Advertisement

ಗುಳೆ ಕಾರ್ಮಿಕರಿಗೆ ನರೇಗಾ ಜಾಗೃತಿ

12:42 PM Jan 29, 2020 | |

ಸುರಪುರ: ಕೆಲಸ ಅರಸಿ ನಗರ ಪ್ರದೇಶಗಳಿಗೆ ವಲಸೆ ಹೋಗುವ ಕೂಲಿ ಕಾರ್ಮಿಕರಿಗೆ ಕರಪತ್ರ ಹಾಗೂ ಧ್ವನಿವರ್ಧಕದ ಮೂಲಕ ಜಾಗೃತಿ ಮೂಡಿಸಿ ಸ್ಥಳದಲ್ಲೇ ಸಾಂಕೇತಿಕವಾಗಿ ಉದ್ಯೋಗ ಚೀಟಿ ವಿತರಿಸಲಾಗಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ ಹೇಳಿದರು.

Advertisement

ಬೆಂಗಳೂರಿಗೆ ವಲಸೆ ಹೋಗುತ್ತಿರುವ ಕುಟುಂಬಗಳಿಗೆ ಹಾಗೂ ಸಾರ್ವಜನಿಕರಿಗೆ ನರೇಗಾ ಯೋಜನೆ ಕುರಿತು ನಗರದ ಬಸ್‌ ನಿಲ್ದಾಣದಲ್ಲಿ ಮಂಗಳವಾರ ನಡೆದ ಮಾಹಿತಿ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನರೇಗಾ ಯೋಜನೆಯಡಿ ವರ್ಷದಲ್ಲಿ 100 ದಿನ ಕೂಲಿ ಕೆಲಸ ಒದಗಿಸಲಾಗುವುದು. ಬರಗಾಲ ಸಂದರ್ಭದಲ್ಲಿ ವಿಶೇಷವಾಗಿ 50 ಮಾನವ ದಿನ ಹೆಚ್ಚಿಗೆ ನೀಡಲಾಗುವುದು. ಪ್ರಸಕ್ತ ವರ್ಷ ಪ್ರವಾಹದಿಂದ ತಾಲೂಕಿನ ಜನರು ತತ್ತರಿಸಿ ಹೋಗಿದ್ದಾರೆ. ಆದ್ದರಿಂದ ವಿಶೇಷವಾಗಿ 50 ದಿನ ಹೆಚ್ಚುವರಿ ಕೆಲಸ ನೀಡಲಾಗುವುದು. ಪುರುಷ ಮತ್ತು ಮಹಿಳಾ ಕಾರ್ಮಿಕರಿಗೆ 249 ರೂ. ಸಮಾನ ಕೂಲಿ ನಿಗದಿಪಡಿಸಲಾಗಿದೆ. ಪ್ರತಿಯೊಬ್ಬರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.

ಬಸ್‌ ನಿಲ್ದಾಣದಲ್ಲಿದ್ದ ಕೂಲಿಕಾರರಿಗೆ ಜಾಗೃತಿ ಮೂಡಿಸಿ ಸಾಂಕೇತಿಕವಾಗಿ ಉದ್ಯೋಗ ಚೀಟಿ ವಿತರಿಸಲಾಗಿದೆ. ಬಳಿಕ ಆಯಾ ಗ್ರಾಪಂ ಅಭಿವೃದ್ಧಿ ಅಧಿಕಾರಿ ಅವರನ್ನು ಸಂಪರ್ಕಿಸಿ ದಾಖಲಾತಿ ಸಲ್ಲಿಸಿ ಆನ್‌ ಲೈನ್‌ನಲ್ಲಿ ನೋಂದಣಿ ಮಾಡಿಸಿಕೊಳ್ಳುವಂತೆ ತಿಳಿಹೇಳಲಾಯಿತು. ಕೂಲಿ ಕೆಲಸ ನಿರ್ವಹಿಸಲು ಆಸಕ್ತಿ ತೋರಿಸಿದ ಜನರ ಹೆಸರು, ಗ್ರಾಪಂ ಹೆಸರು ಹಾಗೂ ದೂರವಾಣಿ ಸಂಖ್ಯೆ ನಮೂದಿಸಿಕೊಳ್ಳಲಾಯಿತು.

ಜನರು ಉತ್ತಮವಾಗಿ ಸ್ಪಂದಿಸಿದ್ದಾರೆ. ನಿಲ್ದಾಣದಲ್ಲಿ ಕುಳಿತಿದ್ದವರಿಗೆ, ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರಿಗೆ ನರೇಗಾ ಯೋಜನೆ ಮಹತ್ವ ತಿಳಿಸಿಕೊಡಲಾಯಿತು ಎಂದು ಹೇಳಿದರು.
ನರೇಗಾ ಯೋಜನೆಯಲ್ಲಿ ಪ್ರತಿ ದಿನಕ್ಕೆ 249 ರೂ. ನೀಡಲಾಗುತ್ತಿದೆ ಎಂಬ ವಿಷಯ ನಮಗೆ ತಿಳಿದಿರಲಿಲ್ಲ. ಇಷ್ಟೊಂದು ಕೂಲಿ ನೀಡಿದರೆ ನಾವೇಕೆ ಊರು ಬಿಟ್ಟು ಹೋಗೋಣ. ಮಕ್ಕಳಿಗೆ ಓದಿಸಲು, ಹಿರಿಯರನ್ನು ನೋಡಿಕೊಳ್ಳಲು ಅನುಕೂಲವಾಗುತ್ತಿದೆ ಎಂದು ಬಸ್‌ನಲ್ಲಿದ್ದ ಕೂಲಿಕಾರರು ಹೇಳಿರುವುದಾಗಿ ಇಒ ಹೇಳಿದರು.

Advertisement

ಸಹಾಯಕ ಕೃಷಿ ನಿರ್ದೇಶಕ ದಾನಪ್ಪ ಕತ್ನಳ್ಳಿ, ಸಹಾಯಕ ತೋಟಗಾರಿಕೆ ಅಧಿಕಾರಿ, ಎಡಿ ನರೇಗಾ ಹುಣಸಗಿ ಶರಣಗೌಡ, ಎಡಿ ನರೇಗಾ ಸುರಪುರ ವಿಶ್ವನಾಥ, ತಾಪಂ ಅಧಿಕಾರಿಗಳು, ಪಂಚಾಯತ್‌ ರಾಜ್ಯ ಇಲಾಖೆ ಅಭಿಯಂತರರು, ಎಲ್ಲ ತಾಂತ್ರಿಕ ಸಹಾಯಕರು, ಬಿಎಫ್‌ಟಿಗಳು, ಐಇಸಿ, ಟಿಎಂಐಎಸ್‌ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next