ಸುರಪುರ: ಎಲ್ಲ ವಾಹನ ಸವಾರು ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿವೈಎಸ್‌ಪಿ ವೆಂಕಟೇಶ ಹೊಗಿಬಂಡಿ ಹೇಳಿದರು.
ನಗರದ ಪೊಲೀಸ್ ಠಾಣೆಯಲ್ಲಿ ಗುರುವಾರ ನಡೆದ ರಸ್ತೆ ಸುರಕ್ಷಿತಾ ಮತ್ತು ನಿಯಮಗಳ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 5-10 ರೂ. ಆಸೆಗಾಗಿ ಮಿತಿ ಮೀರಿ ಪ್ರಯಾಣಿಕರನ್ನು ಸಾಗಿಸುವುದು ನಿಯಮ ಉಲ್ಲಂಘನೆ. ಜತೆಗೆ ಅಪಘಾತ ಸಂಭವಿಸಿದಾಗ ಜೀವ ಹಾನಿಯಾವುದರಿಂದ ಕಷ್ಟ ಅನುಭವಿಸಬೇಕಾಗುತ್ತದೆ. ಕಾರಣ ಚಾಲಕರು ಸಂಚಾರಿ ನಿಯಮ ಪಾಲಿಸಬೇಕು. ಸುರಕ್ಷಿತ ಪ್ರಯಾಣಕ್ಕೆ ಸಹಕರಿಸಬೇಕು ಎಂದು ಹೇಳಿದರು.
ನಗರದಲ್ಲಿ ಸರಕು ಸಾಗಿಸುವ ಭಾರಿ ವಾಹನಗಳಿಗೆ ಹಗಲು ವೇಳೆ ಪ್ರವೇಶ ನಿಷೇಧಿಸಲಾಗಿದೆ. ಕಿರಾಣಿ ಮತ್ತು ಇತರೆ ಸಾಮಗ್ರಿಗಳನ್ನು ಹೊತ್ತು ತರುವ ವಾಹನಗಳು ರಾತ್ರಿ 8:00ರಿಂದ ಬೆಳಗಿನ 10:00ರೊಳಗೆ ದಾಸ್ತಾನು ಖಾಲಿ ಮಾಡಿಕೊಳ್ಳಬೇಕು. ನಿಯಮ ಉಲ್ಲಂಘಿಸಿ ನಗರ ಪ್ರವೇಶ ಮಾಡಿದ್ದಲ್ಲಿ ಚಾಲಕರ ವಿರುದ್ಧ ನಿರ್ದಾಕ್ಷ್ಯಿಣ ಕ್ರಮ ಮತ್ತು ಹತ್ತು ಸಾವಿರ ರೂ. ದಂಡ ವಿಧಿಸಲಾಗುವುದು. ಕಾರಣ ವಾಹನ ಚಾಲಕರು ಮತ್ತು ಕಿರಾಣಿ ವ್ಯಾಪಾರಸ್ಥರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಜೀಪ್ ಮತ್ತು ಅಟೋಗಳು ಟಾಪ್ ಪ್ರಯಾಣ ಮಾಡುವಂತಿಲ್ಲ. ಎಲ್ಲೆಂದರಲ್ಲಿ ನಿಯಮ ಮೀರಿ ಕೂಲಿ ಕಾರ್ಮಿಕರನ್ನು ಕರೆದುಕೊಂಡು ಹೋಗುವಂತಿಲ್ಲ. ನಿಗದಿಪಡಿಸಿದಕ್ಕಿಂತಲೂ ಹೆಚ್ಚಿನ ಪ್ರಯಾಣಿಕರನ್ನು ತುಂಬುವಂತಿಲ್ಲ. ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ವಾಹನ ಸವಾರರು ರಸ್ತೆ ಸುರಕ್ಷಾ ನಿಯಮ ಪಾಲಿಸಬೇಕು ಎಂದು ಹೇಳಿದರು.
ಪೊಲೀಸ್ ಇನ್ಸ್‌ಪೆಕ್ಟರ್ ಆನಂದರಾವ್, ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಚೇತನ, ಸಂಚಾರಿ ನಿಯಂತ್ರಣ ಅಧಿಕಾರಿ ದ್ಯಾವಪ್ಪ, ದೈಹಿಕ ಪರಿವೀಕ್ಷಕ ನಿಂಗಪ್ಪ ಪೂಜಾರಿ ಇದ್ದರು. ಮುಖ್ಯ ಪೇದೆ ಚಂದ್ರು ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.