Advertisement

ಎರಡು ವರ್ಷದಲ್ಲಿ ಆಡಳಿತ ಸುಧಾರಣೆ ಅರಿವಾಗಲಿದೆ: ಸುರೇಶ್‌ ಪ್ರಭು

02:30 AM Mar 27, 2017 | Team Udayavani |

ಬೆಂಗಳೂರು: ಆಡಳಿತದಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳುವ ಮೂಲಕ ದೇಶದಲ್ಲಿ ಬದಲಾವಣೆ ಮತ್ತು ಆಡಳಿತ ಸುಧಾರಣೆ ಪ್ರಕ್ರಿಯೆಗಳು ವೇಗವಾಗಿ ನಡೆಯುತ್ತಿದ್ದು, ಮುಂದಿನ ಎರಡು ವರ್ಷಗಳಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಗೂ ಇದು ಸ್ಪಷ್ಟವಾಗಿ ಕಾಣಿಸಿಕೊಳ್ಳಲಿದೆ ಎಂದು ಕೇಂದ್ರ ರೈಲ್ವೇ ಸಚಿವ ಸುರೇಶ್‌ ಪ್ರಭು ಹೇಳಿದ್ದಾರೆ. ತಮ್ಮಿಂದ ಆಯ್ಕೆಯಾದವರಿಂದ ದೇಶದ ಪ್ರತಿಯೊಬ್ಬರೂ ಉತ್ತಮ ಆಡಳಿತ ಬಯಸುತ್ತಾರೆ. ಇದನ್ನು ಅರ್ಥ ಮಾಡಿಕೊಂಡು ಪ್ರಧಾನಿ ನರೇಂದ್ರ ಮೋದಿ ಅವರು ಆಡಳಿತ ನಡೆಸುತ್ತಿದ್ದು, ಸಾಮಾಜಿಕ ಜಾಲತಾಣ ಮತ್ತು ಅಂತರ್ಜಾಲದ ಮೂಲಕ ಎಲ್ಲರನ್ನೂ ತಲುಪಿ ಅವರ ಅಭಿಪ್ರಾಯ ಮತ್ತು ಅದಕ್ಕೆ ಸರಕಾರ ಸ್ಪಂದಿಸುತ್ತಿರುವ ರೀತಿಯನ್ನು ವಿವರಿಸುತ್ತಿದ್ದಾರೆ. ಈ ಮೂಲಕ ಜನರೊಂದಿಗೆ ಸೇರಿ ಆಡಳಿತ ನಡೆಸುತ್ತಿದ್ದು, ಪಾರದರ್ಶಕತೆಗೆ ಇದೂ ಅನುಕೂಲವಾಗುತ್ತಿದೆ ಎಂದು ಅಭಿಪ್ರಾಯಪಟ್ಟರು. ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘದ (ಎಫ್ಕೆಸಿಸಿಐ) ಸಹಯೋಗದೊಂದಿಗೆ ಭಾರತ್‌ ನೀತಿ – ಕರ್ನಾಟಕ ತಂಡ ರವಿವಾರ ಆಯೋಜಿಸಿದ್ದ ಪ್ರಜಾಪ್ರಭುತ್ವ, ಸ್ವತ್ಛ ಆಡಳಿತ ಮತ್ತು ಸಾಮಾಜಿಕ ಜಾಲತಾಣ ಕುರಿತ ರಾಷ್ಟ್ರೀಯ ಸಮಾವೇಶದಲ್ಲಿ ಅವರು ಮಾತನಾಡಿದರು.

Advertisement

ರೈಲ್ವೇ ಇಲಾಖೆಯಲ್ಲಿ ಆಡಳಿತ ವಿಕೇಂದ್ರೀಕರಣ
ರೈಲ್ವೇ ಇಲಾಖೆಯಲ್ಲಿ ಆಡಳಿತ ವಿಕೇಂದ್ರೀಕರಣಕ್ಕೆ ಒತ್ತು ನೀಡಲಾಗುತ್ತಿದ್ದು, ಟೆಂಡರ್‌ ಪ್ರಕ್ರಿಯೆ ಅಂತಿಮಗೊಳಿಸುವುದು, ನೇಮಕಾತಿ ಪ್ರಕ್ರಿಯೆ ಸಹಿತ ಹಲವು ತೀರ್ಮಾನಗಳನ್ನು ಆಯಾ ವಿಭಾಗದ ಪ್ರಧಾನ ರೈಲ್ವೇ ಪ್ರಧಾನ ವ್ಯವಸ್ಥಾಪಕರ ಮಟ್ಟದಲ್ಲಿಯೇ ಅಂತಿಮಗೊಳಿಸುವಂತೆ ಸೂಚಿಸಲಾಗಿದೆ. ಸಣ್ಣಪುಟ್ಟ ವಿಚಾರಗಳ ಬಗ್ಗೆ ರೈಲ್ವೇ ಸಚಿವರು ಮತ್ತು ರೈಲ್ವೇ ಮಂಡಳಿ ನಿರ್ಧಾರ ತೆಗೆದುಕೊಳ್ಳಬೇಕಿಲ್ಲ. ಸ್ಥಳೀಯ ಅಧಿಕಾರಿಗಳಿಗೆ ಹೆಚ್ಚಿನ ಜವಾಬ್ದಾರಿ ನೀಡಲಾಗಿದೆ ಎಂದು ರೈಲ್ವೇ ಸಚಿವ ಸುರೇಶ್‌ ಪ್ರಭು ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮದ ಮೂಲಕ ಬರುವ ದೂರುಗಳು ಮತ್ತು ಸಲಹೆಗಳನ್ನು ಪಡೆದುಕೊಂಡು ರೈಲ್ವೇ ಇಲಾಖೆಯಲ್ಲಿಯೂ ಸಾಕಷ್ಟು ಸುಧಾರಣೆಗಳನ್ನು ತರಲಾಗಿದೆ. ಸಾಮಾಜಿಕ ಮಾಧ್ಯಮಗಳ ಮೂಲಕ ದೂರುಗಳನ್ನು ಸ್ವೀಕರಿಸಿ ಅತ್ಯಂತ ಕಡಿಮೆ ಅವಧಿಯಲ್ಲಿ ಪರಿಹರಿಸಲು ಕ್ರಮ ಕೈಗೊಳ್ಳಲಾಗಿದೆ. ವೈದ್ಯಕೀಯ ನೆರವು ಮತ್ತು ದೂರುಗಳಿಗೆ ಕ್ಷಿಪ್ರಗತಿಯಲ್ಲಿ ಸ್ಪಂದಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ದೂರುಗಳ ಬಗ್ಗೆ ಇಲಾಖೆ ದಾಖಲೆಗಳನ್ನೂ ಸಂಗ್ರಹಿಸಲು ಮುಂದಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next