ಸುರಪುರ: ದೇವಪುರದಿಂದ ಮನಗೂಳಿ ರಾಜ್ಯ ಹೆದ್ದಾರಿಗೆ ಭೂಮಿ ಕಳೆದುಕೊಂಡ ನಾಗರಾಳ, ಹಂದ್ರಾಳ ಗ್ರಾಮದ ಸಂತ್ರಸ್ತ ರೈತರು ಭೂ ಪರಿಹಾರಕ್ಕೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಸಿರು ಸೇನೆ ನೇತೃತ್ವದಲ್ಲಿ ಶುಕ್ರವಾರ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನೇತೃತ್ವ ವಹಸಿದ್ದ ಸಂಘದ ತಾಲೂಕು ಕಾರ್ಯದರ್ಶಿ ಶರಣಪ್ಪ ಕೋಳಿಹಾಳ ಮಾತನಾಡಿ, ರಾಜ್ಯ ಹೆದ್ದಾರಿಗೆ ಸುಮಾರು 81 ಜನ ರೈತರು ಕೃಷಿ ಭೂಮಿ ಕಳೆದುಕೊಂಡಿದ್ದಾರೆ. ಭೂ ಪರಿಹಾರಕ್ಕೆ ಒತ್ತಾಯಿಸಿ ಸಂತ್ರಸ್ತ ರೈತರು ಈಗಾಗಲೇ ಕಲ್ಬುರ್ಗಿ ಹೈ ಕೋರ್ಟ್‌ನಲ್ಲಿ ದಾವೆ ಹೂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಕಾಮಗಾರಿಗೆ ತಡೆಯಾಜ್ಞೆ ನೀಡಿದೆ. ತಡೆಯಾಜ್ಞೆ ಇರುವಾಗ ಲೋಕೋಪಯೋಗಿ ಇಲಾಖೆಯವರು ಅನಧಿಕೃತವಾಗಿ ಕಾಮಗಾರಿ ಆರಂಭಿಸಿರುವುದು ಖಂಡನೀಯ ಎಂದರು.
ಈ ಬಗ್ಗೆ ಲೋಕೋಪಯೋಗಿ ಇಲಾಖೆ ಹಾಗೂ ರಾಜ್ಯ ಹೆದ್ದಾರಿ ಇಲಾಖೆ ಅಧಿಕಾರಿಗಳನ್ನು ಕೇಳಿದರೆ ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ದೂರಿದರು.
ತಕ್ಷಣ ಕಾಮಗಾರಿ ನಿಲ್ಲಿಸಬೇಕು. ಈ ಕುರಿತು ಜಿಲ್ಲಾಧಿಕಾರಿಗಳು ಕಾಮಗಾರಿ ಸ್ಥಗಿತಗೊಳಿಸುವಂತೆ ಲೋಕೋಪಯೋಗಿ ಇಲಾಖೆಗೆ ಕಟ್ಟುನಿಟ್ಟಿನ ಆದೇಶ ನೀಡಬೇಕು ಎಂದು ಎಚ್ಚರಿಕೆ ನೀಡಿದರು.
ಸುರೇಶ, ಸಂಜೀವಪ್ಪ, ಬಸನ್‌ಗೌಡ, ನಿಂಗಪ್ಪ, ಸಕ್ರೆಪ್ಪ, ಸಂಹೀಜ್ ಗೌಡ, ಗೂಡ್ಸ್‌ಸಾಬ್, ಶರಣಪ್ಪಗೌಡ, ಭೀಮಣ್ಣ, ಶರಂಸಾಬ್, ಯಂಕಪ್ಪ, ಮಾರ್ತಡಪ್ಪ, ಮಾಳಪ್ಪ, ಗಚ್ಚಪ್ಪಗೌಡ, ಯಲ್ಲಪ್ಪ, ಮಲ್ಲಣ್ಣ, ಗದ್ದೆಮ್ಮ, ಯಂಕರೆಡ್ಡಿ, ನಾಗರಾಜ ಇದ್ದರು.