ಕಲಬುರಗಿ: ಯಾವುದೇ ಒಂದು ಸಂಸ್ಥೆ ಅಭಿವೃದ್ಧಿ ಹೊಂದಬೇಕಾದರೆ ಪಾರದರ್ಶಕ ಆಡಳಿತವೇ ಮುಖ್ಯವಾಗುವುದರಿಂದ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ನೂತನ ಆಡಳಿತ ಮಂಡಳಿ ಸಹ ಪಾರದರ್ಶಕ ಆಡಳಿತಕ್ಕೆ ಹೆಚ್ಚಿನ ಒತ್ತು ನೀಡಬೇಕೆಂದು ಶರಣಬಸವೇಶ್ವರ ವಿದ್ಯಾವರ್ಧಕ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ| ಶರಣಬಸವಪ್ಪ ಅಪ್ಪಾ ಹೇಳಿದರು.
ಗುರುವಾರ ಶರಣಬಸವ ವಿಶ್ವವಿದ್ಯಾಲಯದ ತಾಂತ್ರಿಕ ಹಾಗೂ ಇಂಜಿನಿಯರಿಂಗ್ ವಿಭಾಗದ ತಾಂತ್ರಿಕ ಉತ್ಸವ ಚಾಲನೆ ಹಾಗೂ ಎಚ್‌ಕೆಇ ನೂತನ ಆಡಳಿತ ಮಂಡಳಿ ಸತ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಉತ್ತಮ ಶಿಕ್ಷಣ ನೀಡುವ ನಿಟ್ಟಿನಲ್ಲಿ ಶರಣಬಸವ ವಿಶ್ವವಿದ್ಯಾಲಯ ಸ್ಥಾಪನೆಗೊಂಡಿದೆ. ಕೃಷಿ ಬಗ್ಗೆ ಹೆಚ್ಚು ಕೋರ್ಸ್ ಆರಂಭಿಸಲಾಗುವುದು. ದೇಶಿಯ ಕೃಷಿ ಉಳಿಸಿ ಬೆಳೆಸುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.
ಓದಿದ ಮಾತ್ರಕ್ಕೆ ಒಕ್ಕಲತನ ಮಾಡಬಾರದು ಎಂಬ ನಿಯಮವಿಲ್ಲ. ಓದಿನ ಜತೆ ಕೃಷಿಗೆ ಒತ್ತು ಕೊಡಬೇಕು. ಓದಿಗಾಗಿ ಜಮೀನು ಮಾರಿ ಮಕ್ಕಳಿಗೆ ಕಲಿಸುವ ಪ್ರವೃತ್ತಿ ಬೆಳೆಯುತ್ತಿರುವುದು ಕೃಷಿ ಅವನತಿ ಸಂಕೇತವಾಗಿದೆ ಎಂದ ಅಪ್ಪ ಅವರು, ಓದಿದ ಮೇಲೆ ನೌಕರಿನೇ ಮಾಡಬೇಕು ಅಂತೇನಿಲ್ಲ. ಪ್ರಗತಿ ಪರ ರೈತ ಆಗಲು ಮನಸ್ಸು ಮಾಡಬೇಕು ಎಂದರು.
ಶೈಕ್ಷಣಿಕ ಗುಣಮಟ್ಟಕ್ಕೆ ಸಂಸ್ಥೆಯಲ್ಲಿ ಕಠಿಣ ನಿಯಮಾವಳಿಗಳನ್ನು ಕಾರ್ಯರೂಪಕ್ಕೆ ತರಲಾಗಿದೆ. ಉತ್ತಮ ಪಿಠೊಪಕರಣ, ಇ ಲೈಬ್ರರಿ, ಬೋಧನಾ ಅವಧಿ ಹೆಚ್ಚಳದಿಂದ ಯಶಸ್ಸಿ ಕಾಣಲಾಗಿದೆ ಎಂದು ಹೇಳಿದರು.
ಸನ್ಮಾನ: ಇದೇ ಸಂದರ್ಭದಲ್ಲಿ ಇತ್ತೀಚೆಗೆ ಚುನಾಯಿತರಾದ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ| ಭೀಮಾಶಂಕರ ಬಿಲಗುಂದಿ, ಉಪಾಧ್ಯಕ್ಷ ಡಾ| ಶಿವಾನಂದ ದೇವರಮನಿ ಆಡಳಿತ ಮಂಡಳಿ ಸದಸ್ಯರಾದ ಡಾ| ನಾಗೇಂದ್ರ ಮಂಠಾಳೆ, ಡಾ| ಸಂಪತ್ ಲೋಯಾ, ವಿಜಯಕುಮಾರ ದೇಶಮುಖ, ಗಂಗಾಧರ ಡಿ ಏಲಿ, ಉದಯಕುಮಾರ ಚಿಂಚೋಳಿ ಇತರರನ್ನು ಸತ್ಕರಿಸಲಾಯಿತು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಶರಣಬಸವ ವಿವಿ ಕುಲಪತಿ ಡಾ| ನಿರಂಜನ್ ನಿಷ್ಠಿ ಮುಂತಾದವರಿದ್ದರು. ಉಪಕುಲಪತಿಗಳಾದ ಅನಿಲಕುಮಾರ ಬಿಡವೆ ಪ್ರಾಸ್ತಾವಿಕ ಮಾತನಾಡಿದರು. ಬಿ.ಡಿ. ಮೈತ್ರೆ ಸ್ವಾಗತಿಸಿದರು, ಡಾ| ಲಿಂಗರಾಜ ಶಾಸ್ತ್ರೀ ವಂದಿಸಿದರು.