Advertisement

ಕುದಿಯುತ್ತಿರುವ ಕರಾವಳಿ: ಸುರತ್ಕಲ್ ನಲ್ಲಿ ದಾಳಿಗೊಳಗಾಗಿದ್ದ ಯುವಕ ಸಾವು

10:31 PM Jul 28, 2022 | Team Udayavani |

ಮಂಗಳೂರು : ಸುರತ್ಕಲ್ ನ ಹೃದಯ ಭಾಗದಲ್ಲಿ ಗುರುವಾರ ರಾತ್ರಿ ದುಷ್ಕರ್ಮಿಗಳಿಂದ ಮಾರಕಾಯುಧಗಳಿಂದ ದಾಳಿಗೊಳಗಾದ ಯುವಕ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದು, ಕೋಮು ಉದ್ವಿಗ್ನತೆ ಇನ್ನಷ್ಟು ತೀವ್ರವಾಗಿದ್ದು, ವ್ಯಾಪಕ ಕಟ್ಟೆಚ್ಚರ ವಹಿಸಲಾಗುತ್ತಿದೆ.

Advertisement

ಮಂಗಳ ಪೇಟೆಯ ಫಾಝಿಲ್ (23) ಎಂಬ ಯುವಕನ ಮೇಲೆ ತಲವಾರು ದಾಳಿ ನಡೆಸಲಾಗಿತ್ತು. ನಾಳೆ ಹುಟ್ಟು ಹಬ್ಬದ ಆಚರಣೆಗೆಂದು ಚಪ್ಪಲಿ ಮತ್ತು ಸ್ಮಾರ್ಟ್ ವಾಚ್ ಖರೀದಿಗೆ ಬಂದಿದ್ದ ಫಾಝಿಲ್ ಮೇಲೆ ರಾತ್ರಿ  ಅಂಗಡಿಯ ಎದುರಿನ ಜಗಲಿಯಲ್ಲೇ ಮಾರಕಾಯುಧಗಳಿಂದ ದಾಳಿ ನಡೆಸಿ ದುಷ್ಕರ್ಮಿಗಳು ಪರಾರಿಯಾಗಿದ್ದರು. ತಪ್ಪಿಸಿಕೊಳ್ಳಲು ಯತ್ನಿಸಿದರೂ ಸಾಧ್ಯವಾಗಲಿಲ್ಲ.

ಭಾರೀ ಪ್ರಮಾಣದಲ್ಲಿ ರಕ್ತ ಸ್ರಾವ ವಾಗಿದ್ದು, ಗಂಭೀರ ಸ್ಥಿತಿಯಲ್ಲಿರುವ ಫಾಝಿಲ್ ರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಶಾಸಕ, ಕಾಂಗ್ರೆಸ್ ನಾಯಕ ಮೊಯಿದ್ದೀನ್ ಬಾವಾ, ಇದು ಬೆಳ್ಳಾರೆಯಲ್ಲಿ ನಡೆದ ಪ್ರವೀಣ್ ನೆತ್ತರು ಕೊಲೆಗೆ ಪ್ರತೀಕಾರದ ಹತ್ಯೆ, ನಾಲ್ವರು ದುಷ್ಕರ್ಮಿಗಳು ಬಿಳಿ ಕಾರಿನಲ್ಲಿ ಬಂದು ಹತ್ಯೆ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗುತ್ತಿದ್ದು, ಪೊಲೀಸರು ಭಾರಿ ಕಟ್ಟೆಚ್ಚರ ವಹಿಸಿದ್ದಾರೆ. ಸಿಎಂ ಮಂಗಳೂರಿಗೆ ಭೇಟಿ ನೀಡಿ ಪ್ರವೀಣ್  ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಬೆಂಗಳೂರಿಗೆ ವಾಪಾಸಾಗುವ ಮುನ್ನವೇ ಕರಾವಳಿಯಲ್ಲಿ ನೆತ್ತರು ಹರಿದಿರುವುದು ಕಾನೂನು ಸುವ್ಯವಸ್ಥೆಯ ಕುರಿತು ಪ್ರಶ್ನೆ ಮೂಡಿಸುವಂತೆ ಮಾಡಿದೆ.

Advertisement

ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಬಜಪೆ, ಪಣಂಬೂರು, ಮುಲ್ಕಿ ಮತ್ತು ಸುರತ್ಕಲ್ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ರಾತ್ರಿ  8  ಗಂಟೆ ಸಮಯದಲ್ಲಿ ಕೃತ್ಯ ನಡೆದಿದ್ದು, ಇದಕ್ಕೆ ಕಾರಣರಾದವರನ್ನು ಆದಷ್ಟು ಬೇಗ ತನಿಖೆ ಮಾಡಿ ಪತ್ತೆ ಹಚ್ಚಲಾಗುತ್ತದೆ. ಸುಳ್ಳು ಸುದ್ದಿ ಹರಡುವುದು ಬೇಡ , ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪ್ರತ್ಯಕ್ಷ ದರ್ಶಿಗಳೊಂದಿಗೆ ಮಾತನಾಡಿ, ಆಸ್ಪತ್ರೆಗೂ ಭೇಟಿ ನೀಡಿದ್ದೇನೆ, ಯಾವೊಂದು ಕಾರಣಕ್ಕೆ ಕೃತ್ಯ ನಡೆದಿದೆ ಎನ್ನುವುದು ಸ್ಪಷ್ಟ ಇಲ್ಲ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next