ಮುಂಬೈ: ಟೀಂ ಇಂಡಿಯಾ ಮಾಜಿ ಆಟಗಾರ, ಮಿಸ್ಟರ್ ಐಪಿಎಲ್ ಎಂದೇ ಹೆಸರಾಗಿದ್ದ ಎಡಗೈ ಬ್ಯಾಟರ್ ಸುರೇಶ್ ರೈನಾ ಅವರು ಎಲ್ಲಾ ಮಾದರಿ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಹೀಗಾಗಿ ಇನ್ನು ಮುಂದೆ ಅವರು ಐಪಿಎಲ್ ನಲ್ಲೂ ಕಾಣಿಸಿಕೊಳ್ಳುವುದಿಲ್ಲ.
ಈ ಬಗ್ಗೆ ಟ್ವೀಟ್ ಮಾಡಿರುವ ಸುರೇಶ್ ರೈನಾ, “ಈ ದೇಶದ ಪರವಾಗಿ ಮತ್ತು ಉತ್ತರ ಪ್ರದೇಶ ರಾಜ್ಯದ ಪರವಾಗಿ ಆಡಿರುವುದು ನನಗೆ ಗೌರವದ ವಿಚಾರ. ನಾನು ಎಲ್ಲಾ ಮಾದರಿ ಕ್ರಿಕೆಟ್ ಗೆ ವಿದಾಯ ಹೇಳಲು ಇಚ್ಚೆ ಪಡುತ್ತೇನೆ. ಹೀಗಾಗಿ ಬಿಸಿಸಿಐ, ಉತ್ತರ ಪ್ರದೇಶ ರಾಜ್ಯ ಕ್ರಿಕೆಟ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜೀವ್ ಶುಕ್ಲಾ ಅವರಿಗೆ ಧನ್ಯವಾದ ಹೇಳಲಿಚ್ಛಿಸುತ್ತೇನೆ. ನನ್ನ ಮೇಲೆ ಭರವಸೆಯಿಟ್ಟ ಮತ್ತು ಸದಾ ಬೆಂಬಲ ಸೂಚಿಸಿದ ಅಭಿಮಾನಿಗಳಿಗೆ ಧನ್ಯವಾದಗಳು” ಎಂದಿದ್ದಾರೆ.
ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಮ್ಯಾಚ್ ವಿನ್ನರ್ ಆಗಿದ್ದ ರೈನಾ, 136.7ರ ಸರಾಸರಿಯಲ್ಲಿ 5528 ರನ್ ಗಳಿಸಿದ್ದಾರೆ. ಸುರೇಶ್ ರೈನಾ ಅವರು 2021ರ ಐಪಿಎಲ್ ನಲ್ಲಿ ವೈಯಕ್ತಿಕ ಕಾರಣಗಳಿಂದ ಆಡಿರಲಿಲ್ಲ. 2022ರ ಹರಾಜಿನಲ್ಲಿ ಅವರನ್ನು ಯಾವ ತಂಡವೂ ಖರೀದಿ ಮಾಡಿರಲಿಲ್ಲ.
ಇದನ್ನೂ ಓದಿ:ನೀನೆಲ್ಲಿ ನಡೆವೆ ದೂರ.. ಎಲ್ಲೆಲ್ಲೂ ನೀರೇ: ರಾಜಧಾನಿಯಲ್ಲಿ 23 ವರ್ಷಗಳ ಬಳಿಕ ಅತಿ ಹೆಚ್ಚು ಮಳೆ
Related Articles
ರೈನಾ ಅವರು 2019ರ ಆಗಸ್ಟ್ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದರು. ಆಪ್ತ ಮಹೇಂದ್ರ ಸಿಂಗ್ ಧೋನಿ ವಿದಾಯ ಹೇಳಿದ ಕೆಲವೇ ಕ್ಷಣಗಳಲ್ಲಿ ರೈನಾ ಕೂಡಾ ಘೋಷಣೆ ಮಾಡಿದ್ದರು. ಇದೀಗ ರೈನಾ ದೇಶಿಯ ಕ್ರಿಕೆಟ್ ಗೂ ರಾಜೀನಾಮೆ ಘೋಷಣೆ ಮಾಡಿದ್ದಾರೆ.
ಹೊಸ ನಿರ್ಧಾರ: ದೈನಿಕ ಜಾಗರಣ್ ಜೊತೆ ಮಾತನಾಡಿರುವ ರೈನಾ, “ ನಾನಿನ್ನೂ ಎರಡು ಮೂರು ವರ್ಷ ಕ್ರಿಕೆಟ್ ಆಡಲು ಬಯಸುತ್ತೇನೆ. ಸದ್ಯ ಉತ್ತರ ಪ್ರದೇಶ ತಂಡದಲ್ಲಿ ಉತ್ತಮ ಆಟಗಾರರಿದ್ದಾರೆ. ನಾನು ಉ.ಪ್ರದೇಶ ಕ್ರಿಕೆಟ್ ಸಂಸ್ಥೆಯಿಂದ ನಿರಾಕ್ಷೇಪಣಾ ಪತ್ರವನ್ನೂ ಪಡೆದಿದ್ದೇನೆ. ನಾನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮತ್ತು ರಾಜೀವ್ ಶುಕ್ಲಾಗೆ ನನ್ನ ನಿರ್ಧಾರವನ್ನು ತಿಳಿಸಿದ್ದೇನೆ. ನಾನು ಮುಂದೆ ವಿಶ್ವದ ಬೇರೆ ಬೇರೆ ಲೀಗ್ ಗಳಲ್ಲಿ ಆಡಲು ಬಯಸುತ್ತೇನೆ” ಎಂದರು.
ಸೆಪ್ಟೆಂಬರ್ 10ರಿಂದ ನಡೆಯಲಿರುವ ರೋಡ್ ಸೇಫ್ಟಿ ಸರಣಿಯಲ್ಲಿ ನಾನು ಆಡುತ್ತೇನೆ. ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತ್ತು ಯುಎಇ ದೇಶಗಳ ಫ್ರಾಂಚೈಸಿಗಳು ನನ್ನನ್ನು ಸಂಪರ್ಕ ಮಾಡಿದೆ. ಮುಂದಿನ ದಿನಗಳಲ್ಲಿ ನನ್ನ ನಿರ್ಧಾರ ತಿಳಿಸುತ್ತೇನೆ” ಎಂದು 35ರ ಹರೆಯದ ಸುರೇಶ್ ರೈನಾ ಹೇಳಿದರು.