Advertisement
ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಅಧ್ಯಕ್ಷೆ ಶಾರದಾ ಬೇವಿನಾಳ ಅಧ್ಯಕ್ಷತೆಯಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ಪ್ರಮುಖ ವಿಷಯಗಳ ಕುರಿತು ಚರ್ಚೆ ಕಂಡು ಬರಲಿಲ್ಲ. ಬೇಸಿಗೆ ಆರಂಭವಾಗುತ್ತಿದ್ದು, ಕೆಲ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಕಾರಣ ಸೂಕ್ತ ಕ್ರಮ ಕೈಗೊಳ್ಳುವಂತೆ ಕೆಲ ಸದಸ್ಯರು ಒತ್ತಾಯಿಸಿದ್ದು ಬಿಟ್ಟರೆ ಗಂಭೀರ ಚರ್ಚೆ ನಡೆಯಲಿಲ್ಲ.
Related Articles
Advertisement
ತಾಲೂಕು ಆರೋಗ್ಯಾಧಿಕಾರಿ ಡಾ|ಆರ್.ವಿ. ನಾಯಕ ಮಾತನಾಡಿ, ಈ ವರ್ಷ ಕುಷ್ಠ ರೋಗದ 8 ಪ್ರಕರಣಗಳು ಕಂಡು ಬಂದಿವೆ. ಶೇ. 95ರಷ್ಟು ಡಿಇಸಿ ಮಾತ್ರೆಗಳನ್ನು ವಿತರಿಸಲಾಗಿದೆ. 289 ಜನರಲ್ಲಿ ಕ್ಷಯ ರೋಗ ಪತ್ತೆಯಾಗಿದೆ. ಎಚ್1ಎನ್-1 ಪ್ರಕರಣ ಮತ್ತು 12 ಜನರಿಗೆ ಡೆಂಘೀ, 23 ಜನರಿಗೆ ಚಿಕೂನ್ ಗುನ್ಯಾ ಕಂಡು ಬಂದಿದ್ದು, 256 ಜನರಿಗೆ ನಾಯಿ, 72 ಜನರಿಗೆ ಹಾವು ಕಚ್ಚಿದ ಪ್ರಕರಣಗಳು ನಡೆದಿವೆ ಎಂದು ತಿಳಿಸಿದರು. ಕೆಂಭಾವಿ, ಕೊಡೇಕಲ್ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ಸಮುದಾಯ ಆರೋಗ್ಯಕೇಂದ್ರಗಳನ್ನಾಗಿ ಪರಿವರ್ತಿಸಲಾಗಿದೆ. ಕಟ್ಟಡ ಕಾಮಗಾರಿ ನಡೆದಿದ್ದು, ಶೀಘ್ರದಲ್ಲಿಯೇ ಮುಗಿಯಲಿವೆ. ನಾರಾಯಣಪುರ, ದೇವಾಪುರ, ರುಕ್ಮಾಪುರ ಗ್ರಾಮಗಳಲ್ಲಿ ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಈ ವರ್ಷ ಮಂಜೂರಾಗುವ ಸಾಧ್ಯವಿದೆ. ತಿಂಥಣಿ, ಹೆಗ್ಗಣದೊಡ್ಡಿ, ಮುದ್ನೂರು ಬಿ ಗ್ರಾಮಗಳಿಗೂ ಪ್ರಸ್ತಾವನೆ ಹೋಗಿದೆ. ಬೇಸಿಗೆ ಆರಂಭವಾಗಿದ್ದು, ವಾಂತಿ-ಭೇದಿ ಪ್ರಕರಣಗಳು ಶುರುವಾಗುತ್ತವೆ. ಮುಂಜಾಗ್ರತೆ ಕ್ರಮವಾಗಿ ಗ್ರಾಮಗಳಲ್ಲಿ ಹೊಡೆದ ಪೈಪ್ ಲೈನ್‌ಗಳನ್ನು ದುರಸ್ತಿ ಮಾಡಿಸಬೇಕು. ಡೆಂಘೀ, ಚಿಕೂನ್ ಗುನ್ಯಾ ತಡೆಗೆ ಸ್ವಚ್ಛತೆ ಕೈಗೊಳ್ಳಬೇಕು. ಫಾಗಿಂಗ್ ಮಾಡಿಸಬೇಕು. ಕೊರೊನಾ ವೈರಸ್ ಚಿಕಿತ್ಸೆಗಾಗಿ ತಾಲೂಕು ಆಸ್ಪತ್ರೆಯಲ್ಲಿ ಪ್ರತೇಕ ವಾರ್ಡ್ ಸ್ಥಾಪಿಸಲಾಗಿದ್ದು, 10 ಬೆಡ್‌ಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಬಿಇಒ ನಾಗರತ್ನಾ ಓಲೇಕಾರ, ಕೃಷಿ ಅಧಿಕಾರಿ ದಾನಪ್ಪ ಕತ್ನಳ್ಳಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸತ್ಯನಾರಾಯಣ ದರಬಾರಿ, ಸಿಡಿಪಿಒ ಲಾಲಸಾಬ್ ಪೀರಾಪುರ, ಬಿಸಿಎಂ ಅಧಿಕಾರಿ ಬಾಬು ಮಾಹಿತಿ ನೀಡಿದರು. ತಾಪಂ ಅಧ್ಯಕ್ಷೆ ಶಾರದಾ ಭೀಮಣ್ಣ ಬೇವಿನಾಳ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಮಂಜುಳಾ ಸಾಹೇಬಗೌಡ, ತಾಪಂ ಇಒ ಅಮರೇಶ ವೇದಿಕೆಯಲ್ಲಿದ್ದರು.