Advertisement

ಸುರತ್ಕಲ್‌: ಹಳೆ ಸಂತೆ ಮಾರುಕಟ್ಟೆ ತೆರವು

11:02 AM Mar 23, 2018 | |

ಸುರತ್ಕಲ್‌: ಇಲ್ಲಿಯ ಹಳೆಯ ಸಂತೆ ಮಾರುಕಟ್ಟೆಯನ್ನು ಗುರುವಾರ ಕೆಡಹುವ ಕಾರ್ಯ ಆರಂಭವಾಯಿತು. ಮುಂಜಾನೆ ಏಳು ಗಂಟೆಯ ಸುಮಾರಿಗೆ ಪೊಲೀಸರ ಬೆಂಗಾವಲಿನೊಂದಿಗೆ ನಡೆದ ಕಾರ್ಯಾಚರಣೆಯ ನೇತೃತ್ವವನ್ನು ಕಂದಾಯ ಇಲಾಖೆಯ ಸಹಾಯಕ ಆಯುಕ್ತೆ ಗಾಯತ್ರಿ ನಾಯಕ್‌ ವಹಿಸಿದ್ದರು.

Advertisement

ಮುಂಜಾನೆ ವ್ಯಾಪಾರಿಗಳು ಹಳೆಯ ಮಾರುಕಟ್ಟೆ ತೆರವಿಗೆ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ತೆರವು ಕಾರ್ಯಾಚರಣೆ ಮಾಹಿತಿ ತಿಳಿದು ಶಾಸಕ ಮೊಯಿದಿನ್‌ ಬಾವಾ ಹಾಗೂ ಕಾರ್ಪೊ ರೇಟರ್‌ ಪ್ರತಿಭಾ ಕುಳಾಯಿ ಸ್ಥಳಕ್ಕೆ ಆಗಮಿಸಿ ವ್ಯಾಪಾರಿಗಳು ತಮ್ಮ ಸಾಮಾನು ಸರಂಜಾಮುಗಳನ್ನು ಸ್ಥಳಾಂತರಗೊಳಿಸಲು ಅವಕಾಶ ನೀಡಬೇಕು ಎಂದು ಸೂಚಿಸಿದರಾದರೂ ಆಯುಕ್ತೆ ಇದಕ್ಕೆ ಒಪ್ಪಲಿಲ್ಲ. ಈಗಾಗಲೇ ಮಾ. 22ರಂದು ತೆರವು ನಡೆಯಲಿದೆ ಎಂದು ನೋಟಿಸ್‌ ನೀಡಲಾಗಿತ್ತು. ಬಹಳಷ್ಟು ವ್ಯಾಪಾರಿಗಳು ಈಗಾಗಲೇ ಸ್ಥಳಾಂತರಗೊಳಿಸಿದ್ದು, ಕಾರ್ಯಚರಣೆ ನಿಲ್ಲಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು.

ಮುಖಂಡರಾದ ಗಣೇಶ್‌ ಹೊಸಬೆಟ್ಟು, ಸತ್ಯಜಿತ್‌ ಸುರತ್ಕಲ್‌, ಶೋಭೇಂದ್ರ ಸಸಿಹಿತ್ಲು, ಯಶ್‌ಪಾಲ್‌ ಸಾಲ್ಯಾನ್‌, ವಚನ್‌, ನಯನಾ ಉಪಸ್ಥಿತರಿದ್ದು, ಆಯುಕ್ತರಿಗೆ ಪರಿಸ್ಥಿತಿಯ ಮನವರಿಕೆ ಮಾಡಿಕೊಡುವ ಯತ್ನ ನಡೆಸಿದರು. ಈ ಸಂದರ್ಭ ಪಾಲಿಕೆ ವಲಯಾಯುಕ್ತರಿಗೆ ಮೂವತ್ತೈದು ಮೀನು ಮಾರಾಟ ಮಾಡುವ ಮಹಿಳೆಯರಿದ್ದರೆ ತತ್‌ಕ್ಷಣ ಪರಿಶೀಲಿಸಿ ವ್ಯವಸ್ಥೆ ಮಾಡಲು ಸೂಚಿಸಿದರು.

ಕಾರ್ಯಾಚರಣೆ ಸಂದರ್ಭ ಸುರತ್ಕಲ್‌ ವಲಯಾಯುಕ್ತ ರವಿಶಂಕರ್‌, ಮುಖ್ಯ ಎಂಜಿನಿಯರ್‌ ಗಣೇಶ್‌, ಖಾದರ್‌, ಆರೋಗ್ಯ ಇಲಾಖೆಯ ಭಾಸ್ಕರ್‌ಉಪಸ್ಥಿತರಿದ್ದರು. ಸುರತ್ಕಲ್‌ ಠಾಣೆಯ ಇನ್‌ಸ್ಪೆಕ್ಟರ್‌ ರಾಮಕೃಷ್ಣ, ಮೂಲ್ಕಿ, ಪಣಂಬೂರು ಠಾಣೆಯ ಅಧಿಕಾರಿಗಳು, ಸಿಬಂದಿ ಭದ್ರತಾ ಕಾರ್ಯದಲ್ಲಿ ಭಾಗವಹಿಸಿದ್ದರು.

60 ಕೋ.ರೂ. ಕಾಮಗಾರಿ
ಪ್ರಥಮ ಹಂತದ 60 ಕೋಟಿ ರೂಪಾಯಿ ವೆಚ್ಚದಲ್ಲಿ ಪಾರ್ಕಿಂಗ್‌, ಬಸ್‌ ನಿಲ್ದಾಣ ಸಹಿತ ಮಾರುಕಟ್ಟೆ ಮಳಿಗೆ ಕಾಮಗಾರಿ ಆರಂಭವಾಗಲಿದೆ.

Advertisement

ಗಲಿಬಿಲಿಯಲ್ಲಿ ಸರಕು ಸ್ಥಳಾಂತರ
ಮನಪಾ ನೋಟಿಸ್‌ ನೀಡಿದ್ದರೂ ಕೆಲವು ವ್ಯಾಪಾರಿಗಳು ಸ್ಥಳಾಂತರ ಮಾಡಿರಲಿಲ್ಲ. ಬೆಳ್ಳಂಬೆಳಗ್ಗೆ ಎರಡು ಜೇಸಿಬಿಗಳು ಕಾರ್ಯಾಚರಣೆಯಲ್ಲಿ ತೊಡಗಿದಾಗ ವ್ಯಾಪಾರಿಗಳು ಗಲಿಬಿಲಿಯಲ್ಲಿ ಸಾಧ್ಯವಾದಷ್ಟು ಸರಕುಗಳನ್ನು ಸ್ಥಳಾಂತರಗೊಳಿಸಲು ಮುಂದಾದರು. 

ಜೇಬುಕಳ್ಳರಿಗೆ ಕಡಿವಾಣ
ಇಲ್ಲಿನ ಸಂತೆ ಸಂದರ್ಭ ದಿನಕ್ಕೆ ಕನಿಷ್ಠ ಹತ್ತು ಮೊಬೈಲ್‌ಗ‌ಳು ಕಳುವಾಗುತ್ತಿದ್ದವು. ಬೀದಿ ದೀಪದ ವ್ಯವಸ್ಥೆಯಿಲ್ಲದೆ ಮುಸ್ಸಂಜೆ ಸಮಯ ಮಾರುಕಟ್ಟೆಗೆ ಬರುವ ಗ್ರಾಹಕರು ಕಳ್ಳರ ಕೈಚಳಕಕ್ಕೆ ಸಿಲುಕಿ ಸಾವಿರಾರು ರೂ. ಮೌಲ್ಯದ ಮೊಬೈಲ್‌ ಕಳೆದುಕೊಳ್ಳುತ್ತಿದ್ದರು. ಇನ್ನು ಅದಕ್ಕೆ ಕಡಿವಾಣ ಬೀಳಲಿದೆ.

ಮಹಿಳಾ ಮೀನುಗಾರರ ವಿರೋಧ
ಮಾರುಕಟ್ಟೆಯಲ್ಲಿ ಒಟ್ಟು 35 ಮೀನು ಮಾರಾಟ ಮಾಡುವ ಮಹಿಳೆಯರಿದ್ದು ತಾತ್ಕಾಲಿಕ ವಿಭಾಗದಲ್ಲಿ ಕೇವಲ 20 ಮಂದಿಗೆ ಅವಕಾಶ ಕಲ್ಪಿಸಲಾಗಿದೆ. ಈಗಿನ ವ್ಯವಸ್ಥೆಯಲ್ಲಿ ವಯಸ್ಸಾದ ಮಹಿಳೆಯರು ಮೀನು ಮಾರಾಟ ಮಾಡುವ ಸ್ಥಿತಿಯಲ್ಲಿ ಇಲ್ಲ ಮಾತ್ರವಲ್ಲ ಐಸ್‌, ಮತ್ತಿತರ ಸರಕುಗಳನ್ನು ತರಲು ವಾಹನ ಬರಲಾಗುವುದಿಲ್ಲ. ಇದಕ್ಕೆ ಮೊದಲು ಯೋಜನೆ ರೂಪಿಸಿ ಕಾರ್ಯಗತಗೊಳಿಸಿ ಅಲ್ಲಿಯವರೆಗೆ ಹೋಗುವುದಿಲ್ಲ ಎಂದು ಧರಣಿ ಕುಳಿತರು.

Advertisement

Udayavani is now on Telegram. Click here to join our channel and stay updated with the latest news.

Next