Advertisement

ಲೀಗ್‌ ಕೊನೆಯಲ್ಲೊಂದು ಲುಂಗಿ ಡ್ಯಾನ್ಸ್‌!

06:05 AM May 22, 2018 | |

ಪುಣೆ: ಐಪಿಎಲ್‌ ಲೀಗ್‌ ಹಂತದ ಕೊನೆಯಲ್ಲೊಂದು ಲುಂಗಿ ಡ್ಯಾನ್ಸ್‌! ಇದಕ್ಕೆ ಸಾಕ್ಷಿಯಾದವರು ದಕ್ಷಿಣ ಆಫ್ರಿಕಾದ ವೇಗಿ ಲುಂಗಿಸಾನಿ ಎನ್‌ಗಿಡಿ. ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡದ ವಿರುದ್ಧ ಗೆಲುವಿನ ರೂವಾರಿಯಾಗಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದದ್ದು ಎನ್‌ಗಿಡಿ ಸಾಧನೆ. ಅವರು ಚೆನ್ನೈ ತಂಡದ ಸದಸ್ಯನಾಗಿದ್ದುದರಿಂದ “ಲುಂಗಿ ಡ್ಯಾನ್ಸ್‌’ ಹೋಲಿಕೆ ಹೆಚ್ಚು ಅರ್ಥಪೂರ್ಣವೆನಿಸುತ್ತದೆ.

Advertisement

4 ಓವರ್‌ ಎಸೆದ ಎನ್‌ಗಿಡಿ ಒಂದನ್ನು ಮೇಡನ್‌ ಮಾಡಿ, ಕೇವಲ 10 ರನ್‌ ನೀಡಿ 4 ವಿಕೆಟ್‌ ಹಾರಿಸುವ ಮೂಲಕ ಲುಂಗಿ ಎನ್‌ಗಿಡಿ ಅಸಾಮಾನ್ಯ ಸಾಧನೆಗೆ ಸಾಕ್ಷಿಯಾದರು. ಇದರಲ್ಲಿ ಕೆ.ಎಲ್‌. ರಾಹುಲ್‌ ಮತ್ತು ಕ್ರಿಸ್‌ ಗೇಲ್‌ ಅವರ “ಬಿಗ್‌ ವಿಕೆಟ್‌’ಗಳೂ ಒಳಗೊಂಡಿದ್ದವು.

ಎನ್‌ಗಿಡಿ ವೇಗಕ್ಕೆ ತತ್ತರಿಸಿದ ಪಂಜಾಬ್‌ 19.4 ಓವರ್‌ಗಳಲ್ಲಿ 153ಕ್ಕೆ ಆಲೌಟಾದರೆ, ಚೆನ್ನೈ 19.1 ಓವರ್‌ಗಳಲ್ಲಿ 5 ವಿಕೆಟಿಗೆ 159 ರನ್‌ ಬಾರಿಸಿ ವಿಜಯಿಯಾಯಿತು. 14 ಪಂದ್ಯಗಳಲ್ಲಿ 8 ಸೋಲನುಭವಿಸಿದ ಪಂಜಾಬ್‌ ಕೂಟದಿಂದ ಹೊರಬಿತ್ತು.

ಅವಿಸ್ಮರಣೀಯ ಐಪಿಎಲ್‌
ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಲುಂಗಿ ಎನ್‌ಗಿಡಿ, “ನನ್ನ ಪಾಲಿಗೆ ಐಪಿಎಲ್‌ ನಿಜಕ್ಕೂ ಅವಿಸ್ಮರಣೀಯ ಅನುಭವ ನೀಡಿದೆ. ಐಪಿಎಲ್‌ ಹರಾಜಿನಲ್ಲಿ ಮಾರಾಟವಾದೇನೆಂಬ ಯಾವ ನಿರೀಕ್ಷೆಯೂ ನನ್ನಲ್ಲಿರಲಿಲ್ಲ. ಚೆನ್ನೈ ತಂಡ ಪ್ರವೇಶಿಸಿದ ಬಳಿಕ ತರಬೇತು ಸಿಬಂದಿ ಹಾಗೂ ನಾಯಕ ಧೋನಿ ಪೂರ್ತಿಯಾಗಿ ನನ್ನ ಬೆಂಬಲಕ್ಕೆ ನಿಂತರು. ಇದೊಂದು ಅದ್ಭುತ ಅನುಭವ. ನಾನು ಇಷ್ಟೊಂದು ವೀಕ್ಷಕರ ಸಮ್ಮುಖದಲ್ಲಿ ಎಂದೂ ಆಡಿದವನಲ್ಲ. ನನ್ನ ಕ್ರಿಕೆಟ್‌ ಕಲಿಕೆಗೆ ಐಪಿಎಲ್‌ ಹೊಸತೊಂದು ಆಯಾಮ ನೀಡಿದೆ ಎಂದು ಹೇಳಬಯಸುತ್ತೇನೆ’ ಎಂದರು.

“ದೀಪಕ್‌ ಚಹರ್‌ ಮೊದಲ ಓವರ್‌ ಎಸೆದಾಗ ಈ ಟ್ರ್ಯಾಕ್‌ನಲ್ಲಿ ಬೌನ್ಸ್‌ ಇದ್ದುದನ್ನು ಗುರುತಿಸಿದೆ. ಚೆಂಡು ಸ್ವಿಂಗ್‌ ಕೂಡ ಆಗುತ್ತಿತ್ತು. ಮೊದಲ ಎಸೆತದಿಂದಲೇ ನನಗೆ ಇದರ ಅನುಭವ ಆಯಿತು. ನನಗಿಲ್ಲಿ ಭಾರೀ ಲಾಭ ಆಗಲಿದೆ ಎಂಬುದು ಖಾತ್ರಿಯಾಯಿತು. ದ್ವಿತೀಯ ಎಸೆತದಲ್ಲೇ ಗೇಲ್‌ ವಿಕೆಟ್‌ ಕಿತ್ತು ಇದನ್ನು ಸಾಬೀತುಪಡಿಸಿದೆ…’ ಎಂದು ಲುಂಗಿ ಎನ್‌ಗಿಡಿ ಹೇಳಿದರು.

Advertisement

ಸ್ಕೋರ್‌ಪಟ್ಟಿ
ಕಿಂಗ್ಸ್‌ ಇಲೆವೆನ್‌ ಪಂಜಾಬ್‌    19.4 ಓವರ್‌ಗಳಲ್ಲಿ 153
ಚೆನ್ನೈ ಸೂಪರ್‌ ಕಿಂಗ್ಸ್‌
ಅಂಬಾಟಿ ರಾಯುಡು    ಸಿ ರಾಹುಲ್‌ ಬಿ ಮೋಹಿತ್‌    1
ಫಾ ಡು ಪ್ಲೆಸಿಸ್‌    ಸಿ ಗೇಲ್‌ ಬಿ ರಜಪೂತ್‌    14
ಸುರೇಶ್‌ ರೈನಾ    ಔಟಾಗದೆ    61
ಸ್ಯಾಮ್‌ ಬಿಲ್ಲಿಂಗ್ಸ್‌    ಬಿ ರಜಪೂತ್‌    0
ಹರ್ಭಜನ್‌ ಸಿಂಗ್‌    ಎಲ್‌ಬಿಡಬ್ಲ್ಯು ಅಶ್ವಿ‌ನ್‌    19
ದೀಪಕ್‌ ಚಹರ್‌    ಸಿ ಮೋಹಿತ್‌ ಬಿ ಅಶ್ವಿ‌ನ್‌    39
ಎಂ.ಎಸ್‌. ಧೋನಿ    ಔಟಾಗದೆ    16
ಇತರ        9
ಒಟ್ಟು  (19.1 ಓವರ್‌ಗಳಲ್ಲಿ 5 ವಿಕೆಟಿಗೆ)        159
ವಿಕೆಟ್‌ ಪತನ: 1-3, 2-27, 3-27, 4-58, 5-114.
ಬೌಲಿಂಗ್‌:
ಅಂಕಿತ್‌ ರಜಪೂತ್‌        4-1-19-2
ಮೋಹಿತ್‌ ಶರ್ಮ        3.1-0-28-1
ಆ್ಯಂಡ್ರೂé ಟೈ        4-0-47-0
ಅಕ್ಷರ್‌ ಪಟೇಲ್‌        4-0-28-0
ಆರ್‌. ಅಶ್ವಿ‌ನ್‌        4-0-36-2
ಪಂದ್ಯಶ್ರೇಷ್ಠ: ಲುಂಗಿ ಎನ್‌ಗಿಡಿ

ಎಕ್ಸ್‌ಟ್ರಾ ಇನ್ನಿಂಗ್ಸ್‌
ಚೆನ್ನೈ-ಪಂಜಾಬ್‌

– ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಸತತ 5ನೇ ಸೋಲುಂಡಿತು. ಪಂಜಾಬ್‌ ಸತತವಾಗಿ 5 ಪ್ಲಸ್‌ ಸೋಲನುಭವಿಸಿದ 3ನೇ ಸಂದರ್ಭ ಇದಾಗಿದೆ. 2015ರಲ್ಲಿ ಸತತ 7 ಹಾಗೂ 2011ರಲ್ಲಿ ಸತತ 5 ಪಂದ್ಯಗಳಲ್ಲಿ ಪಂಜಾಬ್‌ ಎಡವಿತ್ತು.
– ಲುಂಗಿ ಎನ್‌ಗಿಡಿ ಅತೀ ಕಡಿಮೆ ರನ್‌ ನೀಡಿ 4 ವಿಕೆಟ್‌ ಕಿತ್ತ ಚೆನ್ನೈನ 2ನೇ ಬೌಲರ್‌ ಎನಿಸಿದರು (10ಕ್ಕೆ 4). 2015ರಲ್ಲಿ ಆರ್‌ಸಿಬಿ ವಿರುದ್ಧ ಆಶಿಷ್‌ ನೆಹ್ರಾ ಕೂಡ 10 ರನ್ನಿಗೆ 4 ವಿಕೆಟ್‌ ಉರುಳಿಸಿದ್ದರು.
– ತಂಡವೊಂದು ಪರಾಭವಗೊಂಡ ಸಂದರ್ಭದಲ್ಲಿ ಆ್ಯಂಡ್ರೂé ಟೈ ಸರ್ವಾಧಿಕ ವಿಕೆಟ್‌ ಕಿತ್ತ 2ನೇ ಬೌಲರ್‌ ಎನಿಸಿದರು (14 ವಿಕೆಟ್‌). 2013ರಲ್ಲಿ ರಾಜಸ್ಥಾನ್‌ ರಾಯಲ್ಸ್‌ನ ಜೇಮ್ಸ್‌ ಫಾಕ್ನರ್‌ ಕೂಡ 14 ವಿಕೆಟ್‌ ಉರುಳಿಸಿದ್ದರು.
– ಅಂಕಿತ್‌ ರಜಪೂತ್‌ ಪಂದ್ಯವೊಂದರಲ್ಲಿ 18 ಡಾಟ್‌ ಬಾಲ್‌ ಎಸೆದು ಈ ಸಾಧಕರ ಯಾದಿಯಲ್ಲಿ ಜಂಟಿ 2ನೇ ಸ್ಥಾನ ಅಲಂಕರಿಸಿದರು. ಹಾಗೆಯೇ ಪಂಜಾಬ್‌ ಪರ ಅತ್ಯಧಿಕ ಡಾಟ್‌ ಬಾಲ್‌ ಎಸೆದ ಬೌಲರ್‌ ಎನಿಸಿದರು.
– ಮಹೇಂದ್ರ ಸಿಂಗ್‌ ಧೋನಿ ತಮ್ಮ ಕ್ರಿಕೆಟ್‌ ಬದುಕಿನಲ್ಲಿ 22 ಸಲ ಸಿಕ್ಸರ್‌ ಸಿಡಿಸಿ ತಂಡವನ್ನು ಗೆಲ್ಲಿಸಿಕೊಟ್ಟರು. ಐಪಿಎಲ್‌ನಲ್ಲಿ ಇದು 5ನೇ ಸಂದರ್ಭವಾಗಿದೆ.
– ಸುರೇಶ್‌ ರೈನಾ ಟಿ20ಯಲ್ಲಿ ತಮ್ಮ ನಿಧಾನ ಗತಿಯ ಅರ್ಧ ಶತಕ ದಾಖಲಿಸಿದರು (45 ಎಸೆತ). 2015ರಲ್ಲಿ ಚೆನ್ನೈಪರ ಆಡುತ್ತ ಆರ್‌ಸಿಬಿ ವಿರುದ್ಧ 44 ಎಸೆತಗಳಲ್ಲಿ ಅರ್ಧ ಶತಕ ಹೊಡೆದದ್ದು ಅವರ ಅತ್ಯಂತ ನಿಧಾನ ಗತಿಯ ಅರ್ಧ ಶತಕವಾಗಿತ್ತು.
– ಧೋನಿ ಟಿ20 ಕ್ರಿಕೆಟ್‌ನಲ್ಲಿ ಶರ್ವಾಧಿಕ 144 ಕ್ಯಾಚ್‌ ಪಡೆದು ದಾಖಲೆ ಸ್ಥಾಪಿಸಿದರು. ಕುಮಾರ ಸಂಗಕ್ಕರ ಅವರ 143 ಕ್ಯಾಚ್‌ಗಳ ದಾಖಲೆ ಮುರಿಯಲ್ಪಟ್ಟಿತು.
– ಧೋನಿ ಟಿ20ಯಲ್ಲಿ 72 ಸ್ಟಂಪಿಂಗ್‌ ಕೂಡ ಮಾಡಿದ್ದಾರೆ. ಇದರೊಂದಿಗೆ ಒಟ್ಟು 216 ವಿಕೆಟ್‌ ಪತನಕ್ಕೆ ಕಾರಣರಾದ ದಾಖಲೆಯನ್ನೂ ತಮ್ಮ ಹೆಸರಿಗೆ ಬರೆಸಿಕೊಂಡರು. ಈ ಸಂದರ್ಭದಲ್ಲಿ ಕಮ್ರಾನ್‌ ಅಕ್ಮಲ್‌ ದಾಖಲೆ ಪತನಗೊಂಡಿತು (215).
– ಧೋನಿ ಐಪಿಎಲ್‌ನಲ್ಲಿ 4 ಸಾವಿರ ರನ್‌ ಪೂರ್ತಿಗೊಳಿಸಿದ 7ನೇ ಹಾಗೂ ಭಾರತದ 6ನೇ ಆಟಗಾರನೆನಿಸಿದರು.

ಅಂಕ ಗಳಿಕೆ: ಲೀಗ್‌ ಹಂತದಲ್ಲೊಂದು ದಾಖಲೆ
2018ನೇ ಐಪಿಎಲ್‌ ಪಂದ್ಯಾವಳಿಯ ಲೀಗ್‌ ಹಂತಕ್ಕೆ ತೆರೆ ಬಿದ್ದಿದೆ. ಈ ಸಂದರ್ಭದಲ್ಲಿ ವಿಶಿಷ್ಟ ದಾಖಲೆಯೊಂದಕ್ಕೂ ಐಪಿಎಲ್‌ ಸಾಕ್ಷಿಯಾಗಿದೆ. ಕೂಟದಿಂದ ಹೊರಬಿದ್ದ ಮೊದಲ ತಂಡವೆಂಬ ಸಂಕಟಕ್ಕೆ ತುತ್ತಾದ ಡೆಲ್ಲಿ ಡೇರ್‌ಡೆವಿಲ್ಸ್‌ ತಂಡದ ಗೆಲುವಿನೊಂದಿಗೆ ಇದು ದಾಖಲಾಗಿರುವುದು ವಿಶೇಷ.

ಡೆಲ್ಲಿ ತನ್ನ ಅಂತಿಮ ಲೀಗ್‌ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ಗೆ 11 ರನ್‌ ಸೋಲುಣಿಸುವ ಮೂಲಕ ಡೆಲ್ಲಿ ಹಾಲಿ ಚಾಂಪಿಯನ್‌ ತಂಡವನ್ನು ಕೂಟದಿಂದಲೇ ಹೊರದಬ್ಬಿತು; ತನ್ನ 5ನೇ ಗೆಲುವು ಸಾಧಿಸಿ ಅಂಕವನ್ನು 10ಕ್ಕೆ ಹೆಚ್ಚಿಸಿಕೊಂಡಿತು. ಇದರೊಂದಿಗೆ ಐಪಿಎಲ್‌ ಇತಿಹಾಸದಲ್ಲಿ ಮೊದಲ ಬಾರಿಗೆ ಲೀಗ್‌ ಹಂತದ ಎಲ್ಲ ತಂಡಗಳೂ 10 ಅಂಕ ಸಂಪಾದಿಸಿದಂತಾಯಿತು!

ಡೆಲ್ಲಿ 2015ರಲ್ಲೂ ಅಂಕಪಟ್ಟಿತಯಲ್ಲಿ ತಳ ಕಂಡಿತ್ತು. ಅಂದಿನ ಲೀಗ್‌ ಹಂತದಲ್ಲಿ ಡೆಲ್ಲಿಗೆ ಜಯಿಸಲು ಸಾಧ್ಯವಾದದ್ದು 2 ಪಂದ್ಯ ಮಾತ್ರ.

ಈ ಬಾರಿಯ ಐಪಿಎಲ್‌ ಲೀಗ್‌ನಲ್ಲಿ ಅತ್ಯಧಿಕ ಸಂಖ್ಯೆಯ ಪಂದ್ಯಗಳು ಕೊನೆಯ ಓವರ್‌ನಲ್ಲಿ ಮುಗಿದವು. ಸ್ವಾರಸ್ಯವೆಂದರೆ, ಲೀಗ್‌ ಪಂದ್ಯಗಳಲ್ಲಿ ಒಂದೇ ಒಂದು “ಸೂಪರ್‌ ಓವರ್‌’ ದಾಖಲಾಗಲಿಲ್ಲ!

ಲೀಗ್‌ ಹಂತದ ಟಾಪ್‌-5 ಸಾಧಕರು
ಬ್ಯಾಟಿಂಗ್‌

1. ರಿಷಬ್‌ ಪಂತ್‌ (ಡೆಲ್ಲಿ) ರನ್‌: 684
2. ಕೇನ್‌ ವಿಲಿಯಮ್ಸನ್‌ (ಹೈದರಾಬಾದ್‌) ರನ್‌: 661
3. ಕೆ.ಎಲ್‌. ರಾಹುಲ್‌ (ಪಂಜಾಬ್‌) ರನ್‌: 659
4. ಅಂಬಾಟಿ ರಾಯುಡು (ಚೆನ್ನೈ) ರನ್‌: 586
5. ಜಾಸ್‌ ಬಟ್ಲರ್‌ (ರಾಜಸ್ಥಾನ್‌) ರನ್‌: 548

ಬೌಲಿಂಗ್‌
1. ಆ್ಯಂಡ್ರೂé ಟೈ (ಪಂಜಾಬ್‌) ವಿಕೆಟ್‌: 24
2. ಉಮೇಶ್‌ ಯಾದವ್‌ (ಆರ್‌ಸಿಬಿ) ವಿಕೆಟ್‌: 20
3. ಹಾರ್ದಿಕ್‌ ಪಾಂಡ್ಯ (ಮುಂಬೈ) ವಿಕೆಟ್‌: 18
4. ಟ್ರೆಂಟ್‌ ಬೌಲ್ಟ್ (ಡೆಲ್ಲಿ) ವಿಕೆಟ್‌: 18
5. ಜಸ್‌ಪ್ರೀತ್‌ ಬುಮ್ರಾ(ಮುಂಬೈ) ವಿಕೆಟ್‌: 17

Advertisement

Udayavani is now on Telegram. Click here to join our channel and stay updated with the latest news.

Next