ಸುರಪುರ: ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವಲ್ಲಿ ಸಾಕಷ್ಟು ವಿಳಂಬಯಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಸಾರ್ವಜನಿಕರ ತಾಳ್ಮೆ ಪರೀಕ್ಷಿಸಬೇಡಿ. ಪರಿಸ್ಥಿತಿ ಕೈ ಮೀರುವ ಮೊದಲೇ ಎಚ್ಚೆತ್ತುಕೊಳ್ಳಿ. ಕುಡಿಯುವ ನೀರು ಸಮರ್ಪಕವಾಗಿ ಕೊಡಿ ಎಂದು ಜಿಲ್ಲಾಧಿ ಕಾರಿ ಎಂ. ಕೂರ್ಮಾರಾವ್ ನಗರಸಭೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಇಲ್ಲಿಯ ನಗರಸಭೆ ಕಚೇರಿಯಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಸುರಪುರ, ಕಕ್ಕೇರಾ, ಕೆಂಭಾವಿ ಮತ್ತು ಶಹಾಪುರ ನಗರಸಭೆ ವ್ಯಾಪ್ತಿಯ ನಗರೋತ್ಥಾನ ಯೋಜನೆಯಡಿ ನಡೆಯುತ್ತಿರುವ ವಿವಿಧ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿವೆ. ಕಾಮಗಾರಿ ವೇಗ ಹೆಚ್ಚಿಸಿ ತ್ವರಿತವಾಗಿ ಕಾಮಗಾರಿ ಮುಗಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಸುರಪುರ ನಗರದಲ್ಲಿ ನೀರಿನ ಸಮಸ್ಯೆ ಸೇರಿದಂತೆ ಅನೇಕ ಸಮಸ್ಯೆಗಳ ಕುರಿತು ನನ್ನ ಗಮನಕ್ಕೂ ಬಂದಿದೆ. ಅದನ್ನು ತಕ್ಷಣ ನಿವಾರಿಸಲು ನಗರಸಭೆ ಅಧಿ ಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿದರು.
ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ನಗರಕ್ಕೆ ಸಮರ್ಪಕ ನೀರು ಪೂರೈಸಲು ಅಧಿಕಾರಿಗಳಿಗೆ ಹೇಳಿದ್ದೇನೆ. ಶೆಳ್ಳಗಿ ಜಾಕ್‌ವೆಲ್‌ನಲ್ಲಿ ಸುಸ್ಥಿತಿಯಲ್ಲಿರುವ ಮೋಟಾರ್, ಟಿಸಿಗಳ ವ್ಯವಸ್ಥೆ ಮಾಡಲಾಗಿದೆ. ಪೈಪ್‌ಲೈನ್ ಒಡೆಯದಂತೆ ಮುಂಜಾಗ್ರತೆ
ಕ್ರಮ ವಹಿಸಲು ಸೂಚಿಸಿದ್ದೇನೆ ಎಂದು ತಿಳಿಸಿದರು.
ಬಯೋಮೆಟ್ರಿಕ್‌ಗೆ ಆದ್ಯತೆ: ನಗರಸಭೆಯಲ್ಲಿ ಅ. 10ರಿಂದ ನೂತನ ಬಯೋಮೆಟ್ರಿಕ್ ಯಂತ್ರ ಅಳವಡಿಸಲಾಗುವುದು. ಬಯೋಮೆಟ್ರಿಕ್ ಯಂತ್ರ ಅಳವಡಿಕೆಯಿಂದ ಆಡಳಿತ ವ್ಯವಸ್ಥೆ ಮತ್ತಷ್ಟು ಸುಧಾರಣೆಯಾಗುತ್ತದೆ. ನಗರಸಭೆಯಲ್ಲಿ ಅನೇಕ ವರ್ಷಗಳಿಂದ ಮಳಿಗೆಗಳ ಹಾರಾಜು ಆಗಿಲ್ಲ. ಕಾರಣ ಆ ಪ್ರಕ್ರಿಯೆ ಮುಗಿಸುವಂತೆ ತಿಳಿಸಿದ್ದೇನೆ. ನೀರು, ಮನೆ ಕರ ವಸೂಲಿ ವೇಗ ಹೆಚ್ಚಿಸುವಂತೆ ಸೂಚಿಸಿದ್ದೇನೆ. ಇದರಿಂದ ನಗರಸಭೆ ಆದಾಯ ವೃದ್ಧಿಯಾಗುತ್ತದೆ ಎಂದರು.
ನಗರಸಭೆಯಲ್ಲಿ ವಿವಿಧ ವಸತಿ ಯೋಜನೆ ಅಡಿಯಲ್ಲಿ ಮಂಜೂರಾದ ಮನೆಗಳಿಗೆ ತಕ್ಷಣ ಜಿಪಿಆರ್‌ಎಸ್ ಮಾಡಲು ಕ್ರಮ ಕೈಗೊಳ್ಳಬೇಕು. ಯಾವುದೇ ದೂರು ಬರಕೂಡದು ಎಂದು ಖಡಕ್ ಎಚ್ಚರಿಕೆ ನೀಡಿದರು.
ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ, ತಹಶೀಲ್ದಾರ್ ಸುರೇಶ ಅಂಕಲಗಿ ಸೇರಿದಂತೆ ಯಾದಗಿರಿ ನಗರಕೋಶದ ಮತ್ತು ಸುರಪುರ ನಗರಸಭೆ ಅಧಿಕಾರಿಗಳು, ಇಂಜಿನಿಯರ್‌ಗಳು ಇದ್ದರು.