ಸುರಪುರ: ಜಗತ್ತಿನ ಭೂಮಂಡಲದಲ್ಲಿ ಘಟಿಸುವ ಶತಶತಮಾನಗಳ ವಿದ್ಯಮಾನಗಳ ಭವಿಷ್ಯ ತಿಳಿಸುವ ಕಾಲಜ್ಞಾನ ಸಾಹಿತ್ಯ ವಿನಾಶದ ಅಂಚಿನಲ್ಲಿದೆ. ಅಪರೂಪದ ಸಾಹಿತ್ಯ ಉಳಿಸಿ ಬೆಳೆಸುವುದು ಇಂದಿನ ಅಗತ್ಯವಾಗಿದೆ.
Advertisement
ವಿಜಯಪುರ, ಯಾದಗಿರಿ, ರಾಯಚೂರು, ಮೈಸೂರು, ಮಂಡ್ಯ, ಚಾಮರಾಜನಗರ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಸಾರುವ ಐನಾರರು ಕಾಲಜ್ಞಾನವನ್ನು ಪ್ರಚಾರ ಮಾಡುವುದರ ಜತೆಗೆ ಭವಿಷ್ಯದಲ್ಲಿ ಏನಾಗುತ್ತದೆ ಎಂಬುದರ ಕುರಿತು ತಿಳಿಸುವ ಕೆಲಸ ಮಾಡುತ್ತಿದ್ದಾರೆ. ನೇಕಾರ ಸಮುದಾಯದವರಿಂದ ಕಾಲಜ್ಞಾನ ಸಾಹಿತ್ಯ ರಕ್ಷಿಸುವ ಕೆಲಸವಾಗುತ್ತಿದೆ.
Related Articles
Advertisement
ಅಮರಗನ್ನಡ ಲಿಪಿ: ಕಾಲಜ್ಞಾನ ಸಾಹಿತ್ಯಕ್ಕೆ ಬಳಸಿದ ಲಿಪಿ ಅತ್ಯಂತ ರಹಸ್ಯವಾಗಿದೆ. ಕನ್ನಡ, ಉರ್ದು, ತೆಲುಗು ಸೇರಿದಂತೆ 11 ಭಾಷೆಗಳ ಸಮ್ಮಿಳಿತವಾಗಿದೆ. ಈ ಲಿಪಿಗೆ ಅಮರಗನ್ನಡ ಎಂದು ಕರೆಯುಲಾಗುತ್ತಿದೆ. ಗುರು ಬೋಧಿ, ಉಪದೇಶ ಬೋಧಿ, ಧರ್ಮ ಬೋಧಿ, ಶಿಷ್ಯ ಬೋಧಿ, ರಗಳೆ, ಬಿಡಿ ವಚನಗಳ ರೂಪದಲ್ಲಿ ಈ ಸಾಹಿತ್ಯ ಲಭ್ಯವಿದೆ. ಇದನ್ನು ವಿಶೇಷವಾಗಿ ಕೊಡೇಕಲ್ ಬಸವಣ್ಣನ ಸಾಹಿತ್ಯ ಎಂದೇ ಪ್ರಖ್ಯಾತವಾಗಿದೆ.
2 ಸಾವಿರ ಹಸ್ತಪ್ರತಿ ಲಭ್ಯ: ಈಗಾಗಲೆ 2 ಸಾವಿರಕ್ಕೂ ಹೆಚ್ಚು ಹಸ್ತ ಪ್ರತಿಗಳು ಲಭ್ಯವಾಗಿವೆ. ಇನ್ನಷ್ಟು ಪ್ರತಿಗಳು ಲಭ್ಯವಾಗದೆ ಅಲ್ಲಲ್ಲಿ ಉಳಿದಿವೆ. ಬಸವಣ್ಣನ ದೇವಸ್ಥಾನ ಅಲ್ಲದೆ ಕೊಡೇಕಲ್, ದ್ಯಾಮನಾಳ, ರುಕ್ಮಾಪುರ, ನಂದ್ಯಾಳ, ಅಮ್ಮಾಪುರ, ಹೊಕ್ರಾಣಿ, ಕಗ್ಗೋಡ, ದೇವರ ಹಿಪ್ಪರಗಿ, ಸೇರಿದಂತೆ ಬಸವಣ್ಣನವರ ಶಿಷ್ಯ ಬಳಗ ನೆಲೆಸಿರುವ ಇತರೆ ಗ್ರಾಮಗಳಲ್ಲಿ ಪ್ರತಿಗಳು ಲಭ್ಯ ಇವೆ.
ನಂಬಿಕೆ ಜೀವಂತ: ಕಲ್ಯಾಣ ಕರ್ನಾಟಕ ಭಾಗದ ಜನಮಾನಸದಲ್ಲಿ ಕಾಲಜ್ಞಾನ ಸಾಹಿತ್ಯ ಭವಿಷ್ಯವನ್ನು ಖಚಿತವಾಗಿ ತಿಳಿಸುತ್ತದೆ ಎಂಬ ನಂಬಿಕೆ ಗಾಢವಾಗಿ ನೆಲೆಯೂರಿದೆ. 15ನೇ ಶತಮಾನದಲ್ಲಿ ಕೊಡೇಕಲ್ ಬಸವಣ್ಣನವರು ಸಾರಿರುವ ಬಹುತೇಕ ಭವಿಷ್ಯಗಳು ವಾಸ್ತವದಲ್ಲಿ ಸತ್ಯವಾಗುತ್ತ ಸಾಗಿರುವುದು ಕಾಲಜ್ಞಾನ ಸಾಹಿತ್ಯದ ಹಿರಿಮೆಯಾಗಿದೆ. ಹೀಗಾಗಿ ಕಾಲಜ್ಞಾನಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತಿದೆ.
ಸಾಹಿತ್ಯ ರಕ್ಷಿಸುವ ಕೆಲಸವಾಗಲಿ: ಕಾಲಜ್ಞಾನ ಸಾಹಿತ್ಯ ಪ್ರಸ್ತುತ ದಿನಗಳಲ್ಲಿ ಅವಸಾನದ ಅಂಚಿನಲ್ಲಿದೆ. ಕೊಡೇಕಲ್ ದೇವಸ್ಥಾನದಲ್ಲಿರುವ ಗ್ರಂಥಗಳನ್ನು ಮಾತ್ರ ಸುರಕ್ಷಿತವಾಗಿಡಲಾಗಿದೆ. ಇನ್ನುಳಿದಂತೆ ಅಲ್ಲಲ್ಲಿ ಸಿಗುವ ಹಸ್ತಪ್ರತಿಗಳು ರಕ್ಷಣೆ ಇಲ್ಲದೆ ಹಾಳಾಗಿ ಹೋಗುತ್ತಿವೆ. ಜಾಗೃತಿ ಹಾಗೂ ಲಿಪಿ ಭಾಷಾ ಗ್ರಹಿಕೆ ಕೊರತೆಯಿಂದ ಕೆಲ ಪ್ರತಿಗಳು ಕೆಲವರ ಕೈಗೆ ಸಿಕ್ಕರೂ ಗುರುತಿಸಲು ಸಾಧ್ಯವಾಗುತ್ತಿಲ್ಲ.
ಕೆಲ ಮನೆತನಕ್ಕೆ ಸಾಹಿತ್ಯ ಸೀಮಿತ: ಐನಾರರು ಮತ್ತು ಕೊಡೇಕಲ್ ಗ್ರಾಮದ ಕೆಲ ಮನೆತನದವರನ್ನು ಹೊರತುಪಡಿಸಿ ಬೇರ್ಯಾರು ಸಾಹಿತ್ಯ ಓದಲು ಸಾಧ್ಯವಿಲ್ಲ. ಕೊಡೇಕಲ್ಲದ ಅಪ್ಪಾಗೋಳ ಮತ್ತು ಇತರೆ ಕೆಲವರು ಸಾಹಿತ್ಯವನ್ನು ನಿರ್ಗಳವಾಗಿ ಓದುತ್ತಾರೆ. ಕಾರಣ ಆಯಾ ಗ್ರಾಮಗಳಲ್ಲಿ ನೆಲೆಸಿರುವ ಕೊಡೇಕಲ್ ಬಸವಣ್ಣನ ಭಕ್ತರು ತಮ್ಮಲ್ಲಾಗಲಿ, ಇತರರಲ್ಲಾಗಲಿ ಸಿಗುವ ಹಸ್ತಪ್ರತಿ ಅಥವಾ ಅವುಗಳ ಝೆರಾಕ್ಸ್ ಪ್ರತಿಗಳನ್ನು ದೇವಸ್ಥಾನದ ಅರ್ಚಕರಿಗೆ, ಕಮಿಟಿಯವರಿಗೆ ನೀಡಿ ಸಹಕರಿಸುವುದು ಅಗತ್ಯವಾಗಿದೆ.
ಕಾಲಜ್ಞಾನ ಸಾಹಿತ್ಯ ಎಲ್ಲರಿಗೂ ಓದಲು ಸಾಧ್ಯವಿಲ್ಲ. ಹಾಗಾಗಿ ಇದನ್ನು ಸಂಶೋಧನೆಗೆ ಒಳಪಡಿಸಿ ಸರಳಗನ್ನಡಕ್ಕೆ ತರ್ಜಮೆ ಮಾಡುವ ಕೆಲಸವಾಗಬೇಕು. ಸಾಮಾನ್ಯರು ಸಹ ಕಾಲಜ್ಞಾನ ಸಾಹಿತ್ಯ ಓದುವಂತಾಗಲು ಪುಸ್ತಕ ಪ್ರಾಧಿಕಾರ ಸಮಿತಿ ಆಸಕ್ತಿ ವಹಿಸಬೇಕು. •ಮುದ್ದಪ್ಪ ಅಪ್ಪಗೋಳ, ಕೊಡೇಕಲ್ ಶಿಕ್ಷಕ ಕಾಲಜ್ಞಾನ ಸಾಹಿತ್ಯ ದೊರೆಯುವುದು ಅತ್ಯಂತ ವಿರಳ. ಕೊಡೇಕಲ್ ಬಸವಣ್ಣನವರ ಸಾಹಿತ್ಯ ರಾಜ್ಯದ ಸಾಮಾನ್ಯ ಜನರಿಗೂ ತಲುಪಿಸುವ ಕಾರ್ಯಕ್ಕೆ ಒತ್ತು ನೀಡಲಾಗುವುದು. ವಿವಿಧೆಡೆ ಹಂಚಿ ಹೋಗಿರುವ ಸಾಹಿತ್ಯ ಕಲೆ ಹಾಕಿ ಕನ್ನಡಕ್ಕೆ ತರ್ಜಮೆ ಮಾಡಲು ಸಹಕರಿಸಲಾಗುವುದು.
• ರಾಜೂಗೌಡ, ಶಾಸಕ ಸುರಪುರ