Advertisement

ಟಿ20 ವಿಶ್ವಕಪ್‌ಗೆ ಅಚ್ಚರಿಯ ಅಸ್ತ್ರ

10:26 AM Jan 09, 2020 | Sriram |

ಇಂದೋರ್‌: ಮುಂಬರುವ ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿ ವೇಳೆ ಟೀಮ್‌ ಇಂಡಿಯಾ ಬೌಲಿಂಗ್‌ ಬತ್ತಳಿಕೆಯಲ್ಲಿ “ಅಚ್ಚರಿಯ ಅಸ್ತ್ರ’ಗಳಿರಲಿವೆ ಎಂದಿರುವ ನಾಯಕ ವಿರಾಟ್‌ ಕೊಹ್ಲಿ, ಕರ್ನಾಟಕದ ಪ್ರಸಿದ್ಧ್ ಕೃಷ್ಣ ಅವರ ಹೆಸರನ್ನು ಪ್ರಸ್ತಾವಿಸಿ ಭಾರೀ ಸಂಚಲನ ಮೂಡಿಸಿದ್ದಾರೆ.

Advertisement

ತಂಡದ ಪ್ರಮುಖ ಪೇಸ್‌ ಬೌಲರ್‌ಗಳಾದ ಭುವನೇಶ್ವರ್‌ ಕುಮಾರ್‌, ದೀಪಕ್‌ ಚಹರ್‌ ಅವರೆಲ್ಲ ಗಾಯಾಳುಗಳ ಯಾದಿಯಲ್ಲಿರುವುದರಿಂದ ಹೆಚ್ಚುವರಿ ಪೇಸ್‌ ಬೌಲರ್‌ಗಳ ಅಗತ್ಯ ತಂಡಕ್ಕಿದೆ ಎಂಬುದು ಕೊಹ್ಲಿ ಲೆಕ್ಕಾಚಾರ. ಈ ಜಾಗಕ್ಕೆ 23ರ ಹರೆಯದ ಕರ್ನಾಟಕದ ಬಲಗೈ ವೇಗಿ ಪ್ರಸಿದ್ಧ್ ಕೃಷ್ಣ ಉತ್ತಮ ಆಯ್ಕೆ ಆಗಬಲ್ಲರು ಎಂದಿರುವುದು ಅನೇಕರ ಹುಬ್ಬೇರಿಸಿದೆ.

ರಾಜ್ಯದಾಚೆ ಅಪರಿಚಿತ
ಈ ಪ್ರಸಿದ್ಧ್ ಕೃಷ್ಣ ಯಾರು ಎಂಬ ಪ್ರಶ್ನೆಗೆ ಉತ್ತರ ಇರುವುದು ಕರ್ನಾಟಕ ಕ್ರಿಕೆಟ್‌ ವಲಯದಲ್ಲಿ ಮಾತ್ರ. 2018ರ ಇಂಗ್ಲೆಂಡ್‌ “ಎ’ ಸರಣಿ ವೇಳೆ ಭಾರತ “ಎ’ ತಂಡದಲ್ಲಿದ್ದ ಪ್ರಸಿದ್ಧ್ ಕೃಷ್ಣ, ಈಗ ರಾಷ್ಟ್ರೀಯ ಮಟ್ಟದ ಯಾವ ತಂಡದಲ್ಲೂ ಇಲ್ಲ. ಐಪಿಎಲ್‌ನಲ್ಲಿ ಕೆಕೆಆರ್‌ ಪರ ಆಡುತ್ತಿದ್ದಾರೆ. ಕಳೆದ ವರ್ಷ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಸೂಪರ್‌ ಓವರ್‌ ಎಸೆಯುವ ಅವಕಾಶ ಲಭಿಸಿತ್ತು. ವಿಜಯ್‌ ಹಜಾರೆ ಟ್ರೋಫಿ ಕ್ರಿಕೆಟ್‌ನಲ್ಲಿ 19 ವಿಕೆಟ್‌ ಉರುಳಿಸಿದ್ದಾರೆ. ಈ ವರ್ಷ ಯಾವುದೇ ರಣಜಿ ಪಂದ್ಯ ಆಡಿಲ್ಲ.

“ಒಂದೇ ರೀತಿಯ ಬೌಲಿಂಗ್‌ ಕೌಶಲ ಹೊಂದಿರುವವರ ಆಯ್ಕೆ ವೇಳೆ ಸೀನಿಯರ್‌ಗೆ ಮೊದಲ ಆದ್ಯತೆ ನೀಡಬೇಕಾಗುತ್ತದೆ. ನನ್ನ ಪ್ರಕಾರ ಟಿ20 ವಿಶ್ವಕಪ್‌ಗಾಗಿ ಪೇಸ್‌ ಮತ್ತು ಬೌನ್ಸ್‌ ಹೊಂದಿರುವ ಓರ್ವ ಅಚ್ಚರಿಯ ಬೌಲರ್‌ ಆಸ್ಟ್ರೇಲಿಯಕ್ಕೆ ಪ್ರವಾಸ ಮಾಡಲಿದ್ದಾರೆ. ಪ್ರಸಿದ್ಧ್ ಕೃಷ್ಣ ಅವರಲ್ಲಿ ಇಂಥ ತಾಕತ್ತಿದೆ. ದೇಶಿ ಕ್ರಿಕೆಟ್‌ನಲ್ಲಿ ಅವರ ನಿರ್ವಹಣೆ ಉತ್ತಮ ಮಟ್ಟದಲ್ಲಿದೆ’ ಎಂದು ವಿರಾಟ್‌ ಕೊಹ್ಲಿ ಹೇಳಿದ್ದಾರೆ.

6 ಪ್ರಥಮ ದರ್ಜೆ ಪಂದ್ಯಗಳಿಂದ 20 ವಿಕೆಟ್‌, 41 ಲಿಸ್ಟ್‌ ಎ ಪಂದ್ಯಗಳಿಂದ 67 ವಿಕೆಟ್‌ ಹಾಗೂ 28 ಟಿ20 ಪಂದ್ಯಗಳಿಂದ 24 ವಿಕೆಟ್‌ ಉರುಳಿಸಿರುವುದು ಪ್ರಸಿದ್ಧ್ ಕೃಷ್ಣ ಅವರ ಈವರೆಗಿನ ಬೌಲಿಂಗ್‌ ಸಾಧನೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next