ಸುರಪುರ: ಈಚೆಗೆ ಬಸವ ಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಅಧಿಕ ನೀರು ಹರಿಸಿದ್ದರಿಂದ ನೆರೆ ಹಾವಳಿ ಸೃಷ್ಟಿಯಾಗಿ ತಾಲೂಕಿನಾದ್ಯಂತ ಜೆಸ್ಕಾಂ ಇಲಾಖೆಗೆ 4 ಕೋಟಿಗೂ ಅಧಿಕ ನಷ್ಟವಾಗಿದೆ ಎಂದು ವಿದ್ಯುತ್ ಸರಬರಾಜು ಇಲಾಖೆ ವ್ಯವಸ್ಥಾಪಕ ನಿರ್ದೇಶಕ ರಾಘಪ್ರಿಯ ತಿಳಿಸಿದರು.
ಈ ಕುರಿತು ರವಿವಾರ ನೆರೆ ಹಾವಳಿಗೆ ತುತ್ತಾದ ತಾಲೂಕಿನ ನದಿ ತಟದ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಹಾನಿ ಕುರಿತು ಪರೀಶಿಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲಾಖೆಗೆ ತಾಲೂಕಿನಲ್ಲಿ ಇದುವರೆಗೂ ಕಂಡು ಕೇಳರಿಯದಷ್ಟು ನಷ್ಟವಾಗಿದೆ. ಕಳೆದ 10 ವರ್ಷಗಳ ಹಿಂದೆ ಪ್ರವಾಹ ಬಂದಾಗ ಇಷ್ಟೊಂದು ಹಾನಿಯಾಗಿರಲಿಲ್ಲ ಎಂದರು.
ಇಲಾಖೆ ನೀಡಿದ್ದ ಮಾಹಿತಿ ಮೇರೆಗೆ ತಾಲೂಕಿನ ನದಿ ಪಾತ್ರದ ವಿವಿಧ ಗ್ರಾಮಗಳಿಗೆ ಖುದ್ದು ಭೇಟಿ ನೀಡಿದ್ದೇನೆ. ಎಲ್ಲಡೆ ಬಾರಿ ಪ್ರಮಾಣದಲ್ಲಿ ನಷ್ಟವಾಗಿರುವುದು ಕಂಡು ಬಂದಿದೆ. 80 ಕಿ.ಮೀಟರ್ ಹೆಚ್ಚು ವಿದ್ಯುತ್ ತಂತಿ ಹರಿದು ಹೋಗಿವೆ, 383 ವಿದ್ಯುತ್ ಪರಿವರ್ತಕಗಳು (ಟಿಸಿ) ಸುಟ್ಟು ಹೋಗಿವೆ. 876ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ. ಇದರಲ್ಲಿ 14 ಟಿಸಿ ಗಳು ನೀರಲ್ಲಿ ಕೊಚ್ಚಿಕೊಂಡು ಹೋಗಿವೆ ಎಂದು ತಿಳಿಸಿದರು.
ಚಂದ್ಲಾಪುರ, ಚೌಡೇಶ್ವರಿಹಾಳ, ಹೆಮ್ಮಡಗಿ, ಅಡ್ಡಡೊಗಿ, ಸೂಗೂರು, ಹೆಮನೂರ ಸೇರಿ 136 ಟಿ ಸಿ, 260 ಕಂಬಗಳು ಹಾಣಿಗೆ ಒಳಗಾಗಿವೆ. ಟಿಸಿ, ವಿದ್ಯುತ್ ಕಂಬ, ಹಾಳಾದ ವಿದ್ಯುತ್ ತಂತಿ ಸೇರಿ ಒಟ್ಟು 4 ಕೋಟಿಗೂ ಅಧಿಕ ಹಾನಿಯಾಗಿದೆ ಎಂದು ವಿವರಿಸಿದರು.
ಡಿಟಿಒ ಜಯಕುಮಾರ ಮಾತನಾಡಿ, ರೈತರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಈಗಾಗಲೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇಲಾಖೆ 10 ಜನ ಅಧಿಕಾರಿಗಳು, 180 ಜನ ಕಾರ್ಮಿಕರು, 18 ಜನ ಗುತ್ತಿಗೆದಾರರು ಮತ್ತು ಸಿಬ್ಬಂದಿಗಳು ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಕಳೆದ ನಾಲ್ಕಾರು ದಿನಗಳಲ್ಲಿ 180 ಟಿಸಿಗಳನ್ನು ಅಳವಡಿಸಲಾಗಿದೆ. 4 ನೂರಕ್ಕೂ ಮೇಲ್ಪಟ್ಟು ಕಂಬಗಳನ್ನು ಹಾಕಲಾಗಿದ್ದು, ಕಾಮಗಾರಿ ಮುಗಿದಿರುವ ಕಡೆ ವಿದ್ಯುತ್ ಸರಬರಾಜು ನೀಡಲಾಗಿದೆ ಎಂದು ವಿವರಿಸಿದರು.
ಮುಖ್ಯ ಕಾರ್ಯನಿರ್ವಾಹಕ ಅಭಿಯಂತ ಆರ್,ಡಿ. ಚಂದ್ರಶೇಖರ ಮಾತನಾಡಿ, ನದಿ ಮತ್ತು ಹಳ್ಳಗಳ ದಂಡೆಗಳ ಕೆಲ ಕಡೆ ನೀರು ನಿಂತಿರುವ ಪ್ರದೇಶಗಳಲ್ಲಿ ಕೆಲಸಕ್ಕೆ ಅಡಚಣೆಯಾಗುತ್ತಿದೆ. ಭೂಮಿ ಒಣಗಿರುವ ಪ್ರದೇಶಗಳಲ್ಲಿ ಕೆಲಸ ಮಾಡಲಾಗುತ್ತಿದೆ. ಹಂತ ಹಂತವಾಗಿ ಕೆಲಸ ಮಾಡಿ ಸಮರ್ಪಕ ವಿದ್ಯುತ್ ಒದಗಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದೇವೆ. ರೈತರು ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ತಿಳಿಸಿದರು. ಜೆಸ್ಕಾಂ ಇಲಾಖೆ ಅಧೀಕ್ಷಕ ಮೋಹನಕುಮಾರ, ವಿಭಾಗೀಯ ಇಇ ರಾಘವೇಂದ್ರ ಇದ್ದರು.