ಸುರಪುರ: ಫಲಿತಾಂಶ ಮತ್ತು ಅಂಕಗಳಿಕೆ ದೃಷ್ಟಿಯಲ್ಲಿಟ್ಟುಕೊಂಡು ಓದಬೇಡಿ. ಜ್ಞಾನ ಸಂಪಾದಿಸಬೇಕು ಎನ್ನುವ ದೃಷ್ಟಿಯಿಂದ ಅಧ್ಯಯನ ಮಾಡಿ ಎಂದು ಉಪಖಜಾನೆ ಅಧಿಕಾರಿ ಮೋನಪ್ಪ ಶಿರವಾಳ ಹೇಳಿದರು.
ರಂಗಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಪಿಯು ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸ್ವಾಗತ ಸಮಾರಂಭದಲ್ಲಿ ಮಾತನಾಡಿದ ಅವರು, ಪಠ್ಯ ವಿಷಯಗಳೊಂದಿಗೆ ಸಾಮಾನ್ಯ ಜ್ಞಾನ ಒದಗಿಸುವ ಇತರೆ ಪುಸ್ತಗಳನ್ನು ಸಹ ಓದಬೇಕು. ಇದರಿಂದ ಜ್ಞಾನ ಸಂಪತ್ತು ಹೆಚ್ಚಾಗುತ್ತದೆ. ಕಥೆ, ಕಾವ್ಯ, ಕಾದಂಬರಿ, ಪ್ರವಾಸ ಕಥನ, ಸಾಹಿತಿಗಳ ಜೀವನ ಚರಿತ್ರೆ ಸೇರಿದಂತೆ ಇತರೆ ಪುಸ್ತಕಗಳನ್ನು ಓದುವ ಅವ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಬೇಸರದ ಓದು ಬೇಡ, ಇಷ್ಟ ಪಟ್ಟು ಓದಬೇಕು. ಅಂದಾಗ ವಿಷಯ ಕಷ್ಟವೆನಿಸುವುದಿಲ್ಲ. ಓದಿಗೆ ವಯಸ್ಸಿನ ಮಿತಿ ಇಲ್ಲ್ಲ, ಓದುವುದರ ಜೊತೆಗೆ ಬರೆಯುವುದನ್ನು ರೂಢಿಸಿಕೊಳ್ಳಿ, ಓದಿದ್ದನ್ನು ಪುನಃ ಪುನಃ ಮನನ ಮಾಡಿಕೊಳ್ಳಬೇಕು. ಟಿ.ವಿ, ಮೊಬೈಲ್ಗಳನ್ನು ಮಿತವಾಗಿ ಬಳಸಿ ಎಂದು ಸಲಹೆ ನೀಡಿದರು.
ಅಬ್ದುಲ್ ರಜಾಕ್ ಭಗವಾನ ಮಾತನಾಡಿ, ಶಿಕ್ಷಕರು ಪಠ್ಯ ವಿಷಯದೊಂದಿಗೆ ನೈತಿಕ ಶಿಕ್ಷಣ ಬೋದಿಸುವುದು ಅಗತ್ಯವಾಗಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಸಾಕಷ್ಟು ಪ್ರತಿಭಾವಂತರಿದ್ದಾರೆ. ಅವರನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.
ಪ್ರಾಚಾರ್ಯ ಬಸವರಾಜ ಕೊಡೇಕಲ್ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲ ಗುರುಲಿಂಗಪ್ಪ ಖಾನಾಪುರ, ಉಪನ್ಯಾಸಕ ಗೌಸಿಯಾ ಬೇಗಂ, ವೆಂಕೋಬ, ನಿಂಗನಗೌಡ ಪಾಟೀಲ, ನಗರಸಭೆ ಸದಸ್ಯ ಜಾಹೀರ ಇದ್ದರು. ಅರುಣಾ ಚಿನ್ನಾಕಾರ ಪ್ರಾಸ್ತಾವಿಕ ಮಾತನಾಡಿದರು. ಅಬ್ದುಲ್ ಅಜೀಜ್ ಸ್ವಾಗತಿಸಿದರು. ಮಹಮ್ಮದ್ ಮಶಾಖ ನಿರೂಪಿಸಿದರು. ಶಕುಂತಲಾ ಜಾಲವಾದಿ ವಂದಿಸಿದರು.