Advertisement

ಜನಸ್ನೇಹಿ ಕೆಲಸಕ್ಕೆ ಸಹಕಾರ ಅಗತ್ಯ

12:35 PM Feb 17, 2020 | Team Udayavani |

ಸುರಪುರ: ಖಾಕಿ ಬಟ್ಟೆ ಧರಿಸಿ ತಲೆ ಮೇಲೆ ಹ್ಯಾಟ್‌, ಕೈಯಲ್ಲಿ ಲಾಠಿ ಹಿಡಿದು ಜನರನ್ನು ಎದುರಿಸಿ ಕೆಲಸ ಮಾಡುವ ಕಾಲ ಈಗಿಲ್ಲ. ಪೊಲೀಸರು ಜನಸ್ನೇಹಿಯಾಗಿ ಕೆಲಸ ಮಾಡುವುದು ಇಂದಿನ ಅಗತ್ಯವಾಗಿದೆ. ಇದಕ್ಕೆ ಸಾರ್ವಜನಿಕರ ಸಹಕಾರ ಬೇಕು ಎಂದು ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ ಭಾಗವಾನ ಸೋನಾವನೆ ಹೇಳಿದರು.

Advertisement

ಹಸನಾಪುರದ ನಿಷ್ಠಿ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಪೊಲೀಸ್‌ ಇಲಾಖೆ ಏರ್ಪಡಿಸಿದ್ದ ಕುಂದು ಕೊರತೆ ಹಾಗೂ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು. ಪೊಲೀಸರ ಮೇಲೆ ಸಮಾಜ ವಿಶ್ವಾಸ, ನಂಬಿಕೆ, ಗೌರವ ಇಟ್ಟಿದೆ. ಅದನ್ನು ಉಳಿಕೊಂಡು ಹೋಗುವ ಜವಾಬ್ದಾರಿ ಇಲಾಖೆ ಮೇಲಿದೆ. ನಾವೆಷ್ಟೇ ಕಾನೂನು ರಕ್ಷಣೆ ಮಾಡುತ್ತಿದ್ದರು ಕೂಡ ನಿರೀಕ್ಷಿತ ಪ್ರಮಾಣ‌ದಲ್ಲಿ ಯಶಸ್ಸು ಕಾಣುತ್ತಿಲ್ಲ. ಆದ್ದರಿಂದ ಸಾರ್ವಜನಿಕರು ಪೊಲೀಸರೊಂದಿಗೆ ಸೌರ್ಹಾದಿಂದ ವರ್ತಿಸುವ ಮೂಲಕ ಸಂಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ನಾವು ಕೂಡ ನಿಮ್ಮಂತೆ ಮನುಷ್ಯರು. ನಾವೇನು ಕಟುಕರಲ್ಲ. ನಮ್ಮಲ್ಲಿಯೂ ಮಾನವೀಯತೆ,
ಅಂಥಃಕರುಣೆ ಇದೆ. ಆದರೆ ಕಾನೂನಿನ ವಿಷಯಕ್ಕೆ ಬಂದಾಗ ಸ್ವಲ್ಪ ಕಠಿಣರಾಗ ಬೇಕಾಗುತ್ತದೆ. ಇದನ್ನು ಸಾರ್ವಜನಿಕರು ಅರ್ಥ ಮಾಡಿಕೊಳ್ಳಬೇಕು. ಎಲ್ಲಿಯಾದರೂ ಯಾವುದೇ ಅಕ್ರಮ ಚಟುವಟಿಕೆ ನಡೆಯತ್ತಿದ್ದಲ್ಲಿ ಅಥವಾ ಶಾಂತಿ ಕದಡುವ ಘಟನೆ ಕಾನೂನು ಉಲ್ಲಂಘನೆಯಾಗುತ್ತಿದ್ದಲ್ಲಿ ತಕ್ಷಣವೇ ಪೊಲೀಸರಿಗೆ ಅಥವಾ ಸಹಾಯವಾಣಿಗೆ ಮಾಹಿತಿ ನೀಡಿದಲ್ಲಿ ಕ್ರಮ ಕೈಗೊಳ್ಳಲು ನೆರವಾಗುತ್ತದೆ ಎಂದು ಹೇಳಿದರು.

ಇಲಾಖೆ ಇರುವುದೇ ಜನರ ರಕ್ಷಣೆಗಾಗಿ. ದಿನ 24 ಗಂಟೆ ಸೇವೆ ನೀಡುವ ಪೊಲೀಸರಿಗೆ ಸಮುದಾಯಗಳ ಸಹಕಾರ ಅಗತ್ಯವಾಗಿದೆ. ಅಪ್ರಾಪ್ತ ಬಾಲಕಿಯರ ಮೇಲೆ ದೌರ್ಜನ್ಯ, ಕಿರುಕುಳ ನಡೆದಲ್ಲಿ ಅಥವಾ ಯಾರಾದರು ಮದ್ಯ ಸೇವಿಸಿ ಅಶಾಂತಿ ಸೃಷ್ಟಿಸುತ್ತಿದ್ದರೆ, ಕಾನೂನು ಬಾಹೀರ ಚಟುವಟಿಕೆ ನಡೆಯುತ್ತಿದ್ದರೆ ಬೀಟ್‌ ಪೊಲೀಸರಿಗೆ ಮಾಹಿತಿ ತಲುಪಿಸಬೇಕು. ಒಟ್ಟಾರೆಯಾಗಿ ಕಾನೂನು ರಕ್ಷಣೆಯೊಂದಿಗೆ ಸಮಾಜದಲ್ಲಿ ಶಾಂತಿ ಸೌರ್ಹಾದತೆ ಕಾಪಾಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಇದಕ್ಕೆ ತಾವೆಲ್ಲ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಇಲಾಖೆ ಬಗ್ಗೆ ಸಾರ್ವಜನಿಕರಲ್ಲಿ ಸಾಕಷ್ಟು ತಪ್ಪು ಕಲ್ಪನೆಗಳಿವೆ. ಅವೆಲ್ಲ ಸತ್ಯಕ್ಕೆ ದೂರವಾಗಿವೆ. ಪೊಲೀಸರು ಯಾರ ಗುಲಾಮರು ಅಲ್ಲ. ಯಾರ ಮನೆ ಆಳು ಅಲ್ಲ. ಸಾರ್ವಜನಿಕರ ಹಿತರಕ್ಷಕರು. ಕಾನೂನು ಚೌಕಟ್ಟಿನಲ್ಲಿ ನಮ್ಮಿಂದ ಏನು ಸಾಧ್ಯವೋ ಅದನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದೇವೆ. ಇದಕ್ಕೂ ಮೀರಿ ಹೆಚ್ಚಿನದಾಗಿ ಜನರ ಹಿತ ರಕ್ಷಣೆಗಾಗಿ ಯಾವ ಕ್ರಮ ಕೈಗೊಳ್ಳಬೇಕು, ಏನನ್ನು ಮಾಡಬೇಕು ಯಾವೆಲ್ಲ ನೆರವು ನೀಡಬೇಕು. ಯಾವ ರೀತಿ ಕ್ರಮ ಕೈಗೊಂಡರೆ ಕಾನೂನು ರಕ್ಷಣೆ ಸಾಧ್ಯ ಎನ್ನುವದರ ಬಗ್ಗೆ ಸಲಹೆ ಸೂಚನೆ ನೀಡಬೇಕು ಎಂದು ಮನವಿ ಮಾಡಿದರು.

Advertisement

ದಲಿತ ಮುಖಂಡ ಚಂದ್ರಶೇಖರ ಜಡಿಮರಳ ಮಾತನಾಡಿ, ಹಲ್ಲೆಯಂತ ಘಟನೆ ಸಂದರ್ಭದಲ್ಲಿ ದೂರು ಮತ್ತು ಪ್ರತಿ ದೂರುದಾರಿಗೆ ಒಂದೇ ತೆರನಾದ ಕಲಂಗಳನ್ನು ಹಚ್ಚುತ್ತಾರೆ. ಇದರಿಂದ ನಿಜವಾಗಿ ಹಲ್ಲೆಗೊಳಗಾದ ವ್ಯಕ್ತಿಗೆ ಅನ್ಯಾಯ ಆಗುತ್ತಿದೆ. ಈ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳಬೇಕು. ಇಬ್ಬರಿಗೂ ಒಂದೇ ತೆರನಾದ ಕಲಂ ಹಚ್ಚುವುದು ಸರಿಯಲ್ಲ. ಹಲ್ಲೆ ಗಂಭೀರತೆ ಪರಿಗಣಿಸಿ ಬಡವರಿಗೆ ರಕ್ಷಣೆ ನೀಡಬೇಕು ಎಂದು ಸಲಹೆ ನೀಡಿದರು.

ಮರುಳು ಮಾಫಿಯಾ ಸದ್ದು ಮಾಡಿತು. ಇದಕ್ಕೆ ಪೊಲೀಸರು ಸಹಕರಿಸುತ್ತಿದ್ದಾರೆ ಎಂದು ಕೆಲವರು ನೇರವಾಗಿ ಹೇಳಿದರು. ಪ್ರಾಣಿ ಬಲಿ ತಡೆಗಟ್ಟುವಲ್ಲಿ ಪೊಲೀಸ್‌ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿದರು.

ಸಂಘಟನೆಗಳ ಮುಖಂಡರಾದ ವೆಂಕೋಬ ದೊರೆ, ರಾಹುಲ ಹುಲಿಮನಿ, ನಿಂಗಣ್ಣ ಗೋನಾಲ, ಶರಣಪ್ಪ ಲಕ್ಷ್ಮೀಪುರ, ಮೂರ್ತಿ ಬೊಮಮ್ನಳ್ಳಿ, ಭೀಮರಾಯ ಸಿಂಧಗೇರಿ,
ಭಿಮಾಶಂಕರ ಬಿಲ್ಲವ ಮಾತನಾಡಿ, ಸಂಚಾರ ನಿಯಂತ್ರಣ, ನಿಯಮಗಳ ಪಾಲನೆ, ಮಟಕಾ, ಇಸ್ಪೇಟ್‌, ಜೂಜು ಸೇರಿದಂತೆ ಅಕ್ರಮ ಚಟುವಟಿಕೆಗಳ ಕುರಿತು ಮತ್ತು ಆಕ್ರಮ ಮದ್ಯ ಮಾರಾಟ, ಸಾಗಾಣಿಕೆ ತಡೆಗಟ್ಟುವ ಬಗ್ಗೆ ಧ್ವನಿ ಎತ್ತಿದರು.

ಕಾಲೇಜಿನ ಪ್ರಾಚಾರ್ಯ ಡಾ| ರವಿಂದ್ರಕುಮಾರ ನಾಗರಾಳ ಅಧ್ಯಕ್ಷತೆ ವಹಿಸಿದ್ದರು. ಡಿವೈಎಸ್‌ಪಿ ವೆಂಕಟೇಶ ಉಗಿಬಂಡಿ, ಸಿಪಿಐ ಆನಂದರಾವ, ಪಿಎಸ್‌ಐ ಶರಣಪ್ಪ. ಎಎಸ್‌ಐ ಹಣಮಂತ ನಾಯಕ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next