ಸುರಪುರ: ರಂಗಂಪೇಟೆಯ ನಗರೇಶ್ವರ ದೇವಸ್ಥಾನದಲ್ಲಿ ಆರ್ಯವೈಶ್ಯ ಸಮಾಜ ಬಾಂಧವರಿಂದ ಮಂಗಳವಾರ ಕನ್ನಿಕಾ ಪರಮೇಶ್ವರಿ ಜಯಂತ್ಯುತ್ಸವ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಜಯಂತ್ಯುತ್ಸವ ನಿಮಿತ್ತ ದೇವಸ್ಥಾನಕ್ಕೆ ಸುಣ್ಣ ಬಣ್ಣ ಬಳಿದು ತಳಿರು ತೋರಣ ಕಟ್ಟಿ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಬೆಳಗ್ಗೆ 5:00 ಗಂಟೆಯಿಂದ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ಜರುಗಿದವು.
ಬೆಳಗ್ಗೆ 6:00 ಗಂಟೆಗೆ ನಿರ್ಮಾಲ್ಯ ವಿಸರ್ಜನೆ, ಕನ್ನಿಕಾ ಪರಮೇಶ್ವರಿ ಮೂರ್ತಿಗೆ ಅಲಂಕಾರ, ದೇವಿಯ ಅಷ್ಟೋತ್ತರ ಪಾರಾಯಣ, ಸಹಸ್ರನಾಮಾವಳಿ ಸಹಿತ ಕುಂಕುಮಾರ್ಚನೆ, ಪುಷ್ಪಾರ್ಚನೆ, ಮಂಗಳಾರತಿ, ಮಹಾ ಮಂಗಳಾರತಿ, ಮಂತ್ರ ಪುಷ್ಪ, ತೀರ್ಥ ಪ್ರಸಾದ ವಿನಿಯೋಗವಾಯಿತು. ಅರ್ಚಕ ರಾಘವೇಂದ್ರ ರಾಜಪುರೋಹಿತ ಪೌರೋಹಿತ್ಯ ವಹಿಸಿದ್ದರು.
ಇದೇ ವೇಳೆ 21 ಜನ ಕುಮಾರಿಯರಿಗೆ 21 ಜನ ಮುತ್ತೈದಿಯರಿಗೆ ಉಡಿ ತುಂಬಿ ವಸ್ತ್ರ ಸಮರ್ಪಣೆ ಮಾಡಲಾಯಿತು. ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಿ ಸತ್ಕರಿಸಲಾಯಿತು. ಈ ವೇಳೆ ಸಮಾಜದ ಮುಖಂಡ ಲಕ್ಷ ್ಮಯ್ಯ ಕಲಕೊಂಡ ಮಾತನಾಡಿ, 33 ಕೋಟಿ ದೇವತೆಗಳಲ್ಲಿ ಕನ್ನಿಕಾ ಪರಮೇಶ್ವರಿಯ ಮಹತ್ವ ಅಪಾರವಾಗಿದೆ ಎಂದರು. ಶ್ರೀ ವಲ್ಲಭ ಕಡಬೂರ ಮಾತನಾಡಿ, ಸಮಾಜ ಬಾಂಧವರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕು ಎಂದು ಸಲಹೆ ನೀಡಿದರು.
ಸಂಜೆ ವಾಹನೋತ್ಸವ, ತೊಟ್ಟಿಲು ಸೇವೆ, ಭಜನೆ, ಸಂಗೀತ ಮಂಗಳಾರತಿ, ಮಂತ್ರ ಪುಷ್ಪ ತೀರ್ಥ ಪ್ರಸಾದ ವಿನಿಯೋಗವಾಯಿತು. ಯುವಕ ಯುವತಿಯರಿಗೆ ವಿವಿಧ ಕ್ರೀಡೆಗಳು ಜರುಗಿದವು. ಹಲವಾರು ಯುವಕ ಯುವತಿಯರು ಕ್ರೀಡೆಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ವಿಜೇತರಿಗೆ ಪಾರಿತೋಷಕ ವಿತರಣೆ ಮಾಡಲಾಯಿತು.
ಸಮಾಜದ ಪ್ರಮುಖರಾದ ಕೃಷ್ಟಯ್ಯ ಕಲಕೊಂಡ, ರಾಮಾಂಜನೇಯ ಪೋಲಂಪಲ್ಲಿ, ಗೋಪಾಲಯ್ಯ ಗೌಡಗೇರಿ, ತಿಪ್ಪಯ್ಯ ಪೋಲಂಪಲಿ, ವಾಸುದೇವ ಹೋಬಳಶೆಟ್ಟಿ, ಗುರುರಾಜ ಪೋಲಂಪಲ್ಲಿ, ಶ್ರೀರಾಮ ಕಡಬೂರ, ಗುರುರಾಜ ಪೋಲಂಪಲ್ಲಿ (ಮಂಡಾಳ), ಜೈರಾಮ ಕಡಬೂರ, ಶ್ರೀನಿವಾಸ ಚಿತ್ರಾಲ, ನರಸಯ್ಯ ಹಯ್ನಾಳ, ರಘುರಾಮ ಕಡಬೂರ ಇದ್ದರು.