Advertisement

ಬಾಡಿಗೆ ತಾಯ್ತನ ನಿಯಮ ಪಾಲನೆಯಾಗುತ್ತಿದೆಯೇ? ನಿಯಮ ಮೀರಿದರೇ ನಯನತಾರಾ- ವಿಘ್ನೇಶ್‌

11:55 PM Oct 11, 2022 | Team Udayavani |

ಕಳೆದ ಜೂನ್‌ನಲ್ಲಿ ನಡೆದಿದ್ದ ಬಹುಭಾಷಾ ನಟಿ ನಯನತಾರಾ ಮತ್ತು ವಿಘ್ನೇಶ್‌ ಶಿವನ್‌ ವಿವಾಹ ಭಾರೀ ಸದ್ದು ಮಾಡಿತ್ತು. ಇತ್ತೀಚಿನ ದಿನಗಳಲ್ಲಿ ನಡೆದ ಸ್ಟಾರ್‌ ಮಂದಿಯ ಅದ್ದೂರಿ ವಿವಾಹ ಇದಾಗಿತ್ತು. ಆದರೆ ಈಗ ಇನ್ನೊಂದು ಕಾರಣಕ್ಕೆ ಇವರ ವಿವಾಹ ಮತ್ತೆ ವಿವಾದದಲ್ಲಿದೆ. ಜೂನ್‌ನಲ್ಲೇ ವಿವಾಹವಾಗಿದ್ದರೂ, ಈಗಾಗಲೇ ಈ ದಂಪತಿ ಬಾಡಿಗೆ ತಾಯಿ ಮೂಲಕ ಅವಳಿ ಮಕ್ಕಳನ್ನು ಪಡೆದಿದ್ದಾರೆ. ಈ ಸಂಗತಿ ಎಲ್ಲರ ಅಚ್ಚರಿಗೆ ಕಾರಣವಾಗಿದ್ದು ತಮಿಳುನಾಡು ಸರಕಾರ ತನಿಖೆಗೂ ಆದೇಶಿಸಿದೆ. ಹಾಗಾದರೆ ಏನಿದು ಪ್ರಕರಣ? ಹಿಂದಿನ ವಿವಾದವೇನು? ಇಲ್ಲಿದೆ ಮಾಹಿತಿ…

Advertisement

ಅವಳಿ ಮಕ್ಕಳ ಖುಷಿ
ಮೊನ್ನೆಯಷ್ಟೇ ನಯನತಾರಾ ಮತ್ತು ವಿಘ್ನೇಶ್‌ ದಂಪತಿ ನಾವಿಬ್ಬರು ಅಪ್ಪ-ಅಮ್ಮ ಆಗಿದ್ದೇವೆ. ನಮಗೆ ಅವಳಿ
ಮಕ್ಕಳಾಗಿದೆ ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದು ಕೊಂಡಿದ್ದರು. ಇದು ಎಲ್ಲರ ಹುಬ್ಬೇರಿಸಿತ್ತು. ವಿವಾಹ ವಾದ ನಾಲ್ಕು ತಿಂಗಳಿಗೇ ಹೇಗೆ ಇವರು ಮಕ್ಕಳ ಬಗ್ಗೆ ಘೋಷಣೆ ಮಾಡಿದರು ಎಂಬುದು ಅಚ್ಚರಿಗೂ ಕಾರಣವಾಗಿತ್ತು. ಅನಂತರ ಬಾಡಿಗೆ ತಾಯಿ ಮೂಲಕ ಅವಳಿ ಮಕ್ಕಳನ್ನು ಪಡೆದಿದ್ದಾರೆ ಎಂಬ ವಿಚಾರ ಬಯಲಿಗೆ ಬಂದಿದೆ. ಅವರ ಪಾಲಿಗೆ ಇದು ಖುಷಿ ವಿಷಯವಾಗಿದ್ದರೂ ಬಾಡಿಗೆ ತಾಯ್ತ ನದ ಮೂಲಕ ಮಕ್ಕಳನ್ನು ಪಡೆಯುವಲ್ಲಿ ಈ ದಂಪತಿ ಎಲ್ಲ ನಿಯಮ ಪಾಲನೆ ಮಾಡಿದ್ದಾರೆಯೇ ಎಂಬ ಪ್ರಶ್ನೆಗಳೂ ಎದ್ದವು.

ಬದಲಾಗಿದೆ ಕಾನೂನು
ಭಾರತದಲ್ಲಿ ಬಾಡಿಗೆ ತಾಯ್ತನದ ನಿಯಮಗಳು ಬದಲಾಗಿವೆ. 2021ರ ಡಿಸೆಂಬರ್‌ನಲ್ಲಿ ಕೇಂದ್ರ ಸರಕಾರ, ಸಹಾಯಕ ಸಂತಾನೋತ್ಪತ್ತಿ ತಂತ್ರಜ್ಞಾನಗಳ ಕಾಯ್ದೆ ಮತ್ತು ಬಾಡಿಗೆ ತಾಯ್ತನ ನಿಯಂತ್ರಣ ಮಸೂದೆಯನ್ನು ಜಾರಿಗೆ ತಂದಿತು. ಈ ಎರಡೂ ಕಾನೂನುಗಳು ಈ ವರ್ಷದ ಜನವರಿಯಿಂದ ಚಾಲ್ತಿಯಲ್ಲಿವೆ. ಈ ಮೂಲಕ ಅಕ್ರಮವಾಗಿ ನಡೆಯುತ್ತಿದ್ದ ಬಾಡಿಗೆ ತಾಯ್ತನ ಮತ್ತು ಲಿಂಗದ ಆಧಾರದಲ್ಲಿ ಮಗುವಿನ ಆಯ್ಕೆ ಹಾಗೂ ಬಾಡಿಗೆ ತಾಯ್ತನದ ಹಿಂಸೆಗಳ ನಿಯಂತ್ರಣ ಮಾಡಲಾಯಿತು. ಇದರ ಪ್ರಕಾರ ವಾಣಿಜ್ಯಾತ್ಮಕವಾಗಿ ಬಾಡಿಗೆ ತಾಯ್ತನ ನಡೆಸುವಂತಿಲ್ಲ. ವೇಶ್ಯಾ ವಾಟಿಕೆ ಸೇರಿದಂತೆ ಇತರ ರೀತಿಯ ಕಿರುಕುಳ ನೀಡುವಂತಿಲ್ಲ. ಬಾಡಿಗೆ ತಾಯ್ತನಕ್ಕೆ ಒಪ್ಪಿಕೊಳ್ಳುವ ಮಹಿಳೆಯ ವೈದ್ಯಕೀಯ ವೆಚ್ಚ ಹೊರತಾಗಿ ಬೇರೆ ಯಾವುದೇ ರೀತಿಯಲ್ಲೂ ಆ ಮಹಿಳೆಗೆ ಹಣ ನೀಡುವಂತಿಲ್ಲ. ಅಂದರೆ ಸರಕಾರವು ಬಾಡಿಗೆ ತಾಯ್ತನದಲ್ಲಿ ಮಗುವನ್ನು ಮಾರುವ ಅಥವಾ ಖರೀದಿಸುವ ಪ್ರಕ್ರಿಯೆಯನ್ನು ನಿಷೇಧಿಸಿದೆ.

ಬಾಡಿಗೆ ತಾಯ್ತನ ಎಂದರೇನು?
ಭಾರತದಲ್ಲಿರುವ ಬಾಡಿಗೆ ತಾಯ್ತನದ ನಿಯಮದ ಪ್ರಕಾರ ಮಹಿಳೆಯೊಬ್ಬರು, ಮಗು ಪಡೆಯಲು ಇಚ್ಚಿಸುವ ದಂಪತಿಗೆ ಅವರ ಪರವಾಗಿ ಮಗುವನ್ನು ಹೆತ್ತು ಕೊಡುವುದು. ಅಂದರೆ ಮಗು ಹುಟ್ಟಿದ ತತ್‌ಕ್ಷಣವೇ ಮಗುವನ್ನು ದಂಪತಿಗೆ ವರ್ಗಾಯಿಸಲಾಗುತ್ತದೆ. ಅಲ್ಲದೆ ಈ ಮಗು ದಂಪತಿ ಪಾಲಿಗೆ ಬಯೋಲಾಜಿಕಲ್‌ ಚೈಲ್ಡ್‌ ಆಗಿರುತ್ತದೆ. ಈ ಪ್ರಕರಣದಲ್ಲಿ ಗರ್ಭಪಾತಕ್ಕೆ ಅವಕಾಶವಿದ್ದು, ಇಲ್ಲಿ ತಾಯಿಯ ಒಪ್ಪಿಗೆ ಬೇಕಾಗಿರುತ್ತದೆ. ಹಾಗೆಯೇ, ಸದ್ಯ ಗರ್ಭಪಾತಕ್ಕೆ ಇರುವ ಎಲ್ಲ ನಿಯಮಗಳನ್ನು ಪಾಲನೆ ಮಾಡಬೇಕು.

ತಮಿಳುನಾಡು ಆರೋಗ್ಯ ಇಲಾಖೆಯಿಂದ ತನಿಖೆ
ಬಾಡಿಗೆ ತಾಯ್ತನದ ವಿವಾದ ಏರ್ಪಡುತ್ತಲೇ ತಮಿಳುನಾಡು ಸರಕಾರ ಎಚ್ಚೆತ್ತುಕೊಂಡಿದೆ. ಈ ಬಗ್ಗೆ ದಂಪತಿಯಿಂದ ವಿವರಣೆ ಕೇಳಿದೆ. ಈ ಕುರಿತಂತೆ ತನಿಖೆಯಾಗುವ ಸಾಧ್ಯತೆಯೂ ಹೆಚ್ಚಾಗಿದೆ. ತಮಿಳುನಾಡಿನ ಆರೋಗ್ಯ ಇಲಾಖೆ ಸ್ಪಷ್ಟನೆಯನ್ನೂ ನೀಡಿದೆ.

Advertisement

ಈ ಪ್ರಕರಣದಲ್ಲಿ ಏನಾಗಿದೆ?
ಸದ್ಯ ನಯನತಾರಾ ಮತ್ತು ವಿಘ್ನೇಶ್‌ ಪ್ರಕರಣದಲ್ಲಿ ಮೇಲಿನ ಯಾವುದೇ ನಿಯಮಗಳು ಪಾಲನೆಯಾಗಿಲ್ಲ. ಅಲ್ಲದೆ ವಿವಾಹವಾಗಿ 5 ವರ್ಷವಾದ ಮೇಲೆ ಮಗು ಪಡೆಯ ಬಹುದು ಎಂಬ ನಿಯಮವಿದ್ದರೂ ಮದುವೆಯಾಗಿ ಕೇವಲ 4 ತಿಂಗಳಲ್ಲೇ ಮಗು ಪಡೆ ದಿರುವುದು ಅಚ್ಚರಿ ಮೂಡಿಸಿದೆ. ಆದರೆ ನಯನ ತಾರಾ-ವಿಘ್ನೇಶ್‌ ದಂಪತಿ ಇದುವರೆಗೆ ಮಗುವನ್ನು ಬಾಡಿಗೆ ತಾಯ್ತನದ ಮೂಲಕ ಪಡೆದಿದ್ದೇವೆ ಎಂದು ಅಧಿಕೃತವಾಗಿ ಹೇಳಿಲ್ಲ. ಹೀಗಾಗಿಯೇ ತಮಿಳುನಾಡು ಸರಕಾರ ಈ ಕುರಿತಂತೆ ತನಿಖೆ ನಡೆಸಲು ಮುಂದಾಗಿದೆ.

ಶಿಕ್ಷೆಯೂ ಇದೆ
ಬಾಡಿಗೆ ತಾಯ್ತನದ ನಿಯಮಗಳನ್ನು ಮೀರಿದರೆ ಕಠಿನ ಶಿಕ್ಷೆಯೂ ಇದೆ. ವಾಣಿಜ್ಯಾತ್ಮಕವಾಗಿ ಬಾಡಿಗೆ ತಾಯ್ತನ, ಭ್ರೂಣಗಳ ಮಾರಾಟ, ಬಾಡಿಗೆ ತಾಯ್ತನದ ಮೂಲಕ ಮಗುವನ್ನು ನಿರಾಕರಿಸುವುದನ್ನು ಅಪರಾಧ ಎಂದು ಪರಿಗಣಿಸಲಾಗಿದೆ. ಇದಕ್ಕೆ 10 ವರ್ಷ ಜೈಲು, 10 ಲಕ್ಷ ರೂ.ಗಳವರೆಗೆ ದಂಡ ವಿಧಿಸುವ ನಿಯಮವಿದೆ. ಅಂದರೆ ಮೊದಲ ಬಾರಿಗೆ 5ರಿಂದ 10 ಲಕ್ಷ, ಇದೇ ತಪ್ಪು ಪುನರಾವರ್ತನೆಯಾದರೆ 8ರಿಂದ 12 ವರ್ಷ ಜೈಲು, 10 -20 ಲಕ್ಷ ರೂ. ದಂಡ ವಿಧಿಸಬಹುದಾಗಿದೆ.

ನಿಯಮಗಳು
1. ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯಲು ಇಚ್ಚಿಸುವ ದಂಪತಿ ವಿವಾಹವಾಗಿ 5 ವರ್ಷವಾಗಿರಬೇಕು.
2. ಮಹಿಳೆಯ ವಯಸ್ಸು 25ರಿಂದ 50, ಪುರುಷನ ವಯಸ್ಸು 26ರಿಂದ 55ರೊಳಗಿರಬೇಕು.
3. ಈ ದಂಪತಿಗೆ ಜೀವಂತವಾಗಿ ರುವ ಯಾವುದೇ ಮಗು ಇರಬಾರದು. ಅಂದರೆ, ಅದು ದತ್ತು ತೆಗೆದುಕೊಂಡಿರುವ ಅಥವಾ ಬಾಡಿಗೆ ತಾಯ್ತನದ ಮೂಲಕ ಪಡೆದಿರುವ ಮಗು ಆಗಿರಬಹುದು. ಯಾವುದೇ ಮಗು ಜೀವಂತವಾಗಿ ಇರಬಾರದು.
4. ತಂದೆ ಮತ್ತು ತಾಯಿ ಇಬ್ಬರೂ ಭಾರತೀಯರೇ ಆಗಿರಬೇಕು.
5. ಮಗು ಪಡೆಯಲು ಇಚ್ಚಿಸುವವರು ಜಿಲ್ಲಾ ವೈದ್ಯ ಮಂಡಳಿಯಿಂದ ಪ್ರಮಾಣಪತ್ರ ಪಡೆಯ ಬೇಕು. ಇದರಲ್ಲಿ ದಂಪತಿಯಲ್ಲಿ ಮಗು ಪಡೆಯುವ ಸಾಮರ್ಥ್ಯ ಇಲ್ಲ ಎಂಬುದನ್ನು ಖಚಿತಪಡಿಸಬೇಕು.
6. ಬಾಡಿಗೆ ತಾಯ್ತನದ ಮೂಲಕ ಮಗು ನೀಡುವ ಮಹಿಳೆಗೆ ಒಮ್ಮೆ ಮಾತ್ರ ಅವಕಾಶ ನೀಡಲಾ ಗುತ್ತದೆ. ಆಕೆಯ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯದ ಬಗ್ಗೆ ವೈದ್ಯಕೀಯ ದೃಢೀಕರಣ ಬೇಕು.
7. ಬಾಡಿಗೆ ತಾಯ್ತನದ ಮೂಲಕ ಮಗು ಪಡೆದ ಮೇಲೆ ಯಾವುದೇ ಸನ್ನಿವೇಶದಲ್ಲೂ ಆ ಮಗುವನ್ನು ದಂಪತಿ ನಿರಾಕರಿಸುವಂತಿಲ್ಲ.

 

 

Advertisement

Udayavani is now on Telegram. Click here to join our channel and stay updated with the latest news.

Next