Advertisement

ರಾಜಿ ಸಂಧಾನದಿಂದ 128 ಪ್ರಕರಣ ಇತ್ಯರ್ಥ

10:53 AM Jul 14, 2019 | Naveen |

ಸುರಪುರ: ಇಲ್ಲಿಯ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 614 ಪ್ರಕರಣಗಳಲ್ಲಿ ರಾಜಿ ಸಂಧಾನದ ಮೂಲಕ 128 ಪ್ರಕರಣ ಇತ್ಯರ್ಥ ಪಡಿಸಲಾಯಿತು.

Advertisement

ಹಿರಿಯ ಶ್ರೇಣಿಯ ಪ್ರಧಾನ ಸಿವಿಲ್ ಮತ್ತು ಹೆಚ್ಚುವರಿ ಸಿವಿಲ್ ನ್ಯಾಯಾಲಯ ಸೇರಿದಂತೆ ಮೂರು ನ್ಯಾಯಾಲಯಗಳಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ದಿವಾಣಿ ಮತ್ತು ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದ ವ್ಯಾಜ್ಯಗಳನ್ನು ಎರಡು ಕಡೆಯ ಕಕ್ಷಿದಾರರನ್ನು ಆಹ್ವಾನಿಸಿ ಪರಸ್ಪರ ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಲಾಗಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಚಿದಾನಂದ ಬಡಿಗೇರ ಹೇಳಿದರು.

ಮೂರು ನ್ಯಾಯಾಲಗಳಲ್ಲಿ ವಿವಿಧ ವ್ಯಾಜ್ಯಗಳಿಗೆ ಸಂಬಂಧಿಸಿದಂತೆ 55 ದಿವಾಣಿ, 5 ಕ್ರಿಮಿನಲ್, 40 ಜನನ-ಮರಣ, 3 ಅಪಘಾತ 22 ಬ್ಯಾಂಕ್‌ಗಳಿಗೆ ಸಂಬಂಧಿಸಿದ ಪ್ರಕರಣ ಸೇರಿ ಒಟ್ಟು 128 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ಒಟ್ಟು 42,32,633 ರೂ. ವಸೂಲಾತಿ ಮಾಡಲಾಗಿದೆ ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶರಾದ ತಯ್ಯಬಾ ಸುಲ್ತಾನ್‌ ಮಾತನಾಡಿ, ಸುಪ್ರೀಂ ಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಪ್ರತಿ ತಿಂಗಳು ಎರಡನೇ ಶನಿವಾರ ನ್ಯಾಯಾಲಯದಲ್ಲಿ ರಾಷ್ಟ್ರೀಯ ಲೋಕ ಅದಾಲತ್‌ ಏರ್ಪಡಿಸಲಾಗುತ್ತಿದೆ. ಓರ್ವ ಸಂಧಾನಕಾರ ವಕೀಲರನ್ನು ನೇಮಿಸಿ ಅವರ ಮೂಲಕ ಎರಡು ಪಕ್ಷಗಳ ಕಕ್ಷಿದಾರರ ನಡುವೆ ರಾಜಿ ಸಂಧಾನ ನಡೆಸಿ ಪ್ರಕರಣ ಇತ್ಯರ್ಥಪಡಿಸಲಾಗುವುದು. ಸಣ್ಣಪುಟ್ಟ ವ್ಯಾಜ್ಯಗಳನ್ನು ಇತ್ಯರ್ಥಪಡಿಸಿಕೊಳ್ಳಲು ಕಕ್ಷಿದಾರರಿಗೆ ಇದೊಂದು ಉತ್ತಮ ಅವಕಾಶ ಎಂದರು.

ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಬಿ.ಎನ್‌. ಅಮರನಾಥ ಮಾತನಾಡಿ, ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಯಾವ ಕಕ್ಷಿದಾರರಿಗೆ ಸೋಲು ಎನ್ನುವ ಮಾತೇ ಇರುವುದಿಲ್ಲ. ಈ ಅದಾಲತ್‌ನಲ್ಲಿ ಎರಡು ಕಡೆಯ ಕಕ್ಷಿದಾರರಿಗೆ ನ್ಯಾಯ ದೊರೆಯುತ್ತದೆ. ಕಕ್ಷಿದಾರರು ಚಿಕ್ಕಪುಟ್ಟ ವ್ಯಾಜ್ಯಗಳಿಗೆ ನ್ಯಾಯಾಲಯಕ್ಕೆ ಅಲೆಯುವುದು ತಪ್ಪುತ್ತದೆ. ಹಣ ಮತ್ತು ಸಮಯ ಎರಡು ಉಳಿತಾಯುವಾಗುತ್ತದೆ. ಕಕ್ಷಿದಾರರ ಹಿತದೃಷ್ಟಿ ಇಟ್ಟುಕೊಂಡು ಕಾನೂನು ಸೇವಾ ಪ್ರಾಧಿಕಾರ ಈ ಅದಾಲತ್‌ ಜಾರಿಗೆ ತಂದಿದೆ. ಕಕ್ಷಿದಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ವಕೀಲರಾದ ಮಾನಪ್ಪ ಕವಡಿಮಟ್ಟಿ, ದೇವರಾಜ ನಾಯಕ, ಸಂತೋಷ ಗಾರಂಪಳ್ಳಿ ಸಂಧಾನಕಾರರಾಗಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next