ಸುರಪುರ: ತಾಲೂಕು ಕೇಂದ್ರದಲ್ಲಿರುವ ತಿಮ್ಮಾಪುರ ರಂಗಂಪೇಟೆಯಲ್ಲಿರುವ ಮೂರು ಸರಕಾರಿ ಶಾಲೆಗಳ ವ್ಯವಸ್ಥೆ ಮೂರಾಬಟ್ಟೆಯಾಗಿದ್ದು, ಅಧಿಕಾರಿಗಳ, ಜನಪ್ರತಿನಿಧಿಗಳ ನಿಷ್ಕಾಳಜಿ ಇದಕ್ಕೆ ಸಾಕ್ಷಿಯಾಗಿದೆ. ತಿಮ್ಮಾಪುರ ರಂಗಂಪೇಟೆ ಸರಕಾರಿ ಕನ್ಯಾ ಹಿರಿಯ ಪ್ರಾಥಮಿಕ ಶಾಲೆ, ಕನ್ಯಾ ಉರ್ದು ಹಿರಿಯ ಪ್ರಾಥಮಿಕ ಶಾಲೆ, ಮೌಲಾನ ಅಬ್ದುಲ್ ಕಲಾಂ ಅಜಾದ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಮೂಲ ಸೌಕರ್ಯ ಮರಿಚೀಕೆಯಾಗಿವೆ.
ಕನ್ನಡ ಕನ್ಯಾ ಹಿರಿಯ ಪ್ರಾಥಮಿಕ ಶಾಲೆಗೆ ಸಂಬಂಧಿಸಿದ 12 ಕೊಠಡಿ ಇದ್ದು, 10 ಸಂಪೂರ್ಣ ಶಿಥಿಲಾವ್ಯವಸ್ಥೆಯಿಂದ ಕೂಡಿವೆ. ಕೊಠಡಿ ಛಾವಣಿ ಕಿತ್ತು ಹೋಗಿದ್ದು, ಕಬ್ಬಿಣ ಸಲಾಕೆಗಳು ಹೊರ ಬಿದ್ದಿವೆ. ಇದರಿಂದ ವಿದ್ಯಾರ್ಥಿಗಳು ಭಯದಲ್ಲಿ ಕಾಲ ಕಳೆಯುವಂತಾಗಿದೆ. ಉರ್ದು ವಿಭಾಗದ ಕನ್ಯಾ ಹಿರಿಯ ಪ್ರಾಥಮಿಕ ಶಾಲೆ ಇದೇ ಆವರಣದಲ್ಲಿದೆ. ಏಳು ಕೊಠಡಿಗಳಿದ್ದು, ಇದರಲ್ಲಿ 5 ಕೊಠಡಿಗಳು ಬೀಳುವ ಹಂತದಲ್ಲಿವೆ. ಇವುಗಳ ಬಗ್ಗೆ ಶಿಕ್ಷಣಾಧಿಕಾರಿಗಳಿಗೆ ಮಾಹಿತಿ ಇದ್ದರೂ ನಿರ್ಲಕ್ಷ್ಯ ವಹಿಸುತ್ತಿದ್ದಾರೆ.
ಶಾಲಾ ಮುಖ್ಯಶಿಕ್ಷಕರು, ಎಸ್‌ಡಿಎಂಸಿ ಅಧ್ಯಕ್ಷರು ಶಾಲೆ ದುಸ್ಥಿತಿ ಕುರಿತು ಮೇಲಧಿಕಾರಿಗಳಿಗೆ ಹಲವು ವರ್ಷಗಳಿಂದ ಮಾಹಿತಿ ದಾಖಲೆ ಸಲ್ಲಿಸುತ್ತಿದ್ದರೂ ಕಡೆಗಣಿಸಲಾಗುತ್ತಿದೆ. ಶಾಲಾ ಆವರಣದಲ್ಲಿರುವ ಗ್ರಂಥಾಲಯದ ಕಟ್ಟಡ ಸಂಪೂರ್ಣ ಬೀಳುವ ಹಂತದಲ್ಲಿದೆ. ಪುಸ್ತಕಗಳು ಅದೇ ಗ್ರಂಥಾಲಯದಲ್ಲಿ ಸಂಗ್ರಹಿಸಲಾಗಿದೆ. ಮುಖ್ಯಶಿಕ್ಷಕರು ಮಾತ್ರ ಕೊಠಡಿಯೊಳಗೆ ತೆರಳಿ ವಿದ್ಯಾರ್ಥಿಗಳಿಗೆ ಪುಸ್ತಕ ತಂದು ಕೊಡುವ ಕೆಲಸ ಮಾಡುತ್ತಿದ್ದಾರೆ. ಯಾವ ಸಂದರ್ಭದಲ್ಲಿ ಕಟ್ಟಡ ಬಿಳುತ್ತದೆ ಎಂಬ ಆತಂಕ ಶಿಕ್ಷಕ ವರ್ಗ ಹಾಗೂ ವಿದ್ಯಾರ್ಥಿಗಳನ್ನು ಕಾಡುತ್ತಿದೆ. ಹೀಗಾಗಿ ವಿದ್ಯಾರ್ಥಿಗಳನ್ನು ಗ್ರಂಥಾಲಯ ಕಟ್ಟಡ ಪ್ರವೇಶ ಮಾಡುತ್ತಿಲ್ಲ.
ಮಳೆ ಬಂದರೆ ಮೂರು ಶಾಲೆಯಲ್ಲಿರುವ 23 ಕೊಠಡಿಗಳು ನೀರು ಹರಿದು ಹೊರ ಹೋಗಲು ಅವಕಾಶವಿಲ್ಲದೆ ಜಲಾವೃತವಾಗುತ್ತವೆ. ಶಾಲಾ ಆವರಣದಲ್ಲಿ ನಿಲ್ಲುವ ನೀರು ಹೆಚ್ಚಾದಂತೆ ಕೊಠಡಿಗಳಿಗೆ ನುಗ್ಗುತ್ತದೆ. ಇದರಿಂದ ವಿದ್ಯಾರ್ಥಿಗಳು, ಶಿಕ್ಷಕರು ನೀರಿನಲ್ಲಿ ಓಡಾಡಬೇಕಿದೆ. ಅಲ್ಲದೆ ನೀರಿನಲ್ಲಿ ಕುಳಿತು ಪಾಠ ಕೇಳಬೇಕಿದೆ. ಛಾವಣಿಗಳು ಮಳೆ ಬಂದರೆ ಸಂಪೂರ್ಣ ಸೋರುತ್ತವೆ. ವಿದ್ಯಾರ್ಥಿಗಳ ದಾಖಲಾತಿಗಳನ್ನು ಸುರಕ್ಷಿತವಾಗಿ ರಕ್ಷಿಸಲು ಮನೆಗೆ ತಗೆದುಕೊಂಡು ಹೋಗುವ ಅನಿವಾರ್ಯತೆ ಶಿಕ್ಷಕರಲ್ಲಿ ಸೃಷ್ಟಿಸಿದೆ. ಇಷ್ಟೆಲ್ಲ ಸಮಸ್ಯೆ ಇದ್ದರೂ ಈ ಬಗ್ಗೆ ಯಾರೊಬ್ಬರು ಸ್ಪಂದಿಸದಿರುವುದು ವಿಪರ್ಯಾಸ.
ಕನ್ಯಾ ಹಿರಿಯ ಪ್ರಾಥಮಿಕ ಶಾಲೆ ಶಿಥಿಲಾವ್ಯವಸ್ಥೆಯಲ್ಲಿರುವ ಬಗ್ಗೆ ಗಮನಕ್ಕಿದೆ. ಹಲವಾರು ಬಾರಿ ಸರಕಾರಕ್ಕೆ ವರದಿ ಸಲ್ಲಿಸಿದ್ದೇವೆ. ಪ್ರಸಕ್ತ ಸಾಲಿನಲ್ಲಿ ಪುನಃ ನೂತನ ಹೆಚ್ಚುವರಿ ಕೊಠಡಿಗಳ ನಿರ್ಮಾಣ, ಕೆಲ ಕೊಠಡಿಗಳ ದುರಸ್ತಿ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಎಚ್ಕೆಆರ್‌ಡಿಬಿಯಡಿ ಪ್ರಸ್ತಾವನೆ ಸಲ್ಲಿಸಲಾಗಿದೆ.
•ನಾಗರತ್ನಾ ಬೇನಾಳ,
ಕ್ಷೇತ್ರ ಶಿಕ್ಷಣಾಧಿಕಾರಿ, ಸುರಪುರ
ಕಟ್ಟಡ ಯಾವ ಸಂದರ್ಭದಲ್ಲಿ ಬೀಳುತ್ತದೆ ಎಂಬ ಭಯ ಕಾಡುತ್ತಿದೆ. ಮಳೆ ಬಂದರೆ ಸಾಕು ನಮ್ಮ ಗೋಳು ಹೇಳತೀರದು. ಆವರಣದಲ್ಲಿನ ನೀರು ಕೊಠಡಿಯೊಳಗೆ ನುಗ್ಗಿ ಕೊಠಡಿಗಳೆಲ್ಲ ಜಲಾವೃತವಾಗುತ್ತವೆ. ಈ ಕುರಿತು ಜನಪ್ರತಿನಿಧಿಗಳಿಗೆ ಇಲಾಖೆ ಅಧಿಕಾರಿಗಳಿಗೆ ವರದಿ ಸಲ್ಲಿಸಿ ಸಾಕಾಗಿ ಹೋಗಿದೆ. ಯಾರೊಬ್ಬರು ಇತ್ತ ಗಮನ ಹರಿಸುತ್ತಿಲ್ಲ.
•ಮುದ್ದಪ್ಪ ಅಪ್ಪಾಗೋಳ,
ಮುಖ್ಯಗುರು