Advertisement

ಶರಣರ ಕೊಡುಗೆ ಅಪಾರ

06:40 AM Jan 22, 2019 | Team Udayavani |

ದಾವಣಗೆರೆ: ಶರಣರು, ದಾರ್ಶನಿಕರು ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವಲ್ಲಿ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್‌.ಎ. ರವೀಂದ್ರನಾಥ್‌ ಹೇಳಿದರು.

Advertisement

ವಿದ್ಯಾನಗರದ ಕುವೆಂಪು ಕನ್ನಡಭವನದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಸಮಾಜಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ದಾರ್ಶನಿಕರಾದ ಶ್ರೀ ಶಿವಯೋಗಿ ಸಿದ್ದರಾಮ, ಮಹಾಯೋಗಿ ಶ್ರೀ ವೇಮನ, ಶ್ರೀ ಅಂಬಿಗರ
ಚೌಡಯ್ಯ ಜಯಂತ್ಯುತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಜನರು ತಮ್ಮ ಬದುಕನ್ನು ಹೇಗೆ ಸಾರ್ಥಕ ಮಾಡಿಕೊಳ್ಳಬೇಕೆಂಬ ಮಾರ್ಗವನ್ನು ಶರಣರು, ದಾರ್ಶನಿಕರು ತೋರಿಸಿಕೊಟ್ಟಿದ್ದಾರೆ. ಅದರಂತೆ ಅವರ ಆದರ್ಶಗಳನ್ನು ಪ್ರತಿಯೊಬ್ಬರು ಪಾಲಿಸಬೇಕು. ಸನ್ಮಾರ್ಗದ ದಾರಿಯಲ್ಲಿ ಜೀವನ ಸಾಗಿಸಬೇಕು ಎಂದು ಹೇಳಿದರು.

ಹಿರೇಕೋಗಲೂರಿನ ಉಪನ್ಯಾಸಕ ಮಹಾಂತೇಶ್‌ ಬಿ. ನಿಟ್ಟೂರು ಮಾತನಾಡಿ, ಸಿದ್ದರಾಮರ ವಚನಗಳು ಸರಳ, ನಿಷ್ಠುರ ಹಾಗೂ ಪರಿಣಾಮಕಾರಿಯಾಗಿವೆ. ಈಚಲ ಆಶ್ರಯಿಸಿದ ಜಲ ಮದ್ಯವಾಗುವಂತೆ, ದುರುಳರ ಸಂಗದಿಂದ ಸಜ್ಜನರು ಕೆಟ್ಟವರಾಗುತ್ತಾರೆ. ಸದ್ಗುಣ ಅಳವಡಿಸಿಕೊಂಡವ ಮಾನವನಾದರೆ, ಉಳಿದವರು ಪಶುಸಮಾನರೆಂದು ವಚನಗಳಲ್ಲಿ ಉಲ್ಲೇಖೀಸಿದ್ದಾರೆ ಎಂದರು.

ದಾಸ ಶ್ರೇಷ್ಠ ಅಂಬಿಗರ ಚೌಡಯ್ಯನವರ ವಚನಗಳು ಇತರರನ್ನು ಓಲೈಸುವ ದಾಸ್ಯ ಸಾಹಿತ್ಯವಾಗಿ ಉಳಿದಿಲ್ಲ. ಸ್ಥಾವರಲಿಂಗ ಮೌಡ್ಯಗಳ ಗೂಡು, ಇಷ್ಟಲಿಂಗ ಪೂಜೆ ಶ್ರೇಷ್ಠವೆಂದು ಪ್ರತಿಪಾದಿಸಿದ್ದಾರೆ. ಅಂತಹ ಶರಣರ ವಿಚಾರಧಾರೆಯ ಇಂಥ ಕಾರ್ಯಕ್ರಮಗಳನ್ನು ಶಾಲಾ-ಕಾಲೇಜುಗಳಲ್ಲಿ ಆಚರಿಸಿದರೆ, ಜಯಂತಿ ಆಚರಣೆಯೂ ಸಾರ್ಥಕವಾಗುತ್ತದೆ ಎಂದು ಹೇಳಿದರು.

Advertisement

ಶ್ರೀ ವೇಮನ ಕುರಿತು ಉಪನ್ಯಾಸ ನೀಡುತ್ತಾ ರಾಣೆಬೆನ್ನೂರಿನ ಪ್ರಾಧ್ಯಾಪಕ ಡಾ| ರಾಮರೆಡ್ಡಿ ಎಸ್‌. ರಡ್ಡೇರ, ಲೌಕಿಕರಾದ ವೇಮನರು ಕೆಲವು ಘಟನೆಗಳಿಂದ ಆಧ್ಯಾತ್ಮ ಚಿಂತನೆ ಕಡೆ ಮುಖಮಾಡಿದರು. ಅವರ ಜೀವನಾನುಭವ, ತತ್ವ ಸಿದ್ಧಾಂತಗಳು ಚೌಪದಿ ರೂಪದಲ್ಲಿವೆ. ವೇಮನರು
15 ಸಾವಿರ ಚೌಪದಿ ರಚಿಸಿದ್ದು, 4 ಸಾವಿರ ಮಾತ್ರ ಲಭ್ಯವಾಗಿವೆ ಎಂದರು.

ಕೇಶಮುಂಡಿಸಿ ಮಂತ್ರ ಬೋಧಿಸಿದವರು ಗುರುವಲ್ಲ. ಅಂತರಂಗದಲ್ಲಿ ಮನೆಮಾಡಿ ಅರಿವು ನೀಡುವವರು ಗುರು. ವಿಷಯ ವಾಸನೆ ಅಳಿಯದಿದ್ದರೆ ಮೋಕ್ಷ ಅಲಭ್ಯ. ವಿಶ್ವದಲ್ಲಿ ಕ್ಷಮೆಗೆ ಸಮನಾದ ಸದ್ಗುಣವಿಲ್ಲ. ಹಿಂಸೆ ಮಾಡದಿರುವುದೇ ಶ್ರೇಷ್ಠ ಜೀವನ. ಕೊಂದು ತಿನ್ನುವರು ಹೊಲೆಯರೇ ಹೊರತು, ಸತ್ತ ಪ್ರಾಣಿ ತಿನ್ನುವರಲ್ಲ ಎಂಬುದು ಮಹಾಯೋಗಿ ವೇಮನ ಅವರ ಅಂತರಂಗದ ನಿಲುವಾಗಿತ್ತು ಎಂದು ತಿಳಿಸಿದರು.

ಸಮಾಜದ ಮುಖಂಡ ಡಾ| ಕೊಟ್ರೇಶ್‌ ರೆಡ್ಡಿ ಮಾತನಾಡಿ, ಎಲ್ಲ ಸಮಾಜದವರನ್ನು ಒಟ್ಟಾಗಿ ಸೇರಿಸಿ ಒಂದೆಡೆ ದಾರ್ಶನಿಕರ ಜಯಂತಿ ಆಚರಿಸುವುದರಿಂದ, ತತ್ವಸಿದ್ಧಾಂತಗಳ ಪರಸ್ಪರ ವಿನಿಮಯ ಸಾಧ್ಯವಾಗುತ್ತದೆ. ಎಲ್ಲಾ ದಾರ್ಶನಿಕರ ಜಯಂತಿ ಒಂದೇ ವೇದಿಕೆಯಲ್ಲಿ ನಡೆಸುವುದರಿಂದ ಸಮಾಜದಲ್ಲಿ ಜಾತ್ಯತೀತ ಮನೋಭಾವ ಬೆಳೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ, ಕೆಪಿಸಿಸಿ ಕಾರ್ಯದರ್ಶಿ ಡಿ. ಬಸವರಾಜ್‌, ಗಂಗಾಮತಸ್ಥ ಸಮಾಜದ ಜಿಲ್ಲಾ ಉಪಾಧ್ಯಕ್ಷ ಮಂಜುನಾಥ್‌, ಭೋವಿ ಸಮಾಜದ ಜಿಲ್ಲಾಧ್ಯಕ್ಷ ಬಿ.ಟಿ. ಸಿದ್ದಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್‌ ಬೆಕ್ಕೇರಿ ಇತರರು ಉಪಸ್ಥಿತರಿದ್ದರು. ಆರ್‌. ಪ್ರಶಾಂತ್‌ ತಂಡ ಸಂಗೀತ ಕಾರ್ಯಕ್ರಮ ನೀಡಿದರು.

ಪಠ್ಯದಲ್ಲಿ ಶರಣರ ವಚನ ಸೇರ್ಪಡೆಯಾಗಲಿ….
ವಚನಕಾರರ ವಚನಗಳು ಜಾತ್ಯತೀತತೆ, ಸಮಾನತೆ ಸಾರಿದವು. ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಶಕ್ತಿ ಹೊಂದಿರುವವು. ಹಾಗಾಗಿ ಶಾಲಾ ಮಕ್ಕಳ ಪಠ್ಯದಲ್ಲಿ ಅನುಭವ ಮಂಟಪದ ಎಲ್ಲಾ ಶರಣರ ವಚನಗಳನ್ನು ರಾಜ್ಯ ಸರ್ಕಾರ ಸೇರ್ಪಡೆ ಮಾಡಬೇಕು. ಆಗ ದಾರ್ಶನಿಕರು, ವಚನಕಾರರ ಜಯಂತಿ ಆಚರಣೆಗೆ ಸಾರ್ಥಕತೆ ದೊರೆಯುತ್ತದೆ.
ಬಸವಂತಪ್ಪ, ಜಿಲ್ಲಾ ಪಂಚಾಯಿತಿ ಸದಸ 

Advertisement

Udayavani is now on Telegram. Click here to join our channel and stay updated with the latest news.

Next