Advertisement

ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯ

12:52 PM Jul 21, 2019 | Naveen |

ಸುರಪುರ: ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದಿರುವ ಪಿಂಜಾರ, ನದಾಫ್‌ ಸಮುದಾಯವನ್ನು ಅಭಿವೃದ್ಧಿ ಪಡಿಸಲು ಸರಕಾರ ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು ಎಂದು ಪಿಂಜಾರ, ನದಾಫ್‌ ವಿವಿದೋದ್ದೇಶ ಸೇವಾ ಸಂಘದ ಜಿಲ್ಲಾಧ್ಯಕ್ಷ ಅಹ್ಮದ್‌ ಪಠಾಣ ಒತ್ತಾಯಿಸಿದರು.

Advertisement

ನಗರದ ಸಂಘದ ಕಾರ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ಪಿಂಜಾರ ಸಮುದಾಯದ ತಾಲೂಕು ಮಟ್ಟದ ಸಭೆಯಲ್ಲಿ ಮಾತನಾಡಿದ ಅವರು, ಸಮಾಜದ ಸ್ಥಿತಿ ಗತಿ ಕುರಿತು ಅಧ್ಯಯನ ನಡೆಸಿದ ಡಾ| ಸಿ.ಎಸ್‌. ದ್ವಾರಕನಾಥ ಅವರು ಅಭಿವೃದ್ಧಿ ಮಂಡಳಿ ಸ್ಥಾಪಿಸುವಂತೆ 2011-12ರಲ್ಲಿಯೇ ಸರಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಇದುವರೆಗೂ ಆಡಳಿತಕ್ಕೆ ಬಂದಿರುವ ಸರಕಾರಗಳು ಈ ಕುರಿತು ಆಸಕ್ತಿ ತೋರುತ್ತಿಲ್ಲ ಎಂದು ಆರೋಪಸಿದರು.

ಅಲ್ಪ ಸಂಖ್ಯಾತವಾಗಿರುವ ಸಮಾಜದಲ್ಲಿ ಬಡತನ ದಾರಿದ್ರ್ಯ ತಾಂಡವಾಡುತ್ತಿದೆ. ಸ್ವಾತಂತ್ರ್ಯ ಸಿಕ್ಕು ಇಷ್ಟು ವರ್ಷಗಳಾದರು ಸಮಾಜದವರಿಗೆ ಸರಿಯಾದ ಶಿಕ್ಷಣ ಸಿಕ್ಕಿಲ್ಲ. ನದಾಫ್‌ ಪಿಂಜಾರ, ಮನ್ಸೂರಿ ಜಾತಿಗಳಿಗೆ ಹಿಂದುಳಿದ ವರ್ಗದ ಜಾತಿ ಪ್ರಮಾಣ ಪತ್ರ ನೀಡುವ ಅವಕಾಶವಿದೆ. ಆದರೆ ಅನಕ್ಷರತೆ ಕಾರಣದಿಂದ ಸಮಾಜಕ್ಕೆ ಈ ಸೌಲಭ್ಯ ಸಿಗುತ್ತಿಲ್ಲ. ಶಾಲಾ ಕಾಲೇಜುಗಳಲ್ಲಿ ತಾರತಮ್ಯ ನಡೆಯುತ್ತಿದೆ. ಜಾತಿ ಪ್ರಮಾಣ ಪತ್ರ ನೀಡುವಲ್ಲಿ ಕಂದಾಯ ಇಲಾಖೆಯಿಂದಲೂ ಅನ್ಯಾಯವಾಗುತ್ತಿದೆ. ಯೋಜನೆಗಳಿಂದಲೂ ವಂಚಿಸಲಾಗುತ್ತಿದೆ ಎಂದು ದೂರಿದರು.

ಪಿಂಜಾರ, ನದಾಫ್‌ ವಿದ್ಯಾರ್ಥಿಗಳನ್ನು ಮುಸ್ಲಿಂ ಸಮುದಾಯದಲ್ಲಿ ಸೇರ್ಪಡೆ ಮಾಡಲಾಗುತ್ತಿದೆ. ಇದನ್ನು ವಿರೋಧಿಸಿ ಅನೇಕ ಬಾರಿ ಪ್ರತಿಭಟಿಸಿ ಪ್ರತೇಕ ಜಾತಿ ಪ್ರಮಾಣ ಪತ್ರ ನೀಡುವಂತೆ ಮನವಿ ಮಾಡಿದ್ದೇವೆ. ಆದರೂ ಇದು ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಗ್ರಾಮ ಲೆಕ್ಕಿಗರು ಖುದ್ದಾಗಿ ಮನೆಗೆ ಭೇಟಿ ನೀಡಿ ಸ್ಥಳಪಂಚನಾಮೆ ಮಾಡಿ ಜಾತಿ ಪ್ರಮಾಣ ಪತ್ರ ನೀಡಲು ತಹಶೀಲ್ದಾರರು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ಪಿಂಜಾರ ಮತ್ತು ನದಾಫ್‌ ಸಮಾಜದವರನ್ನು ಖಾದಿಯಾನ ಸಮುದಾಯಕ್ಕೆ ಮತಾಂತರ ಮಾಡುತ್ತಿರುವ ಕೆಲಸ ತೆರೆಮರೆಯಲ್ಲಿ ನಡೆದಿದೆ ಎಂಬ ಗುಮಾನಿ ಇದೆ. ಈ ಕುರಿತು ಸಮಾಜ ಬಾಂಧವರು ಜಾಗೃತಿ ವಹಿಸಬೇಕು. ಸಮಾಜದ ಜನರಲ್ಲಿ ಅರಿವು ಮೂಡಿಸಲು ಅ. 1ರಿಂದ ತಾಲೂಕು ಘಟಕದ ನೇತೃತ್ವದಲ್ಲಿ ಜಾಗೃತಿ ಜಾಥಾ ಅಭಿಯಾನ ಆಯೋಜಿಸಿ ಸಮಾಜದ ಜನರಲ್ಲಿ ಅರಿವು ಮೂಡಿಸಬೇಕು ಎಂದು ತಿಳಿಸಿದರು.

Advertisement

ಆರೋಗ್ಯ, ಆಹಾರ, ಶಿಕ್ಷಣ, ವಸತಿ ಸೇರಿದಂತೆ ಸರಕಾರದ ವಿವಿಧ ಯೋಜನೆಗಳಿಂದ ವಂಚಿತಗೊಳ್ಳೂತ್ತಿರುವ ಸಮಾಜವನ್ನು ಮುಖ್ಯ ವಾಹಿನಿಗೆ ತರಲು ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಒತ್ತಾಯಿಸಿ ಸೆಪ್ಟಂಬರ್‌ 5ರಂದು ಜಿಲ್ಲಾ ಮಟ್ಟದಲ್ಲಿ ಬೃಹತ್‌ ಪ್ರತಿಭಟನೆ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ವಿವರಿಸಿದರು.

ಸಮಾಜದ ಜಿಲ್ಲಾ ಕಾರ್ಯದರ್ಶಿ ಶರಮುದಿನ್‌ ಶಖಾಪುರ, ತಾಲೂಕು ಅಧ್ಯಕ್ಷ ಅಬ್ದುಲ್ಸಾಬ ನದಾಫ್‌, ಕಾರ್ಯದರ್ಶಿ ಸೋಫಿಸಾಬ ಸೂಗೂರ, ಹುಣಸಗಿ ತಾಲೂಕು ಅಧ್ಯಕ್ಷ ಬಂದಗಿಸಾಬ ಬಸಂತಪೂರ, ಪ್ರಮುಖರಾದ ಖಾಸಿಂಸಾಬ ಅಂಜಳ, ಖಾದರಸಾಬ ನದಾಫ್‌, ಹುಸೇನ ಸಾಬ ಕಿರದಳ್ಳಿ, ಖಾಜಾಹುಸೇನ ದಳಪತಿ, ಬಾದಾಶಾ ನಾಗರಾಳ, ನಬಿರಸೂಲ ಏವುರ, ಹುಸೇನ ಮಂಗ್ಯಾಳ, ಚಾಂದಸಾಬ ಚಂದ್ಲಾಪುರ, ಹುಸೇನ ಹುಣಸಗಿ, ಖಾಶಿಂ ಮುಷ್ಠಳ್ಳಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next