ಸುರಪುರ: ಹಿರಿಯ ನಾಗರಿಕರನ್ನು ಅಗೌರವಿಸುವುದು ಮತ್ತು ಹೆಣ್ಣು ಭ್ರೂಣ ಪತ್ತೆ ಹಾಗೂ ಹತ್ಯೆ ಇವೆರಡು ಶಿಕ್ಷಾರ್ಹ ಅಪರಾಧವಾಗಿದೆ. ಅಂತವರಿಗಾಗಿ ಹಿರಿಯ ನಾಗರಿಕರ ಸಂರಕ್ಷಣಾ ಹಾಗೂ ಭ್ರೂಣ ಹತ್ಯೆ ತಡೆ ಕಾಯ್ದೆ ಅಡಿ ಕಠಿಣ ಶಿಕ್ಷೆ ವಿಧಿಸಬಹುದಾಗಿದೆ ಎಂದು ಸಿವಿಲ್ ನ್ಯಾಯಾಧೀಶ ಚಿದಾನಂದ ಬಡಿಗೇರ
ಹೇಳಿದರು.
ನಗರದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಹಾಗೂ ವಕೀಲರ ಸಂಘದ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ಹಾಗೂ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಂದೆ, ತಾಯಿ. ಗುರು ಹಿರಿಯರನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಅದೇ ತೆರನಾಗಿ ಗಂಡು ಬೇಕು ಹೆಣ್ಣು ಬೇಡ ಎಂಬ ಮನೋಭಾವ ಒಳ್ಳೆಯದಲ್ಲ. ಹೆಣ್ಣಿರಲಿ ಗಂಡಿರಲಿ ಮಕ್ಕಳಲ್ಲಿ ಲಿಂಗ ಬೇಧ ಮಾಡದೆ ಸಮಾನತೆಯಂದ ಕಾಣುವುದು ಪ್ರತಿಯೊಬ್ಬ ಪಾಲಕರ ಕರ್ತವ್ಯವಾಗಿದೆ. ಇದನ್ನು ಉಲ್ಲಂಘಿ ಸುವವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಸಿವಿಲ್ ನ್ಯಾಯಾಧೀಶೆ ತಯ್ಯಬಾ ಸುಲ್ತಾನ್ ಮಾತನಾಡಿ, ಹೆಣ್ಣು ಹುಣ್ಣಲ್ಲ ಜಗದ ಕಣ್ಣು. ಈ ಮನೋಭಾವ ಪ್ರತಿಯೊಬ್ಬ ಪಾಲಕರಲ್ಲಿ ಬೇರೂರಬೇಕು. ಹೆಣ್ಣಿರಲಿ ಗಂಡಿರಲಿ ಬಂಜೆ ಎಂಬ ಶಬ್ದ ಹೊರಲಾರೆ ಎಂಬ ಜನಪದ ಹಾಡಿನ ಗರತಿಯರು ಹೇಳುವಂತೆ ಮಕ್ಳಳ ಸಂಪತ್ತು ಹೊಂದಿದ್ದರೆ ಸಾಕು ಅದುವೇ ಕಟುಂಬದ ಶೋಭೆ. ಸಮಾಜದಲ್ಲಿ ಮಕ್ಕಳಿಂದ ತಂದೆ ತಾಯಿಗೆ ಗೌರವಿದೆ ಹೊರತು ತಂದೆ, ತಾಯಿಯಿಂದ ಅಲ್ಲ. ಕಾರಣ ಮಕ್ಕಳಲ್ಲಿ ಬೇಧಭಾವ ಬೇಡ. ಗಂಡು ಮಗವಿಗೆ ನೀಡುವಷ್ಟು ಸಮಾನ ಅವಕಾಶಗಳನ್ನು ಹೆಣ್ಣು ಮಗುವಿಗೂ ನೀಡುವ ಮೂಲಕ ಅವಳನ್ನು ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.
ವೃದ್ದಾಪ್ಯದಲ್ಲಿರುವ ತಂದೆ, ತಾಯಿಯನ್ನು ವೃದ್ದಾಶ್ರಮಗಳಿಗೆ ತಳುತ್ತಿರುವ ಧಾರುಣ ಘಟನೆಗಳು ಇತ್ತೀಚೆಗೆ ಸಮಾಜದಲ್ಲಿ ನಡೆಯುತ್ತಿವೆ. ಇಂತಹ ಕೃತ್ಯಕ್ಕೆ ಒಳಗಾಗುವ ಸಂತ್ರಸ್ತರು ಹಿರಿಯ ನಾಗರಿಕ ಹಿತರಕ್ಷಣಾ ಕಾಯ್ದೆ ಅಡಿ ಸಹಾಯಕ ಆಯುಕ್ತರಿಗೆ ದೂರು ಸಲ್ಲಿಸಿ ಆಸ್ತಿ ಮರಳಿ ಪಡೆಯಬಹುದು ಅಥವಾ ಕಾನೂನು ಸೇವಾ ಪ್ರಾಧಿಕಾರದಲ್ಲಿ ದೂರು ದಾಖಲಿಸಿ ನ್ಯಾಯ ಪಡೆದುಕೊಳ್ಳಬಹುದು.
ಹಿರಿಯ ನಾಗರಿಕರು ಕಾನೂನು ನೆರವು ಪಡೆದುಕೊಳ್ಳಬೇಕು ಎಂದು ಹೇಳಿದರು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಬಿ.ಎನ್. ಅಮರನಾಥ, ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಮಹ್ಮದ್ ಹುಸೇನ್, ಸಹಾಯಕ ಸಿಡಿಪಿಒ ಮೀನಾಕ್ಷಿ
ಪಾಟೀಲ ಮಾತನಾಡಿದರು.
ಹೆಣ್ಣು ಭ್ರೂಣ ಪತ್ತೆ, ಹತ್ಯೆ ಕುರಿತು ನ್ಯಾಯವಾದಿ ಸವಿತಾ ಮಾಲಿಪಾಟೀಲ
ಹಾಗೂ ಹಿರಿಯ ನಾಗರಿಕ ಸಂರಕ್ಷಣಾ ಕಾಯ್ದೆ ಕುರಿತು ವಿ.ಎಸ್. ಬೈಚಬಾಳ ಉಪನ್ಯಾಸ ನೀಡಿದರು.
ಹಿರಿಯ ವಕೀಲ ಬಸಲಿಂಗಪ್ಪ ಪಾಟೀಲ, ಎಸ್. ಸಿದ್ರಾಮಪ್ಪ, ನಂದನಗೌಡ ಪಾಟೀಲ ಇದ್ದರು. ವಕೀಲರ ಸಂಘದ ಕಾರ್ಯದರ್ಶಿ ಮಲ್ಲು ಭೋವಿ ನಿರೂಪಿಸಿ ವಂದಿಸಿದರು.