ಸುರಪುರ: ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಹೆಚ್ಚು ಪ್ರಚಲಿತದಲ್ಲಿ ಇರುವ ಕಿನ್ನಾಳ ಕಲೆ ಅಳಿವಿನಂಚಿನಲ್ಲಿದ್ದು, ಸಂರಕ್ಷಿಸಲು ಸರ್ಕಾರದ ಪ್ರೋತ್ಸಾಹದ ಅಗತ್ಯವಿದೆ. ಈ ಮೂಲಕ ಕಿನ್ನಾಳ ಕಲೆ ಕಲಾವಿದರು, ಕಲೆಯನ್ನು ಉಳಿಸಿ ಮುಂದಿನ ಪೀಳಿಗೆಗೆ ಕೊಂಡೊಯ್ಯುವುದು ಇಂದಿನ ಅವಶ್ಯವಾಗಿದೆ.
Advertisement
ದೇವರ ಪಲ್ಲಕ್ಕಿ ಮತ್ತು ಚಪ್ಪರಗಳು, ರಥಗಳ ಅಲಂಕಾರಿಕ ವಸ್ತುವಿನಲ್ಲಿ ಕಡುಬಣ್ಣದ ಬಟ್ಟೆಗಳ ಮೇಲೆ ವರ್ಣರಂಜಿತವಾಗಿ ಬಿಡಿಸುವ ಚಿತ್ರಗಳನ್ನು ಕಿನ್ನಾಳದ ಕಲೆ ಎನ್ನಲಾಗುತ್ತದೆ. ಇದನ್ನು ಈ ಹಿಂದೆ ಅರಸೊತ್ತಿಗೆ ಸಂದರ್ಭದಲ್ಲಿ ರಾಜ-ಮಹಾರಾಜರು ಬಳಸುತ್ತಿದ್ದರು. ಈಗಲೂ ದೇವರ ಕಾರ್ಯಕ್ರಮಗಳಲ್ಲಿ ಉಪಯೋಗಿಸಲಾಗುತ್ತಿದೆ. ವಿಜಯನಗರ ಸಾಮ್ರಾಜ್ಯದಲ್ಲಿ 1430ರಿಂದ 1450ರ ದಶಕದಲ್ಲಿ ಕಿನ್ನಾಳ ಕಲೆ ಹೆಚ್ಚು ಜನಪ್ರಿಯವಾಗಿತ್ತು.
Related Articles
Advertisement
ತಯಾರಿಸುವ ರೀತಿ: ಮಕಮಲ್(ವೆಲ್‌ವೇಟ್) ಬಟ್ಟೆ, ಚೀನಾ ರೇಷ್ಮೆ, ಜರತಾರಿ ಬಟ್ಟೆಗಳ ಮೇಲೆ ಕಿನ್ನಾಳ ಕಲೆ ಬಿಡಿಸಲಾಗುತ್ತದೆ. ಪಲ್ಲಕ್ಕಿ, ಚೌಕಿ, ದೇವರ ವಿಗ್ರಹದ ಮಂಟಪಗಳಿಗೆ ಸಾಗವಾನಿ, ನೆಲಮದ್ದಿ, ಮಲೇಗನ್, ನೀಲಗಿರಿ, ಭಜ್ಜಿ ಕಟ್ಟಿಗೆಯಿಂದ ಸಿದ್ಧಪಡಿಸಲಾಗುತ್ತದೆ.
ಕಚ್ಚಾ ಸಾಮಗ್ರಿಗಳು: ಛತ್ರಿ, ಚಾಮರ, ಛಪ್ಪರ, ಗೊಂಡೆ, ರಾಜಗೊಂಡೆಗಳ ತಯಾರಿಕೆಗಾಗಿ ಕಚ್ಚಾ ಸಾಮಾಗ್ರಿಗಳನ್ನು ಹೈದರಬಾದ್, ಹೊಸಪೇಟೆ, ವಿಜಯಪುರ, ಆಂಧ್ರದ ಅನಂತಪುರದಿಂದ ತರಲಾಗುತ್ತದೆ. ವೆಲ್ ವೇಟ್, ಚೀನಾ ರೇಷ್ಮೆ, ಜರತಾರಿ ಬಟ್ಟೆಗಳ ಮೇಲೆ ಕೈಯಿಂದಲೇ ಕಸೂತಿ ಕೆಲಸದಿಂದ ಆಕರ್ಷಕವಾಗಿ ಚಿತ್ರಗಳನ್ನು ನೇಯಲಾಗುತ್ತದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಿನ್ನಾಳ ಕಲೆ ಉಪಯೋಗಿಸುತ್ತಿರುವುದು ದರ್ಶನಕರ ಏಕೈಕ ಕಟುಂಬ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬೀದರ, ಕಲಬುರಗಿ, ರಾಯಚೂರು, ವಿಜಯಪುರ ಸೇರಿದಂತೆ ರಾಜ್ಯ ಹಾಗೂ ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳಿಂದ ಅನೇಕ ಭಕ್ತರು ಆಗಮಿಸಿ ದೇವರ ಪಲ್ಲಕ್ಕಿ, ಛತ್ರಿ, ಚಾಮರ, ಗೊಂಡೆ, ರಾಜಗೊಂಡೆ, ಜಗಜಂಪಗಳನ್ನು ಮಾಡಿಸಿಕೊಂಡು ಹೋಗುತ್ತಾರೆ ಎನ್ನುತ್ತಾರೆ ಕಲಾವಿದ ವೆಂಕೋಬ ದರ್ಶನಕರ.