ಸುರತ್ಕಲ್: ಹೆದ್ದಾರಿ ನಿಯಮಗಳನ್ನು ಗಾಳಿಗೆ ತೂರಿ ಸುರತ್ಕಲ್ ಎನ್‌ಐಟಿಕೆ ಬಳಿ ಟೋಲ್‌ಗೇಟ್ ನಿರ್ಮಿಸಲಾಗಿದ್ದು ವಿಲೀನ ಇಲ್ಲವೆ ರದ್ದು ಮಾಡುವ ಜನಪ್ರತಿನಿಧಿಗಳ ಭರವಸೆಯ ಮಹಾಪೂರಗಳ ನಡುವೆ ಮತ್ತೆ ವಿಸ್ತರಣೆ ಭಾಗ್ಯ ದೊರೆತಿದೆ.
ಮೂರು ತಿಂಗಳ ಅವಧಿಗೆ ಉತ್ತರ ಪ್ರದೇಶ ಮೂಲದ ಮಾಲಕತ್ವದ ಎ.ಕೆ ಕನ್ಸ್‌ಟ್ರಕ್ಷನ್ ಸಂಸ್ಥೆ ಗುತ್ತಿಗೆ ಪಡೆದಿದೆ.
ಜನರ ತೀವ್ರ ವಿರೋಧದ ನಡುವೆ ಒತ್ತಾಯಪೂರ್ವಕವಾಗಿ ಹೇರಲ್ಪಟ್ಟ ಈ ಟೋಲ್ ಗೇಟ್ 2014ರಲ್ಲಿ ಆರಂಭವಾಗಿ ಇದುವರೆಗೆ ಪ್ರತಿಭಟನೆಯ ನಡುವೆ ಮುಂದುವರಿದಿದೆ. ಕಳೆದ ಬಾರಿ ದಿನಕ್ಕೆ 11.60 ಲಕ್ಷ ರೂ. ಗುತ್ತಿಗೆ ನೀಡಲಾಗಿದ್ದು ಇದೀಗ ಕೊರೊನಾ ನಡುವೆ ಆದಾಯದ ಗುರಿಯಲ್ಲಿ ದಿನಕ್ಕೆ ತಲಾ 1 ಲಕ್ಷ. ರೂ ಇಳಿಕೆಯಾಗಿದೆ. 10.37ಲಕ್ಷ ರೂ. ದಿನದ ಆದಾಯವನ್ನು ಹೆದ್ದಾರಿ ಇಲಾಖೆಗೆ ಗುತ್ತಿಗೆದಾರ ಸಂಗ್ರಹಿಸಿ ಜಮಾ ಮಾಡಬೇಕಿದೆ.
ಈಗಾಗಲೇ ಸುರತ್ಕಲ್ ಟೋಲ್ ಗೇಟ್ ದುಬಾರಿಯಾಗಿದ್ದು,ಒಟ್ಟು ಈ ಭಾಗದ ಹೆದ್ದಾರಿ ನಿರ್ಮಾಣಕ್ಕೆ 360 ಕೋಟಿ ವ್ಯಯಿಸಲಾಗಿತ್ತು.ಇದೀಗ ಹೆಚ್ಚುವರಿಯಾಗಿ ಕೂಳೂರು 66ಕೋಟಿ ರೂ. ,ಕೆಪಿಟಿ ಬಳಿ ಅಂದಾಜು ಸೇತುವೆ ವೆಚ್ಚ 24ಕೋಟಿ ರೂ.ವೆಚ್ಚವಾಗಲಿದ್ದು ವಾಹನ ಸವಾರರಿಗೆ ಇದರ ನಿರ್ವಹಣಾ ಭಾರ ಬೀಳುವುದರಲ್ಲಿ ಸಂಶಯವಿಲ್ಲ.ಕನಿಷ್ಠ 60 ಕಿ.ಮೀ ಅಂತರದ ನಡುವೆ ಟೋಲ್‌ಗೇಟ್ ಇರಬೇಕೆಂಬ ನಿಯಮವಿದ್ದರೂ ಸುರತ್ಕಲ್, ಹೆಜಮಾಡಿ ನಡುವಿನ ಕನಿಷ್ಠ 11 ಕಿ.ಮೀ ಅಂತರದಲ್ಲಿ ಟೋಲ್‌ಗೇಟ್ ನಿರ್ಮಾಣವಾಗಿದೆ.
ಮೂಲಸೌಕರ್ಯವಿಲ್ಲ
ಇಲ್ಲಿನ ಟೋಲ್ ಗೇಟ್ ಹೆಸರಿಗೆ ಮಾತ್ರ ಇರುವಂತಿದ್ದು ಶೌಚಾಲಯವಿಲ್ಲ, ವಾಹನ ಚಾಲಕರಿಗೆ ವಿಶ್ರಾಂತಿಗೆ ಸ್ಥಳಾವಕಾಶವಿಲ್ಲ. ಈಗಿನ ಹೊಸ ಗುತ್ತಿಗೆದಾರರು ಇಲ್ಲಿನ ಟೋಲ್ ನೌಕರರಿಗೆ ಸಮವಸ್ತ್ರ ನೀಡಿಲ್ಲ.ಹೀಗಾಗಿ ಹಣ ವಸೂಲಿಗೆ ಯಾರು ನಿಂತಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಟೋಲ್‌ಗೇಟನ್ನು ವಿದ್ಯುತ್ ವ್ಯವಸ್ಥೆ ಇಲ್ಲದೆ ಕತ್ತಲೆಯಲ್ಲಿಯೇ ದಾಟುವಂತಾಗಿದೆ. ಹೀಗಾಗಿ ಸಿಸಿ ಟಿವಿಯ ಅಗತ್ಯ ದೃಶ್ಯಗಳು ತುರ್ತು ಸಂದರ್ಭ ಸಿಗಲು ಸಾಧ್ಯವಾಗದಂತಾಗಿದೆ.