ಸುರತ್ಕಲ್: ಸುರತ್ಕಲ್ ,ಕೃಷ್ಣಾಪುರ ,ಕಾವೂರು ಸೇರಿದಂತೆ ವಿವಿಧೆಡೆ ಬುಧವಾರ ಯುಗಾದಿ ಪ್ರಯುಕ್ತ ಬೆಳಗ್ಗೆ ಸಾಮಾನು ಖರೀದಿಗೆ ಜನರ ನೂಕು ನುಗ್ಗಲು ಕಂಡು ಬಂತು. ಪ್ರಧಾನಿ ಅವರು 21 ದಿನಗಳ ಕರ್ಫ್ಯೂ ಘೋಷಿಸಿದ್ದರಿಂದ ಮನೆಯಲ್ಲಿ ನಿತ್ಯದ ಸಾಮಾನು ದಾಸ್ತಾನಿಗೆ ಜನ ಮುಗಿ ಬಿದ್ದರು. ಇದರಿಂದ ಕಿರಣಿ ಅಂಗಡಿಯಿಂದ ಹಿಡಿದು ಸೂಪರ್ ಬಜಾರ್ವರೆಗೆ ಜನಸಂದಣಿ ಕಂಡು ಬಂತು.
ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನಿರ್ಲಕ್ಷ್ಯ!
ದಿನಸಿ ಖರೀದಿಗೆ ಬಂದ ಜನತೆ ಕೊರೊನಾ ಸೋಂಕು ತಗುಲದಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನಿರ್ಲಕ್ಷ್ಯ ವಹಿಸಿದ್ದರು. ಕೊರೊನಾ ತಡೆಗೆ ಜನ ಗುಂಪು ಸೇರುವುದನ್ನು ಸರಕಾರ ತಡೆಯಲು ಕರ್ಫ್ಯೂ ಘೋಷಣೆ ಮಾಡಿದ್ದರೂ ಬೆಳಗ್ಗೆಯಿಂದ 12ಗಂಟೆಯವರೆಗೆ ವಿನಾಯಿತಿ ನೀಡಿದ್ದು ಜನ ಮಾರುಕಟ್ಟೆಗಳಲ್ಲಿ ಸೇರಲು ಕಾರಣವಾಯಿತು.
ಕಾರ್ಮಿಕರಿಗೆ ರಜೆಯಿಲ್ಲ : ವಿವಿಧ ಸರಕಾರಿ ಬೃಹತ್ ಕಂಪನಿಗಳಲ್ಲಿ ರಜೆ ನೀಡದ ಕಾರಣ ನೂರಾರು ಕಾರ್ಮಿಕರು ಅನಿವಾರ್ಯವಾಗಿ ಕೆಲಸಕ್ಕೆ ತೆರಳುತ್ತಿದ್ದರು. ಬೈಕುಗಳಲ್ಲಿ ಸಂಚರಿಸುವಾಗ ಪೊಲೀಸರ ಲಾಠಿಗೂ ಮೈಯೊಡ್ಡುತ್ತಾ ಸಂಚರಿಸುವ ಸ್ಥಿತಿ ಬಂದೊದಗಿದೆ. ಗುತ್ತಿಗೆ ಆಧಾರಿತ ನೌಕರರಿಗೆ ಸರಿಯಾಗಿ ಸುರಕ್ಷತೆಯ ಮಾಸ್ಕ್, ಸಾನಿಟೈಸರ್ ಕೂಡ ಸಿಗುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.ಯುಗಾದಿ ಹಬ್ಬದ ಆಚರಣೆಗೆ ಒಂದಿಷ್ಟು ವಿನಾಯಿತಿ ನೀಡಿರುವ ಸರಕಾರ ಗುರುವಾರದಿಂದ ಗೃಹ ಬಂಧನ ಬಿಗಿಗೊಳಿಸುವ ಸಾಧ್ಯತೆಯಿದೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿಬಂದ ಕಾರಣ ಈ ನಿಟ್ಟಿನಲ್ಲಿ ಹೆಚ್ಚಿನ ಖರೀದಿಗೆ ಮುಂದಾದರು.