ಹೊಸದಿಲ್ಲಿ : ಗಡಿ ನಿಯಂತ್ರಣ ರೇಖೆಯಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಅಗತ್ಯವೆಂದು ಕಂಡುಬಂದಲ್ಲಿ ಇನ್ನಷ್ಟು ಸರ್ಜಿಕಲ್ ದಾಳಿ ನಡೆಸುವುದನ್ನು ಭಾರತ ಆಯ್ಕೆ ಮಾಡಬಹುದಾಗಿದೆ ಎಂದು ನೂತನ ಸೇನಾ ಮುಖ್ಯಸ್ಥ ಜ| ಬಿಪಿನ್ ರಾವತ್ ಅವರು ಪಾಕಿಸ್ಥಾನವನ್ನು ಗುರಿ ಇರಿಸಿ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.
“ಈಚಿನ ದಿನಗಳಲ್ಲಿ ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆಯ ಪ್ರಕರಣಗಳು ಕಡಿಮೆಯಾಗಿವೆ. ಒಂದೊಮ್ಮೆ ಕದನ ವಿರಾಮ ಉಲ್ಲಂಘನೆ ಮುಂದುವರಿದಲ್ಲಿ ನಾವು ಇನ್ನಷ್ಟು ಸರ್ಜಿಕಲ್ ದಾಳಿಗಳನ್ನು ಕೈಗೊಳ್ಳಬೇಕಾದೀತು’ ಎಂದು ಜನರಲ್ ರಾವತ್ ಅವರು ಇಂದು ಶುಕ್ರವಾರ ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು.
“ಕದನ ವಿರಾಮ ಉಲ್ಲಂಘನೆ ಪ್ರಕರಣಗಳು ಕಡಿಮೆಯಾಗಿವೆಯಾದರೂ ಉಗ್ರರ ಒಳುನುಸುಳುವಿಕೆ ಪ್ರಕರಣಗಳು ಕಡಿಮೆಯಾಗಿಲ್ಲ. ಎರಡು ದಿನಗಳ ಹಿಂದಷ್ಟೇ ಗಡಿ ನುಸುಳಿ ಬಂದ ಇಬ್ಬರು ಉಗ್ರರನ್ನು ಪೂಂಚ್‌ನಲ್ಲಿ ನಮ್ಮ ಭದ್ರತಾ ಪಡೆಗಳು ಗುಂಡಿಕ್ಕಿ ಸಾಯಿಸಿವೆ’ ಎಂದು ರಾವತ್ ಹೇಳಿದರು.
“ಸರ್ಜಿಕಲ್ ದಾಳಿಗಳು ಯಾಕೆ ಮುಖ್ಯವಾಗುತ್ತವೆ; ಅವುಗಳ ಉದ್ದೇಶ ಏನು ಎಂಬುದನ್ನು ಮೊತ್ತ ಮೊದಲಾಗಿ ತಿಳಿಯುವುದು ಅಗತ್ಯ. ಕದನ ವಿರಾಮ ಉಲ್ಲಂಘನೆ ಮತ್ತು ಉಗ್ರರ ಒಳ ನಸುಳುವಿಕೆ ಬಗ್ಗೆ ನಮಗೆ ಗಡಿಯಾಚೆಯಿಂದ ಸ್ಪಷ್ಟವಾದ ಉತ್ತರ ಅಥವಾ ಸಂದೇಶ ಬಾರದೆ ಹೋದಲ್ಲಿ ಮತ್ತು ಉಗ್ರರ ಒಳನಸುಳುವಿಕೆಗೆ ಆ ಕಡೆಯಿಂದ ಪ್ರೋತ್ಸಾಹ ಮುಂದುವರಿಯುತ್ತಲೇ ಹೋದಲ್ಲಿ, ಸರ್ಜಿಕಲ್ ದಾಳಿ ನಡೆಸುವ ಅಗತ್ಯ ಉಂಟಾಗುತ್ತದೆ’ ಎಂದು ಜ| ರಾವತ್ ಹೇಳಿದರು.
ಭಾರತೀಯ ಸೈನಿಕ ಚಂದು ಚವಾಣ್ ಅವರನ್ನು ಬಿಡುಗಡೆ ಮಾಡುವ ಬದ್ಧತೆಯನ್ನು ಪಾಕ್ ಮಿಲಿಟರಿ ಅಧಿಕಾರಿಗಳು ದೃಢಪಡಿಸಿದ್ದಾರೆ; ಕಳೆದ ವರ್ಷ ಸೆಪ್ಟಂಬರ್ 30ರಂದು ಯೋಧ ಚವಾಣ್ ಅಛಾನಕ್ ಆಗಿ ಗಡಿ ದಾಟಿ ಪಾಕ್ ನೆಲವನ್ನು ಪ್ರವೇಶಿಸಿದರು ಎಂದು ರಾವತ್ ಹೇಳಿದರು.