ಸುರಪುರ: ಜಗತ್ತಿನ ಎಲ್ಲಾ ಋಷಿ ಮುನಿಗಳು ಧರ್ಮದ ಬಗ್ಗೆ ಉತ್ತಮ ಮೌಲ್ಯಗಳನ್ನು ನೀಡಿದ್ದಾರೆ. ಆದರಲ್ಲೂ ಶಂಕರಾಚಾರ್ಯರ ಸಾರಿದ ಅಹಂ ಬ್ರಹ್ಮಾಸ್ಮಿ ತತ್ವ ಜಗತ್ತಿನಲ್ಲಿಯೇ ಶ್ರೇಷ್ಠ ಸಂದೇಶವಾಗಿದೆ ಎಂದು ಲಕ್ಷ್ಮೀಪುರ ಶ್ರೀ ಗಿರಿ ಮಠದ ಬಸವಲಿಂಗ ದೇವರು ಹೇಳಿದರು.
ತಾಲೂಕಿನ ಲಕ್ಷ್ಮೀಪುರ ಗ್ರಾಮದ ಮರಡಿ ಮಲ್ಲಿಕಾರ್ಜುನ ದೇವಾಸ್ಧಾನದ ಶ್ರೀಗಿರಿ ಸಂಸ್ಥಾನ ಆವರಣದಲ್ಲಿ ಶ್ರೀ ಗುರು ಪುಟ್ಟರಾಜ ಜನಕಲ್ಯಾಣ ಸೇವಾ ಸಮಿತಿ ಏರ್ಪಡಿಸಿದ್ದ ಶಂಕರಾಚಾರ್ಯರ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.
ಸಾಮಾನ್ಯ ಮನುಷ್ಯನು ಹುಟ್ಟು ಹಾಗೂ ಸಾವಿನ ನಡುವೆ ಹೇಗೆ ಬದುಕಿದರೆ ಮುಕ್ತಿ ಪಡೆಯಬಹುದು ಎಂಬುದನ್ನು ಶಂಕರಚಾರ್ಯರು ತಿಳಿಸಿಕೊಟ್ಟಿದ್ದಾರೆ. ಹಾಗಾಗಿ ಶಂಕರರು ಜಗತ್ತಿನ ಮೊದಲಿಗರು. ಅದ್ವೈತ ಸಿದ್ಧಾಂತದ ಮೂಲಕ ಜನ ಮಾನಸದಲ್ಲಿ ನಿರಂತರವಾಗಿ ನೆಲೆಸಿದ ಭಗವತ್ಪಾದರು ಲೋಕಕಲ್ಯಾಣಕ್ಕಾಗಿ ದುಡಿದ ದೈವಿ ಪುರಷರಾಗಿದ್ದರು ಎಂದರು.
ಸನಾತನ ಧರ್ಮದ ಶ್ರೇಯಸ್ಸಿಗಾಗಿ ಅವಿರತವಾಗಿ ದುಡಿದು ಜಗತ್ತಿನಲ್ಲಿ ವೇದಾಂತದ ಮೌಲ್ಯಗಳನ್ನು ಉಳಿಸಿಕೊಳ್ಳುವಲ್ಲಿ ಶಂಕರರು ವಹಿಸಿದ ಪಾತ್ರ ಅದ್ವಿತೀಯವಾದುದು. ಕೇವಲ ಕಾಲ್ನಡಿಗೆಯ ಮುಖಾಂತರ ದೇಶವನ್ನು ಸುತ್ತಿ ಜನರನ್ನು ಸಂಪರ್ಕಿಸಿ ಧರ್ಮದ ಬಗ್ಗೆ ಜಾಗೃತಿ ಮೂಡಿಸಿದ ವಿಬೂತಿ ಪುರುಷ ಎಂದು ವಿವರಿಸಿದರು
ಸಮಿತಿಯ ಅಧ್ಯಕ್ಷ ಕ್ಷೀರಲಿಂಗಯ್ಯ ಹಿರೇಮಠ ಪ್ರಾಸ್ತವಿಕ ಮಾತನಾಡಿದರು. ಪ್ರಿಯಾಂಕ ಸಾಂಸ್ಕೃತಿಕ ಗ್ರಾಮೀಣಾಭಿವೃದ್ಧಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಿಂಗಣ್ಣ ಕುಂಬಾರ ಮಲ್ಲಿಕಾರ್ಜುಯ್ಯ ಹಿರೇಮಠ ಶಹಾಪುರ ಇದ್ದರು. ಹಂಪಯ್ಯ ಹಿರೇಮಠ ಸ್ವಾಗತಿಸಿದರು. ನಿಜಲಿಂಗಯ್ಯ ಶ್ರೀಗಿರಿ ಮಠ ನಿರೂಪಿಸಿ, ವಂದಿಸಿದರು.