ಸುರಪುರ: ಕುಡಿಯುವ ನೀರಿನ ಸಮಸ್ಯೆ, ಬೀಜ ಗೊಬ್ಬರ ವಿತರಣೆ, ನೆರೆ ಪರಿಹಾರ, ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನ, ವಿವಿಧ ವಸತಿ ಯೋಜನೆಗಳ ಸ್ಥಿತಿಗತಿ ಕುರಿತಂತೆ ಪ್ರಮುಖ ವಿಷಯಗಳ ಚರ್ಚೆಗೆ ಪ್ರಮುಖ ವೇದಿಕೆಯಾಗಬೇಕಿದ್ದ ತಾಪಂ ಸಾಮಾನ್ಯ ಸಭೆ ನೀರಸವಾಗಿ ಮುಕ್ತಾಯಗೊಂಡಿತು.
ನಗರದ ತಾಪಂ ಕಚೇರಿ ಸಭಾಂಗಣದಲ್ಲಿ ಶಾಸಕ ನರಸಿಂಹ ನಾಯಕ ನೇತೃತ್ವ, ಅಧ್ಯಕ್ಷೆ ಶಾರದಾ ಬೇವಿನಾಳ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಂದ ಶಾಸಕರಿಗೆ ದೂರವಾಣಿ ಕರೆ ಬಂದಿತು. ತುರ್ತಾಗಿ ಬೆಂಗಳೂರಿಗೆ ಬರುವಂತೆ ಸಿಎಂ ಸೂಚಿಸಿದ್ದಾರೆ.
ಸಭೆ ಮುಂದುವರಿಸುವಂತೆ ತಾಪಂ ಅಧ್ಯಕ್ಷೆ ಮತ್ತು ಇಒ ಅವರಿಗೆ ಸೂಚಿಸಿ ನಿರ್ಗಮನಕ್ಕೆ ಕ್ಷಮೆ ಇರಲಿ ಎಂದು ಹೇಳಿ ಶಾಸಕರು ತೆರಳಿದರು.
ನಿರ್ಗಮನಕ್ಕೂ ಮುನ್ನಾ ಶಾಸಕ ರಾಜೂಗೌಡ ಕೃಷಿ ಇಲಾಖೆ ಮಾಹಿತಿ ಪಡೆದು ತಿಂಥಣಿ ಗ್ರಾಮದಲ್ಲಿ ನೆರೆ ಹಾವಳಿ ಪರಿಹಾರದಲ್ಲಿ ತಾರಮ್ಯವಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಕೃಷಿ ಇಲಾಖೆಯವರು ಪಾರದರ್ಶಕವಾಗಿ ಮತ್ತೊಮ್ಮೆ ಸರ್ವೇಮಾಡಿ ನೈಜ ವರದಿ ನೀಡಬೇಕು. ಯಾರೊಬ್ಬ ಫಲಾನುಭವಿಗಳು ಕೂಡ ಪರಿಹಾರದಿಂದ ವಂಚಿತರಾಗದಂತೆ ಎಚ್ಚರಿಕೆ ವಹಿಸಿಬೇಕು ಎಂದು ಸಲಹೆ ನೀಡಿದರು.
ಕವಡಿಮಟ್ಟಿ, ಗುಡಿಹಾಳ(ಜೆ), ದೇವಾಪುರ, ಶೆಳ್ಳಗಿ, ಮುಷ್ಠಳ್ಳಿ ಸೇರಿದಂತೆ ಇನಿತರೆ ಗ್ರಾಮಗಳಲ್ಲಿ ಮಳೆ ಗಾಳಿಗೆ ಭತ್ತ ನೆಲಕಚ್ಚಿದೆ. ಈ ಕುರಿತು ಸರ್ವೇ ಮಾಡಬೇಕು. ಪ್ರಧಾನಂತ್ರಿ ಫಸಲ್‌ಬಿಮಾ ಯೋಜನೆಯಡಿ ಕೈಗೊಳ್ಳುತ್ತಿರುವ ಬೆಳೆ ಸಮೀಕ್ಷೆಯನ್ನು ಪಾರದರ್ಶಕವಾಗಿ ಮಾಡಬೇಕು. ಎಲ್ಲಿಯೋ ಕುಳಿತು ಸರ್ವೇ ವರದಿ ನೀಡಿದರೆ ಸಹಿಸಲಾಗದು. ಇದರಿಂದ ರೈತರು ತೊಂದರೆ ಎದುರಿಸುವಂತಾಗುತ್ತದೆ. ಹೀಗಾಗಿ ಅಧಿಕಾರಿಗಳು ಖುದ್ದಾಗಿ ಜಮೀನಗಳಿಗೆ ತೆರಳಿ ಬೆಳೆ ಸಮೀಕ್ಷೆ ಮಾಡಬೇಕು ಎಂದು ತಾಕೀತು ಮಾಡಿದರು.
ನಾರಾಯಣಪುರ ಮತ್ತು ಆಲಮಟ್ಟಿ ಎರಡು ಜಲಾಶಯಗಳಲ್ಲಿ ಸಾಕಷ್ಟು ನೀರಿನ ಲಭ್ಯತೆ ಇದೆ. 2ನೇ ಬೆಳೆಗೆ ನೀರು ದೊರೆಯುತ್ತದೆ. ರೈತರು ಸಲಹಾ ಸಮಿತಿ ನಿರ್ಧಾರಕ್ಕಾಗಿ ಹಾದಿ ಕಾಯುತ್ತ ಕುಳಿತುಕೊಳ್ಳುವ ಅಗತ್ಯವಿಲ್ಲ. ಕಾಲಹರಣ ಮಾಡದೆ 2ನೇ ಬೆಳೆ ಬಿತನೆಗೆ ಸಿದ್ಧತೆ ಮಾಡಿಕೊಳ್ಳಬೇಕು. ಈ ಕುರಿತು ತಾಪಂ ಸದಸ್ಯರು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ರೈತರಿಗೆ 2ನೇ ಬೆಳೆ ಬಿತ್ತಲು ತಿಳಿ ಹೇಳಬೇಕು ಎಂದು ಸೂಚಿಸಿದರು. ಉಪಾಧ್ಯಕ್ಷೆ ಮಂಜುಳಾ ಸಾಹೇಬಗೌಡ, ಇಒ ಅಮರೇಶ ಇದ್ದರು.