ಸುರಪುರ: ಮಾನವ ಹಕ್ಕುಗಳು ರಕ್ಷಣೆಗೆ ಪೊಲೀಸ್ ಇಲಾಖೆ ಮೊದಲ ಆದ್ಯತೆ ನೀಡಬೇಕು. ಯಾವುದೇ ಕಾರಣಕ್ಕೆ ಮಾನವ ಹಕ್ಕುಗಳಿಗೆ ಚ್ಯೂತಿ ಬರದಂತೆ ಜಾಗೃತಿ ವಹಿಸಿ ಕಾರ್ಯ ನಿರ್ವಹಿಸಬೇಕು ಎಂದು ಕಿರಿಯ ಸಿವಿಲ್ ನ್ಯಾಯಾಧೀಶ ಚಿದಾನಂದ ಬಡಿಗೇರ ಹೇಳಿದರು.
ನಗರದ ಪೊಲೀಸ್ ಠಾಣೆಯಲ್ಲಿ ಜಿಲ್ಲಾ ಹಾಗೂ ತಾಲೂಕು ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಪೊಲೀಸ್ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪೊಲೀಸ್ ದೂರು ಪ್ರಾಧಿಕಾರ ಉದ್ಘಾಟನೆ ಮತ್ತು ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪೊಲೀಸರನ್ನು ನೋಡಿದರೆ ಓಡಿ ಹೋಗುವ ಕಾಲ ಹಿಂದೆ ಇತ್ತು. ಆದರೆ ಪ್ರಸ್ತುತ ಇಲ್ಲ. ಕಾನೂನಿನಲ್ಲಿ ಸಾಕಷ್ಟು ಬದಲಾವಣೆ ತರಲಾಗಿದ್ದು, ಸಾರ್ವಜನಿಕ ಸೇತು ಬಂದುವಾಗಿ ಕೆಲಸ ಮಾಡುವಂತೆ ನಿರ್ದೇಶನ ನೀಡಲಾಗುತ್ತಿದೆ. ಹೀಗಾಗಿ ಪೊಲೀಸರು ಯಾವುದೇ ಕಾರಣಕ್ಕೆ ಕಾನೂನು ದುರಪಯೋಗ ಪಡೆಸಿಕೊಳ್ಳುವಂತ್ತಿಲ್ಲ ಎಂದರು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಬಿ.ಎನ್. ಅಮರನಾಥ ಮಾತನಾಡಿ, ಪೊಲೀಸ್ ಇಲಾಖೆ ಸದಾ ಸಾರ್ವಜನಿಕರ ರಕ್ಷಣೆಗೆ ಸನ್ನದ್ಧವಾಗಿರುತ್ತದೆ. ಪೊಲೀಸ್ ಅಧಿಕಾರಿಗಳಿಂದ ತೊಂದರೆಗೊಳಗಾದಲ್ಲಿ ಪ್ರಾಧಿಕಾರಕ್ಕೆ ದೂರು ಸಲ್ಲಿಸಿ ನ್ಯಾಯ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಡಿವೈಎಸ್‌ಪಿ ಶಿವನಗೌಡ ಪಾಟೀಲ ಮಾತನಾಡಿ, ಸಮಾಜದಲ್ಲಿ ಶಾಂತಿ ಕಾಪಾಡಲು ಪೊಲೀಸ್ ಇಲಾಖೆ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುತ್ತದೆ. ಜೀವನದ ಹಂಗು ತೊರೆದು ಅಪರಾಧ ಕೃತ್ಯ ಚಟುವಟಿಕೆಗಳನ್ನು ಮಟ್ಟಹಾಕಲು ಶ್ರಮಿಸುತ್ತಿದೆ. ಸಾರ್ವಜನಿಕರ ಸುರಕ್ಷತೆಗೆ ಪೊಲೀಸ್ ಇಲಾಖೆ ಒತ್ತು ನೀಡುತ್ತದೆ ಎಂದರು. ಪಿಎಸ್‌ಐ ಆನಂದರಾವ್, ವಕೀಲ ಸಂಘದ ಅಧ್ಯಕ್ಷರಾದ ಮಹ್ಮದ್ ಹುಸೇನ್, ವಕೀಲ ಶಿವಾನಂದ ಅವಂಟಿ, ಪೊಲೀಸ್ ಪೇದೆ ದಯಾನಂದ ಮಾತನಾಡಿದರು. ಸಹಾಯಕ ಸರ್ಕಾರಿ ಅಭಿಯೋಜಕ ಮಹಾಂತೇಶ ಪಾಟೀಲ ವೇದಿಕೆಯಲ್ಲಿದ್ದರು. ಪ್ರಮುಖರಾದ ವೆಂಕೋಬ ದೊರೆ, ಶ್ರೀನಿವಾಸ ದೊರೆ, ಭೀಮಾಶಂಕರ ಬಿಲ್ಲವ, ಮಲ್ಲು ಬಿಲ್ಲವ, ದೇವೇಂದ್ರ ಸೂಗೂರು, ಚಂದ್ರಶೇಖರ, ಮಹಾದೇವ ಕಮತಗಿ, ಶಾಂತಪ್ಪ ಸೂಗೂರು, ಈರಪ್ಪ ಕುಂಬಾರು ಇದ್ದರು