಾಗಿರುವುದರಿಂದ ಮಕ್ಕಳ ಪಾಲಕರಿಗೆ ದೇಶಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪಾಲಕರಿಲ್ಲದೆ ಆಸ್ಪತ್ರೆಯಲ್ಲಿ ಅನಾಥ ಶಿಶುಗಳಾಗಿವೆ. ಕನಿಷ್ಠ ಬಾಡಿಗೆ ತಾಯಂದಿರಲ್ಲಿ ಮಗು ಪಡೆಯಲು ನೋಂದಣಿ ಮಾಡಿಸಿಕೊಂಡ ಪಾಲಕರನ್ನು ಕರೆಸಿಕೊಳ್ಳಲು ಅನುಮತಿ ನೀಡಬೇಕೆಂದು ಮಾನವ ಹಕ್ಕುಗಳ ಹೋರಾಟಗಾರ್ತಿ ಲುಡ್ಮಿಲ ಡೆನಿಸೊವ ಹೇಳಿದ್ದಾರೆ.
ಕೀವ್‌ನ ಆಸ್ಪತ್ರೆಯೊಂದರಲ್ಲೇ 46 ನವಜಾತ ಶಿಶುಗಳ ಪಾಲಕರ ನಿರೀಕ್ಷೆಯಲ್ಲಿವೆ. ಅಮೆರಿಕ, ಬ್ರಿಟನ್, ಸ್ಪೈನ್ ಮತ್ತಿತರ ದೇಶಗಳ ಪಾಲಕರು ಉಕ್ರೇನ್‌ನ ಬಾಡಿಗೆ ತಾಯಂದಿರ ಮೂಲಕ ಮಕ್ಕಳನ್ನು ಪಡೆಯಲು ನೋಂದಣಿ ಮಾಡಿಸಿಕೊಂಡಿದ್ದರು. ಲಾಕ್‌ಡೌನ್ ಇರುವ ಕಾರಣ ಅವರಿಗೆ ಉಕ್ರೇನ್‌ಗೆ ಬರಲು ಸಾಧ್ಯವಾಗುತ್ತಿಲ್ಲ. ಇಂಥ ಪಾಲಕರಿಗೆ ಮನವೀಯ ನೆಲೆಯಲ್ಲಿ ವಿನಾಯಿತಿ ಗಳನ್ನು ನೀಡಲು ವಕೀಲ ಡೆನಿಸ್ ಹರ್ಮನ್ ಅವರು ಸರಕಾರಗಳನ್ನು ಒತ್ತಾಯಿಸಿದ್ದಾರೆ.
ಒಟ್ಟಾರೆಯಾಗಿ ಉಕ್ರೇನ್‌ನ ವಿವಿಧ ಆಸ್ಪತ್ರೆಗಳಲ್ಲಿ 100ಕ್ಕೂ ಹೆಚ್ಚು ನವಜಾತ ಶಿಶುಗಳು ಪೋಷಕರಿಗಾಗಿ ಕಾಯು ತ್ತಿವೆ. ಲಾಕ್‌ಡೌನ್ ಇನ್ನೂ ಕೆಲವು ದಿನಗಳ ಕಾಲ ಮುಂದು ವರಿದರೆ ನವಜಾತ ಶಿಶುಗಳ ಸಂಖ್ಯೆ 1000ಕ್ಕೇರಬಹುದು ಎಂದು ಡೆನಿಸೊವ ಹೇಳಿದ್ದಾರೆ.
ಉಕ್ರೇನ್‌ನಲ್ಲಿ ಬಾಡಿಗೆ ತಾಯ್ತನಕ್ಕೆ ಕಾನೂನಿನ ಮಾನ್ಯತೆ ಇದೆ. ಇತರ ದೇಶಗಳಿಗೆ ಹೋಲಿಸಿದರೆ ಉಕ್ರೇನ್‌ನಲ್ಲಿ ಬಾಡಿಗೆ ತಾಯಂದಿರ ಶುಲ್ಕವೂ ಕಡಿಮೆ. ಆಸ್ಪತ್ರೆಗಳೇ ಬಾಡಿಗೆ ತಾಯಂದಿರನ್ನು ಹುಡುಕಿ ಕೊಡುತ್ತವೆ. ಹೀಗಾಗಿ ವಿವಿಧ ದೇಶಗಳ ಜನರು ಬಾಡಿಗೆ ತಾಯಂದಿರ ಮೂಲಕ ಮಗುವನ್ನು ಪಡೆಯಲು ಉಕ್ರೇನ್‌ಗೆ ಬರುತ್ತಾರೆ. ಪ್ರತಿ ವರ್ಷ ಸಾವಿರಾರು ಮಕ್ಕಳು ಇಲ್ಲಿಂದ ವಿದೇಶಗಳಿಗೆ ಹೋಗುತ್ತವೆ. ಮಹಿಳೆಯರಿಗೆ ಇದು ಒಂದು ವರಮಾನ ಮೂಲವೂ ಹೌದು.