Advertisement

ಸುರತ್ಕಲ್‌: ನದಿಯಲ್ಲಿ ಮುಳುಗಿ ಯುವಕ ಸಾವು

12:07 PM Oct 05, 2017 | |

ಸುರತ್ಕಲ್‌: ಸೂರಿಂಜೆ ಶಿಬರೂರು ಬಳಿ ನಂದಿನಿ ನದಿಯಲ್ಲಿ ಸ್ನೇಹಿತರೊಂದಿಗೆ ಈಜಲು ತೆರಳಿದ ಯುವಕನೋರ್ವ ಮುಳುಗಿ ಸಾವನ್ನಪ್ಪಿದ ಘಟನೆ ಮಂಗಳವಾರ ಸಂಜೆ ಸಂಭವಿಸಿದೆ.

Advertisement

ಕೃಷ್ಣಾಪುರದ ನಿವಾಸಿ ಮಕ್ಸೂದ್‌ (25)ಮೃತಪಟ್ಟವರು. ಶಿಬರೂರು ದೇವಸ್ಥಾನದ ಹಿಂಭಾಗದಲ್ಲೇ ನದಿ ಹರಿಯುತ್ತಿದ್ದು ಈಜಲು ತೆರಳಿದ್ದರು ಎನ್ನಲಾಗಿದೆ. ರಾತ್ರಿ ಈತನ ಸಹವರ್ತಿಗಳು ಮನೆಗೆ ವಾಪಸಾಗಿದ್ದು ಮಕ್ಸೂದ್‌ ಬಂದಿರಲಿಲ್ಲ. ಈತನ ಹೆತ್ತವರು  ವಿಚಾರಿಸಿದಾಗ ಸರಿಯಾಗಿ ಮಾಹಿತಿ ನೀಡಿರಲಿಲ್ಲ. ತತ್‌ಕ್ಷಣ ಸುರತ್ಕಲ್‌ ಪೊಲೀಸ್‌ ಠಾಣೆಗೆ ಕಾಣೆಯಾದ ದೂರು ನೀಡಿ ಮಗನನ್ನು ಹುಡುಕಿಕೊಡುವಂತೆ ಮನವಿ ಮಾಡಿದರು. ತನಿಖೆ ಆರಂಭಿಸಿದ ಪೊಲೀಸರು ಸ್ನೇಹಿತರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಶಿಬರೂರು ನಂದಿನಿ ನದಿಯಲ್ಲಿ ಈಜಲು ತೆರಳಿದ ಮಾಹಿತಿ ನೀಡಿದ ಮೇರೆಗೆ ರಾತ್ರಿಯೇ ತಣ್ಣೀರುಬಾವಿ ಮುಳುಗು ತಜ್ಞರ ಸಹಿತ ಹುಡುಕಾಟ ಆರಂಭಿಸಿದ್ದರು. 

ರಾತ್ರಿಯಾದ ಬಳಿಕ ಹುಡುಕಾಟ ತಾತ್ಕಾಲಿಕವಾಗಿ ನಿಲ್ಲಿಸಿ ಬುಧವಾರ ಮುಂಜಾನೆ ಮತ್ತೆ ರಬ್ಬರ್‌ ಬೋಟ್‌, ಆಕ್ಸಿಜನ್‌  ಸಹಿತ ಪರಿಕರಗಳೊಂದಿಗೆ ನದಿಯಲ್ಲಿ ಹುಡುಕಾಟ ಆರಂಭಿಸಲಾಯಿತು. ಅಗ್ನಿಶಾಮಕ ದಳದ ಸಿಬಂದಿಯೂ ಶೋಧ ಕಾರ್ಯದಲ್ಲಿ ಜತೆಗಿದ್ದರು.

ನದಿಯಲ್ಲಿ ವಾಚು, ಮೊಬೈಲ್‌ ಪತ್ತೆ
ತಣ್ಣೀರುಬಾವಿಯ ಯುವ ಮುಳುಗು ತಜ್ಞರು ಮಕ್ಸೂದ್‌ಗಾಗಿ ಶೋಧ ಮುಂದುವರಿಸಿದಾಗ ಈಜಲು ಇಳಿದ ಸ್ಥಳದಲ್ಲಿ ಮೊಬೈಲ್‌ ಹಾಗೂ ವಾಚ್‌ ಪತ್ತೆಯಾಯಿತು. ಅದೇ ಸ್ಥಳದಲ್ಲಿ ಮತ್ತೆ  ಶೋಧ ಆರಂಭಿಸಿದರೂ ದೇಹ ಪತ್ತೆಯಾಗಲಿಲ್ಲ. ಶಿಬರೂರು ಕಿನ್ನಿಗೋಳಿ ಸಂಪರ್ಕಿಸುವ ಸೇತುವೆ ಅಡಿಭಾಗದವರೆಗೆ ಮುಳುಗು ತಜ್ಞರು ಶೋಧ ನಡೆಸಿದರು. 

ಕೊನೆಗೂ ದೊರಕಿತು ಮೃತದೇಹ
ಶೋಧ ಕಾರ್ಯವನ್ನು ಬುಧವಾರ ಅನ್ನ ನೀರು ಇಲ್ಲದೆ ಮುಳುಗು ತಜ್ಞರು ನಿರಂತರವಾಗಿ ಮುಂದುವರಿಸಿದಾಗ ಈಜಲು ಇಳಿದ ಜಾಗದಿಂದ ಕೆಲವೇ ಮೀಟರು ಅಂತರದ ಕೆಳಭಾಗದಲ್ಲಿ ಮಕ್ಸೂದ್‌ ಮತದೇ ಪತ್ತೆಯಾಯಿತು. ತತ್‌ಕ್ಷಣ ಆ್ಯಂಬುಲೆನ್ಸ್‌  ಮೂಲಕ ವೆನಾಕ್‌ ಆಸ್ಪತ್ರೆಗೆ ಪೋಸ್ಟ್‌ ಮಾರ್ಟಮ್‌ಗಾಗಿ ಕೊಂಡೊಯ್ಯಲಾಯಿತು. ಈಜಲು ತೆರಳಿದ ಸಂದರ್ಭ ಕಾಲು ಜಾರಿ ಬಿದ್ದರೆ ಎಂಬುದು ವಿಚಾರಣೆಯಿಂದ ತಿಳಿದು ಬರಬೇಕಿದೆ. ಹಡುಕಾಟದ ವೇಳೆ ಸಾಕಷ್ಟು ಮಂದಿ ನದಿ ದಡದಲ್ಲಿ ಸೇರಿದ್ದರಿಂದ ಬಿಗು ಪೊಲೀಸ್‌ ಬಂದೋಬಸ್ತ್ ಮಾಡಲಾಯಿತು.

Advertisement

ಸ್ನೇಹಿತರ ಹೇಳಿಕೆ
ಅನುಮಾನಾಸ್ಪದ ವರ್ತನೆಯ ಮೇರೆಗೆ ಈತನ ಜತೆ ತೆರಳಿದ್ದ ನಾಲ್ಕು ಮಂದಿ ಸ್ನೇಹಿತರನ್ನು ಸುರತ್ಕಲ್‌ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ವೃತ್ತಿಯಲ್ಲಿ ಚಾಲಕನಾಗಿದ್ದ ಮಕ್ಸೂದ್‌ ಹಾಗೂ ಸ್ನೇಹಿತರು ಈಜಲು ತೆರಳುವ ಮುನ್ನ ಕಾನ ಬಳಿಯ ಬಾರ್‌ ಒಂದರಲ್ಲಿ ಮದ್ಯ ಸೇವಿಸಿ ಬಳಿಕ ಊಟ ಮಾಡಿ ಹೋಗಿದ್ದೆವು. ಶಿಬರೂರು ಬಳಿ ನಂದಿನಿ ನದಿಯಲ್ಲಿ ಈಜಲು ತೆರಳಿದ ಸಂದರ್ಭ ಈಜಲು ಗೊತ್ತಿದೆಯೆ ಎಂದು ವಿಚಾರಿಸಿದಾಗ ತಿಳಿದಿದೆ ಎಂದು ಹೇಳಿದ್ದಾನೆ.ಅಲ್ಲಿನ ಆಳದ ಬಗ್ಗೆ ಅರಿವಿಲ್ಲದೆ ಹಾಗೂ ಈಜು ಪರಿಣಿತನಲ್ಲದ  ಮಕ್ಸೂದ್‌  ನೀರಿಗೆ ಹಾರಿದ ಸಂದರ್ಭ ಮುಳುಗೇಳುತ್ತಿದ್ದಾಗ ಸಹಾಯ ಮಾಡಲು ಧಾವಿಸಿದರೂ ಪ್ರಯತ್ನ ಯಶಸ್ವಿಯಾಗಲಿಲ್ಲ ಎಂದು ವಿಚಾರಣೆ ವೇಳೆ ಸ್ನೇಹಿತರು ಮಾಹಿತಿ ನೀಡಿದ್ದಾರೆ

ಘಟನಾ ಸ್ಥಳಕ್ಕೆ ಮಂಗಳೂರು ಪೊಲೀಸ್‌ ಆಯುಕ್ತ ಸುರೇಶ್‌, ಶಾಸಕ ಮೊದಿನ್‌ ಬಾವಾ, ಕಾರ್ಪೊರೇಟರ್‌ ಅಯಾಝ್ ಮತ್ತಿತರರು ಭೇಟಿ ನೀಡಿದರು.

ಪಣಂಬೂರು ವಿಭಾಗ ಎಸಿಪಿ ರಾಜೇಂದ್ರ, ಸುರತ್ಕಲ್‌ ಠಾಣಾ ಪಿಐ ಚೆಲುವರಾಜು,  ಪಿಐ ಅನಂತಪದ್ಮನಾಭ ಮತ್ತಿತರರು ಸ್ಥಳದಲ್ಲಿದ್ದು ಪತ್ತೆಗಾಗಿ ಸಹಕರಿಸಿದರು. ಮುಂಜಾಗ್ರತಾ ಕ್ರಮವಾಗಿ ಸುರತ್ಕಲ್‌, ಕಾಟಿಪಳ್ಳ, ಕೃಷ್ಣಾಪುರದಲ್ಲಿ ಮೀಸಲು ಪಡೆ ಭದ್ರತಾ ಪಡೆಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next