ಬೆಳಗಾವಿ: ಗಡಿ ಭಾಗದ ರಾಜಕಾರಣದಲ್ಲಿ ಸುರೇಶ ಅಂಗಡಿ ಅಚ್ಚಳಿಯದೇ ಸದಾ ನೆನಪಿನಲ್ಲಿ ಉಳಿಯುವ ಹೆಸರು. ಯಾವುದೇ ವಿವಾದಕ್ಕೊಳಗಾಗದೆ ತಮ್ಮ ಇತಿಮಿತಿಯಲ್ಲಿ ರಾಜಕಾರಣ ಮಾಡುತ್ತ ಬಂದಿದ್ದ ಸುರೇಶ ಅಂಗಡಿ ತಮ್ಮ ಕಾರ್ಯಶೈಲಿ, ಜನರ ಜೊತೆಗಿನ ನಿಕಟ ಸಂಪರ್ಕ ಹಾಗೂ ಅನುಭವದ ಮೇಲೆ ಕೇಂದ್ರದಲ್ಲಿ ಬಹಳ ಮಹತ್ವದ ಜವಾಬ್ದಾರಿ ವಹಿಸಿಕೊಂಡಿದ್ದರು.
ಬೆಳಗಾವಿ ಎಂದಾಕ್ಷಣ ಇಲ್ಲಿ ಮರಾಠಿ ಭಾಷಿಕರ ಪ್ರಾಬಲ್ಯ. ಅದರಲ್ಲೂ ಚುನಾವಣೆಯ ಸಮಯದಲ್ಲಿ ಇವರೇ ನಿರ್ಣಾಯಕ ಮತದಾರರು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದರ ಮಧ್ಯೆ ಗಡಿ ಹಾಗೂ ಭಾಷಾ ವಿವಾದ ರಾಜಕಾರಣದ ಮೇಲೆ ಬಹಳ ಪ್ರಭಾವ ಬೀರಿದ್ದವು. ರಾಜಕಾರಣಿಗಳ ಸುತ್ತ ಈ ಎರಡೂ ಅಂಶಗಳು ಬಹಳ ಗಾಢವಾಗಿ ಸುತ್ತಿಕೊಂಡಿದ್ದವು. ಹೀಗಾಗಿ ಗಡಿ ವಿವಾದ ಹಾಗೂ ಬೆಳಗಾವಿ ರಾಜಕಾರಣಿಗಳು ಸದಾ ಸುದ್ದಿಯಲ್ಲಿರುತ್ತಿದ್ದವು.
2004 ರಲ್ಲಿ ಮೊದಲ ಬಾರಿಗೆ ಲೋಕಸಭೆ ಚುನಾವಣೆ ಎದುರಿಸಿದ ಸುರೇಶ ಅಂಗಡಿ ಆಗ ಗಡಿ ಹಾಗೂ ಭಾಷಾ ವಿಷಯಗಳನ್ನು ಬಹಳ ಸೂಕ್ಷ್ಮವಾಗಿ ಹಾಗೂ ಚಾಣಾಕ್ಷತನದಿಂದ ನಿಭಾಯಿಸಿದ್ದರು. ಯಾವ ಸಮಯದಲ್ಲೂ ವಿವಾದಾತ್ಮಕ ಹೇಳಿಕೆಯ ಗೊಡವಿಗೆ ಹೋಗದೆ ಕನ್ನಡ ಹಾಗೂ ಮರಾಠಿ ಭಾಷಿಕ ಜ®ರನ್ನು ಬಹಳ ವಿಶ್ವಾಸಕ್ಕೆ ತೆಗೆದುಕೊಂಡಿದ್ದರು. ಆಗ ಬದಲಾವಣೆ ಬಯಸಿದ್ದ ಬೆಳಗಾವಿ ಕ್ಷೇತ್ರಕ್ಕೆ ಸುರೇಶ ಅಂಗಡಿ ಹೊಸ ನಾಯಕರಾಗಿ ಉದಯರಾದರು.
2004 ರಿಂದ ಸತತ ನಾಲ್ಕು ಅವಧಿಯವರೆಗೆ ಸುರೇಶ ಅಂಗಡಿ ಹಿಂತಿರುಗಿ ನೋಡಲಿಲ್ಲ. ಭಾಷಾ ಸಮಸ್ಯೆಯನ್ನು ಬಹಳ ಜಾಗರೂಕತೆಯಿಂದ ನಿಭಾಯಿಸಿದ್ದರಿಂದ ಎಲ್ಲಿಯೂ ಸಮಸ್ಯೆ ಎದುರಾಗಲಿಲ್ಲ. ಆಗಾಗ ತಮ್ಮ ವಿರುದ್ಧ ಕನ್ನಡ ಭಾಷಾ ವಿರೋಧಿ ಎಂಬ ಕೂಗು ಹಾಗೂ ಆರೋಪ ಕೇಳಿಬಂದರೂ ಅದರಿಂದ ಸುರೇಶ ಅಂಗಡಿ ವಿಚಲಿತರಾಗಲಿಲ್ಲ ಬದಲಾಗಿ ತಮ್ಮ ವಿರೋಧಿಗಳನ್ನು ಇನ್ನಷ್ಟು ಹತ್ತಿರ ಮಾಡಿಕೊಂಡರು.
ಬಿಜೆಪಿ ಜೊತೆಗೆ ಕಾಂಗ್ರೆಸ್, ಎಂ ಇ ಎಸ್ ಹಾಗೂ ಶಿವಸೇನೆ ನಾಯಕರ ಜೊತೆ ಉತ್ತಮ ಸಂಬಂಧ ಬೆಳೆಸಿಕೊಂಡರು. ಇದು ಅಂಗಡಿ ಅವರ ರಾಜಕೀಯ ಸಾಧನೆ ಹಾಗೂ ಉನ್ನತ ಹುದ್ದೆಗೇರಲು ಬಹಳ ಸಹಾಯ ಮಾಡಿದವು.
ತಮ್ಮ ಸಂಸದರ ಅವಧಿಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಮೇಲೆ ಭಗವಾಧjಜ ಹಾರಿಸುವ ವಿಷಯದಲ್ಲಿ ಎಂ ಇ ಎಸ್ ಹಾಗು ಶಿವಸೇನೆ ಬಹಳ ದೊಡ್ಡ ರಾದ್ಧಾಂತ ಮಾಡಿದ್ದವು ಆಗ ಬೆಳಗಾವಿ ವಿಷಯ ಇಡೀ ದೇಶದ ಗಮನ ಸೆಳೆದಿತ್ತು. ಈ ಸಂದರ್ಭದಲ್ಲಿ ಸುರೇಶ ಅಂಗಡಿ ಪ್ರಬುದ್ಧ ರಾಜಕೀಯತನ ಪ್ರದರ್ಶಿಸಿದರು. ಯಾರಿಗೂ ಕೆಟ್ಟವರಾಗದೆ ವಿವಾದ ತಣ್ಣಗಾಗುವಂತೆ ನೋಡಿಕೊಂಡರು.
ಜಿಲ್ಲಾ ರಾಜಕಾರಣದಲ್ಲಿ ಸುರೇಶ ಅಂಗಡಿ ಅವರ ಪಾತ್ರ ಬಹಳ ಮಹತ್ವದ್ದು. ಪ್ರಭಾವಿ ನಾಯಕರಾದ ಜಾರಕಿಹೊಳಿ ಸಹೋದರರು, ಉಮೇಶ ಕತ್ತಿ ಸಹೋದರರು ಸೇರಿದಂತೆ ಪ್ರತಿಯೊಬ್ಬರ ಜೊತೆ ಅನ್ಯೋನ್ಯ ಸಂಬಂಧ ಹೊಂದಿದ್ದ ಸುರೇಶ ಅಂಗಡಿ ಜಿಲ್ಲೆಯ ರಾಜಕಾರಣದಲ್ಲಿ ಮಹತ್ವದ ನಿರ್ಣಯ ಕೈಗೊಳ್ಳುವಾಗ ಮುಂಚೂಣಿಯಲ್ಲಿರುತ್ತಿದ್ದರು. ಇದು ಅವರ ವ್ಯಕ್ತಿತ್ವದ ವಿಶೇಷ.