Advertisement
ಡಾ|ಈಶ್ವರ ಮಂಟೂರ ಅವರು ಕವಿಯಾಗಿ, ಚಿಂತಕರಾಗಿ, ಅನುಭಾವಿ ಪ್ರವಚನಕಾರರಾಗಿ, ಸಾಹಿತಿ ಗಳಾಗಿ, ಸಮಾಜೋದ್ಧಾರ್ಮಿಕ ಕಾರ್ಯ ಮಾಡುತ್ತ ಮುನ್ನಡೆದವರು. ಕಲ್ಲು ಮನಸ್ಸಿನ ಹೃದಯಗಳನ್ನು ಹೂವಿನಂತೆ ಅರಳಿಸುವ ಕ್ರೂರಿಗಳ ಭಾವದಲ್ಲಿ ದಯೆಯನ್ನು ತುಂಬುವ, ದ್ವೇಷಿಗಳ ಮನದಲ್ಲಿ ಪ್ರೀತಿಯ ಹಣತೆಯನ್ನು ಹಚ್ಚುವ, ವಿನಯಗುಣ ಸರಳ ಸಂಪನ್ನರಾದ ಅವರ ತ್ಯಾಗ, ಸೇವೆ ಮಾದರಿಯಾಗಿತ್ತು.
ಹುದ್ದೆಗೆ ರಾಜೀನಾಮೆ ನೀಡಿ, ಶರಣ ಪಥದಲ್ಲಿ ಹೆಜ್ಜೆಯಿರಿಸಿದವರು. ನಾಡಿನ ದೇಶಿ ಕಲೆಗಳನ್ನು ಉಳಿಸಿ ಬೆಳೆಸಲು ರಾಗರಶ್ಮಿ ಎಂಬ ಹತ್ತು ಕಲಾವಿದರ ಜಾನಪದ ಬಳಗ ಕಟ್ಟಿಕೊಂಡು ಹಳ್ಳಿ-ಹಳ್ಳಿಗೆ ಸಂಚರಿಸಿ, ಸುಗಮ ಸಂಗೀತ ಕ್ಷೇತ್ರವನ್ನು ಶ್ರೀಮಂತಗೊಳಿಸಿದವರು.
Related Articles
Advertisement
ನೆತ್ತಿಗೆ ಬುತ್ತಿ, ಅಂತರಂಗದ ಮೃದಂಗ, ಪುಟ್ಟಹಣತೆ, ವಚನ ಹನಿ, ಮಹಾಂತ ಜೋಳಿಗೆ, ವಚನವೃಕ್ಷ ಮುಂತಾದ ಕೃತಿ ಕುಸುಮಗಳು ಓದುಗರ ಅಭಿಮಾನಕ್ಕೆ ಸಾಕ್ಷಿಯಾಗಿವೆ. ಪ್ರವಚನ ಭಾಸ್ಕರ, ಪ್ರವಚನ ಪ್ರಭಾಕರ, ಪ್ರವಚನ ಚೇತನ, ಪ್ರವಚನ ಭೂಷಣ, ಸಂಗೀತ ಸುಧಾಕರ, ಕಂಚಿನಕಂಠದ ವೀರವಾಣಿ, ಶರಣಶ್ರೀ, ಶ್ರೇಷ್ಠ ಕವಿ, ಅನಾಥ ಮಕ್ಕಳ ತಾಯಿ, ಅಬಲೆಯ ಬಂಧು, ಉತ್ಸಾಹದ ಖಣಿ, ಸಾಹಿತ್ಯದ ಚಿಲುಮೆ, ಮುಂತಾದ ಗೌರವ ಬಿರುದುಗಳಿಗೆ ಭಾಜನರಾಗಿದ್ದರು.
ಎಂ.ಎ. ಪದವಿ ಪಡೆದ ಶರಣರು ಸತತ ಅಧ್ಯಯನ, ಕಠಿಣ ಪರಿಶ್ರಮ, ಅಂದು ಕೊಂಡದ್ದನ್ನು ಸಾಧಿಸುವ ಛಲ, ನಿರಂತರ ಚಿಂತನದ ಫಲವಾಗಿ ಸ್ವತಃ ಖ್ಯಾತ ಪ್ರವಚನಕಾರರಾಗಿರುವುದರಿಂದ ತಮ್ಮ ಪ್ರವಚನ ಕ್ಷೇತ್ರವನ್ನೇ ಆಧಾರವಾಗಿಟ್ಟುಕೊಂಡು ಇದುವರೆಗೂ ಅಧ್ಯಯನಕ್ಕೆ ಒಳಪಡದ ಕನ್ನಡದಲ್ಲಿ ಪ್ರವಚನ ಸಾಹಿತ್ಯ ಪಿಎಚ್‌ಡಿ. ಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ 2013 ಡಿಸೆಂಬರ್ 21ರ ನುಡಿಹಬ್ಬದ ಸಂಭ್ರಮದಲ್ಲಿ ಗೌರವ ಡಾಕ್ಟರೇಟ್ ಪದವಿ ಪಡೆದಿದ್ದರು.
ಜಮಖಂಡಿ ತಾಲೂಕಿನ ಹುನ್ನೂರ-ಮಧುರಖಂಡಿ ಸುಂದರ ಪರಿಸರದಲ್ಲಿ ಬೆಟ್ಟದ ಇಳಿಜಾರಲ್ಲಿ ಬಸವಜ್ಞಾನ ಗುರುಕುಲ ಎಂಬ ಸಾಂಸ್ಕೃತಿಕ, ಧಾರ್ಮಿಕ, ಆಧ್ಯಾತ್ಮಿಕ ಯೋಗಾಶ್ರಮ ಸ್ಥಾಪಿಸಿದ್ದಾರೆ. ಈ ಆಶ್ರಮದಲ್ಲಿ ನಾಡಿನ ಅನಾಥ ಬಡಮಕ್ಕಳಿಗೆ ಅನ್ನ, ವಸ್ತ್ರ, ಆಶ್ರಯ, ಶಿಕ್ಷಣ, ಸಂಸ್ಕಾರ ನೀಡುವುದರ ಜೊತೆಗೆ ಸಂಗೀತ, ಗಣಕಯಂತ್ರ ಜ್ಞಾನ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಶಿಬಿರ, ಪರಿಸರ ಸಂರಕ್ಷಣೆ, ನೇತ್ರದಾನ, ರಕ್ತದಾನ, ಉಚಿತ ಆರೋಗ್ಯ ಶಿಬಿರಗಳು, ಪುಸ್ತಕ ಪ್ರಕಟಣೆ, ಪ್ರತಿ ತಿಂಗಳ ಕೊನೆಯ ಶನಿವಾರ ಶಿವಾನುಭವ ಸಂಪದ ಮಾಸಿಕ ಕಾರ್ಯಕ್ರಮ ನಿರಂತರವಾಗಿ ನಡೆಸುತ್ತ ಬಂದವರು.
ಪ್ರತಿ ವರ್ಷ ಡಿಸೆಂಬರ್ 25, 26 ಮತ್ತು 27 ಮೂರು ದಿನಗಳ ಕಾಲ ಶರಣ ಸಂಸ್ಕೃತಿ ಉತ್ಸವ ಹಾಗೂ ಜಾನಪದ ಕಲಾ ಮಹೋತ್ಸವ ವಿಜೃಂಭಣೆಯಿಂದ ನಡೆಸಿ, ನಮ್ಮ ಪರಂಪರೆ, ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಮೂಲಕ ನೆಲ-ಜಲ, ಕಲೆ, ಕೃಷಿ, ದಾಸೋಹ ನಾಡು-ನುಡಿ ಸಂಸ್ಕೃತಿ ಸಂವರ್ಧನೆಗಾಗಿ ಶ್ರಮಿಸಿದ ಸಾಧಕರಿಗೆ ರಾಜ್ಯ ಮಟ್ಟದ ಮೂರು ಪ್ರತಿಷ್ಠಿತ ಪ್ರಶಸ್ತಿಗಳನ್ನು ನೀಡುತ್ತಾ ಬಂದಿದ್ದಾರೆ. ನೂರಾರು ಜನ ಎಲೆಮರೆ ಕಾಯಿಯಂತಿರುವ ಸಾಧಕರನ್ನು ಗೌರವಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರು ಎನಗಿಂತ ಕಿರಿಯರಿಲ್ಲ ಎಂಬುದಕ್ಕೆ ರೂಪಕವಾಗಿದ್ದು ಕಾಯಕದಲ್ಲೇ ಕೈಲಾಸ ಇದೆ ಎಂಬುದನ್ನು ಕರಸ್ಥಲದಲ್ಲಿ ಪ್ರತಿಷ್ಠಾಪಿಸಿಕೊಂಡ ಶಿವಾನುಭಾವಿ ಶರಣ ಡಾ|ಈಶ್ವರ ಮಂಟೂರ ಇನ್ನಿಲ್ಲ ಎಂಬುದೇ ದುಃಖದ ಸಂಗತಿ.