Advertisement

Surathkal: ಯಕ್ಷಗಾನಕ್ಕೆ ಅಗರಿ ಶ್ರೀನಿವಾಸ, ರಘುರಾಮ ಭಾಗವತರ ಸೇವೆ ಸ್ಮರಣೀಯ

12:50 AM Jul 29, 2024 | Team Udayavani |

ಸುರತ್ಕಲ್‌: ಅಗರಿ ಪ್ರಶಸ್ತಿ, ಅಗರಿ ರಘುರಾಮ ಸಮ್ಮಾನ, ಅಗರಿ ಸಂಸ್ಮರಣೆ ಕಾರ್ಯಕ್ರಮ ರವಿವಾರ ಹೊಸಬೆಟ್ಟು ನವಗಿರಿ ಸಭಾಭವನದಲ್ಲಿ ಜರಗಿತು.

Advertisement

ಪ್ರತಿಷ್ಠಿತ ಅಗರಿ ಪ್ರಶಸ್ತಿಯನ್ನು ಯಕ್ಷಗಾನ ಭಾಗವತ ಪುತ್ತಿಗೆ ರಘುರಾಮ ಹೊಳ್ಳ ಅವರಿಗೆ ಪ್ರದಾನಿಸಲಾಯಿತು. ಅಗರಿ ರಘುರಾಮ ಸಮ್ಮಾನ ಪುರಸ್ಕಾರವನ್ನು ಉಡುಪಿಯ ಕಲೆ ಮತ್ತು ಸಮಾಜ ಸೇವಾ ಸಂಸ್ಥೆ ಯಕ್ಷಗಾನ ಕಲಾರಂಗಕ್ಕೆ ನೀಡಿ ಗೌರವಿಸಲಾಯಿತು.

ಸಮಾರಂಭದಲ್ಲಿ ಆಶೀರ್ವಚನ ನೀಡಿದ ಹರಿನಾರಾಯಣ ದಾಸ ಆಸ್ರಣ್ಣ ಅವರು, ಯಕ್ಷಗಾನ ರಂಗಕ್ಕೆ ಅಗರಿ ಶ್ರೀನಿವಾಸ ಭಾಗವತರು ಹಾಗೂ ರಘುರಾಮ ಭಾಗವತರು ನೀಡಿದ ಸೇವೆ ಸ್ಮರಣೀಯ. ಶ್ರೀ ದೇವೀ ಮಹಾತ್ಮೆ ಸಾವಿರಾರು ಸೇವೆಯನ್ನು ಕಂಡಿದೆ. ಕವಿ, ನಿರ್ದೇಶಕರಾಗಿ ಯಕ್ಷಗಾನವನ್ನು ಬೆಳೆಸಿದ ಅಗರಿ ಶೈಲಿ ಇಂದಿಗೂ ಉಳಿದುಕೊಂಡಿರುವುದು ಅವರ ಪ್ರಸಿದ್ಧಿಗೆ ಸಾಕ್ಷಿಯಾಗಿದೆ ಎಂದರು. ಪ್ರಶಸ್ತಿ ಸ್ವೀಕರಿಸಿದ ಪುತ್ತಿಗೆ ರಘುರಾಮ ಹೊಳ್ಳರು, ಅಗರಿ ಪ್ರಶಸ್ತಿ ನನಗೆ ಆಶೀರ್ವಾದವಾಗಿ ಲಭಿಸಿದೆ ಎಂದು ಭಾವಿಸಿದ್ದೇನೆ ಎಂದರು.

ವಿದುಷಿ ಸುಮಂಗಲಾ ರತ್ನಾಕರ್‌ ಅಗರಿ ಸಂಸ್ಮರಣೆ ಹಾಗೂ ವಾದಿರಾಜ ಕಲ್ಲೂರಾಯ ಅಭಿನಂದನಾ ನುಡಿಗಳ ನ್ನಾಡಿದರು. ಅಗರಿ ರಾಘವೇಂದ್ರ ರಾವ್‌ ಪ್ರಾಸ್ತಾವಿಕ ಮಾತುಗಳನ್ನಾಡಿ, ಶ್ರೀದೇವಿ ಮಹಾತ್ಮೆಯನ್ನು ಗಿನ್ನೆಸ್‌ ದಾಖಲೆಗೆ ಸೇರಿಸುವ ಪ್ರಯತ್ನ ಮಾಡಲಾಗುತ್ತಿದೆ. ಯಕ್ಷಗಾನದ ಬೆಳವಣಿಗೆಗೆ ನಮ್ಮಿಂದಾದ ಸೇವೆಯನ್ನು ವೇದಿಕೆಯ ಮೂಲಕ ಮಾಡಿಕೊಂಡು ಬರಲಾಗುತ್ತಿದೆ ಎಂದರು.

ಉದ್ಯಮಿ ಶ್ರೀಪತಿ ಭಟ್‌ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಶ್ರೀಕಾಂತ್‌ ಭಟ್‌ ಕುಮಟಾ, ಗುರುರಾಜ ಆಚಾರ್‌
ಹೊಸಬೆಟ್ಟು, ಪೆರ್ಮುದೆ ಸ.ಹಿ. ಶಾಲಾ ಸಂಚಾಲಕ ರಮೇಶ್‌ ರಾವ್‌, ಕಲಾ ರಂಗದ ಗಂಗಾಧರ ರಾವ್‌, ಯುವ ಚೇತನ ಸಂಸ್ಥೆ ಅಧ್ಯಕ್ಷ ಪ್ರಶಾಂತ್‌ ರಾವ್‌ ಎಚ್‌. ಮತ್ತಿತರರು ಉಪಸ್ಥಿತರಿದ್ದರು. ಪವನ್‌ ಮೈರ್ಪಾಡಿ ನಿರೂಪಿಸಿದರು. ಶ್ರೀನಿವಾಸ್‌ ಕುಳಾಯಿ ವಂದಿಸಿದರು.

Advertisement

ಯುವ ಚೇತನ ಹೊಸಬೆಟ್ಟು ಇದರ 31ನೇ ವಾರ್ಷಿಕೋತ್ಸವದ ಅಂಗವಾಗಿ ಸಂಘದ ಸಾಧಕ ಸದಸ್ಯರಾದ ನಿಧಿಶ ಹೊಸಬೆಟ್ಟು. ರಾಘವೇಂದ್ರ ಎಚ್‌.ವಿ., ರಾಕೇಶ್‌ ಹೊಸಬೆಟ್ಟು ಅವರನ್ನು ಅಭಿನಂದಿಸಲಾಯಿತು. ವಿದ್ಯಾರ್ಥಿ ವೇತನ ವಿತರಣೆ, ಪ್ರತಿಭಾ ಪುರಸ್ಕಾರ, ಅಭಿನಂದನಾ ಸಮಾರಂಭ ಹಾಗೂ ಯಕ್ಷಗಾನ ಬಯಲಾಟ ಕಾರ್ಯಕ್ರಮವು ನೆರವೇರಿತು.

Advertisement

Udayavani is now on Telegram. Click here to join our channel and stay updated with the latest news.

Next