ಸುರಪುರ: ಸದೃಢ ಆರೋಗ್ಯವಿದ್ದಲ್ಲಿ ಸದೃಢ ಮನಸ್ಸು ಇರುತ್ತದೆ ಎಂಬ ಗಾದೆ ಮಾತಿನಂತೆ ಉತ್ತಮ ಆರೋಗ್ಯ ಇದ್ದಾಗ ಮನುಷ್ಯ ಏನನ್ನಾದರು ಸಾಧಿಸಬಹುದು. ಶೈಕ್ಷಣಿಕ ಪ್ರಗತಿ ಮತ್ತು ಒತ್ತಡ ರಹಿತ ಜೀವನ ಸಾಗಿಸಬೇಕಾದರೆ ವಿದ್ಯಾರ್ಥಿನಿಯರು ಮಾನಸಿಕ ಸದೃಢವಾಗಿರಬೇಕು ಎಂದು ಬೆಂಗಳೂರಿನ ರಾಷ್ಟ್ರೀಯ ನರರೋಗ ವಿಜ್ಞಾನ ಸಂಸ್ಥೆ ವೈದ್ಯ ಡಾ| ಹರೀಶ ಹೇಳಿದರು.
ನಗರದ ಜನನಿ ಮಹಿಳಾ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ಜೀವನ ಕೌಶಲ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಮಾನಸಿಕ ಸದೃಢತೆ ಸಾಧಿಸಿದರೆ ಬದುಕಿನಲ್ಲಿ ಎದುರಾಗಬಹುದಾದ ಪ್ರತಿಯೊಂದು ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸಲು ಸಾಧ್ಯವಾಗುತ್ತದೆ ಎಂದರು.
ಬದುಕೆ ಒಂದು ಕೌಶಲ ಅದನ್ನು ಅರ್ಥಪೂರ್ಣವಾಗಿ ಸಾಗಿಸಿದಾಗ ಮಾತ್ರ ಮಾನವನ ಬದುಕಿಗೊಂದು ಬೆಲೆ ಬರುತ್ತದೆ. ಆದ್ದರಿಂದ ತಮ್ಮಲ್ಲಿ ಅಡಗಿರುವ ಕೌಶಲಗಳನ್ನು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಹೊರಹಾಕಿ ಧನಾತ್ಮಕ ಜೀವನವನ್ನು ಸಾಗಿಸಬೇಕು ಎಂದು ಸಲಹೆ ನೀಡಿದರು.
ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮದ ಅಧಿಕಾರಿ ಡಾ| ಮಲ್ಲಿಕಾರ್ಜುನ ಕಮತಗಿ ಮಾತನಾಡಿ, ದಿನಿತ್ಯದ ಬದುಕಿನಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ಅವುಗಳಿಂದ ಭಯಗೊಳ್ಳುವ ಅಥವಾ ಖನ್ನರಾಗುವ ಅಗತ್ಯವಿಲ್ಲ. ಸಮಸ್ಯೆಯನ್ನು ನಿಧಾನವಾಗಿ ಶಾಂತ ಚಿತ್ತ ಮನಸ್ಸಿನಿಂದ ಯೋಚಿಸಬೇಕು ಎಂದು ಸಲಹೆ ನೀಡಿದರು.
ಯಾದಗಿರಿ ಯುವ ಸ್ಪಂದನದ ಯುವ ಸಮಾಲೋಚಕ ರಮೇಶ ಮತ್ತು ಯಂಕೋಬ ಅವರು ವಿದ್ಯಾರ್ಥಿನಿಯರಿಗೆ ನಾನಾ ಚಟುವಟಿಕೆಗಳಲ್ಲಿ ತೊಡಗಿಸಿ ಅವರಲ್ಲಿರುವ ಹಲವು ಕೌಶಲಗಳನ್ನು ತಿಳಿಸಿಕೊಟ್ಟರು. ಕಾಲೇಜಿನ ಪ್ರಾಂಶುಪಾಲ ವೆಂಕಟೇಶ ಜಾಲಗಾರ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಸುವರ್ಣಾ ಅಂಟೋಳಿ, ಮರೆಮ್ಮ ಕಟ್ಟಿಮನಿ, ಬಸವರಾಜೇಶ್ವರಿ, ಬೀರೇಶ ದೇವತ್ಕಲ್, ಚಂದ್ರಶೇಖರ ನಾಯಕ, ಮಹೇಶ ಗಂಜಿ, ಶಿವು ಕ್ವಾಟಿ ಇತರರು ಇದ್ದರು.