Advertisement

ಮಗನ ಸಾವಿನಲ್ಲೂ ಮಾನವೀಯತೆ

11:35 AM Sep 08, 2019 | Naveen |

ಸಿದ್ಧಯ್ಯ ಪಾಟೀಲ
ಸುರಪುರ:
ಜೀವನ್ಮರಣ ಹೋರಾಟದಲ್ಲೂ ಐವರ ಬಾಳಿಗೆ ಬೆಳಕಾದ ತಾಲೂಕಿನ ರುಕ್ಮಾಪುರ ಗ್ರಾಮದ ಎಂಜಿನಿಯರಿಂಗ್‌ ಪದವಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಕಾರ್ತಿಕ್‌ ಬಡಗಾ ತನ್ನ ದೇಹದ ಪ್ರಮುಖ ಅಂಗಗಳನ್ನು ದಾನ ಮಾಡಿ, ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ.

Advertisement

ಗ್ರಾಮೀಣ ಪ್ರತಿಭೆಯಾದ ಕಾರ್ತಿಕ್‌ ವಿಜಯಪುರ ಬಿಎಲ್ಡಿ ಕಾಲೇಜಿನ ಎಂಜಿನಿಯರಿಂಗ್‌ ವಿಭಾಗದ ಪ್ರಥಮ ಸೆಮಿಸ್ಟರ್‌ನಲ್ಲಿ ಓದುತ್ತಿದ್ದ. ಕಾಲೇಜಿನ ವಸತಿ ನಿಲಯದಲ್ಲಿ 2019 ಸೆ. 4ರಂದು ಈತ ಅಸ್ವಸ್ಥನಾಗಿದ್ದ. ಆಗ ವಸತಿ ನಿಲಯದ ವಾರ್ಡನ್‌ ಹಾಗೂ ವಿದ್ಯಾರ್ಥಿಗಳು ಬಿಎಲ್ಡಿ ಆಸ್ಪತ್ರೆಗೆ ದಾಖಲಿಸಿದ್ದರು.

ಆಸ್ಪತ್ರೆ ಡೀನ್‌, ವೈದ್ಯ ಬಸವರಾಜ ಕಲಲೂರ ತಪಾಸಣೆ ನಡೆಸಿ, ನಂತರ ‘ಸೆರೆಬ್ರಲ್ ವೇನಸ್‌ ಟ್ರೋಮ್ಟೋಸಿಸ್‌’ ಎನ್ನುವ ಕಾಯಿಲೆ ಆವರಿಸಿದ್ದು, ಇದು ಅತ್ಯಂತ ಗಂಭೀರ ಕಾಯಿಲೆ ಎಂದು ತಿಳಿಸಿದ್ದರು. ಅಲ್ಲದೇ ಹೆಚ್ಚಿನ ಚಿಕಿತ್ಸೆಗೆ ಸೊಲ್ಲಾಪುರ ಯಶೋಧಾ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ್ದರು. ವೈದ್ಯರ ಸಲಹೆ ಮೇರೆಗೆ ಸೆ. 5ರಂದು ಸೊಲ್ಲಾಪುರ ಯಶೋಧಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಾರ್ತಿಕ್‌ ಅಸ್ವಸ್ಥನಾಗಿರುವ ಮಾಹಿತಿಯನ್ನು ಕಟುಂಬದವರಿಗೆ ತಿಳಿಸಿ, ಸೊಲ್ಲಾಪುರದ ಯಶೋಧಾ ಆಸ್ಪತ್ರೆಗೆ ಬರುವಂತೆ ಸೂಚಿಸ ಲಾಗಿತ್ತು. ಈ ಹಿನ್ನೆಲೆಯಲ್ಲಿ ತಂದೆ-ತಾಯಿ ಸೊಲ್ಲಾಪುರಕ್ಕೆ ತೆರಳಿದ್ದರು.

ಕಳೆದೆರೆಡು ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ರೋಗಿಯ ದೇಹ ಚಿಕಿತ್ಸೆಗೆ ಪೂರಕವಾಗಿ ಸ್ಪಂದಿಸಲಿಲ್ಲ. ಪ್ರತಿ ಗಳಿಗೆಗೊಮ್ಮೆ ಆರೋಗ್ಯ ಕ್ಷೀಣಿಸುತ್ತಿತ್ತು. ಚಿಕಿತ್ಸೆ ನೀಡುವುದು ಕಷ್ಟದಾಯಕ. ಹೀಗಾಗಿ ಬದುಕುಳಿಯುವ ಸಾಧ್ಯತೆಯಿಲ್ಲ ಎಂದು ಆಸ್ಪತ್ರೆ ವೈದ್ಯರು ಕಟುಂಬದವರಿಗೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಕಾರ್ತಿಕ್‌ನ ತಂದೆ-ತಾಯಿ ಪರಸ್ಪರ ಸಮಾಲೋಚಿಸಿ ಮಗನ ದೇಹ ಮತ್ತೂಬ್ಬರ ಬಾಳಿಗೆ ಬೆಳಕಾಗಲಿ ಎಂದು ನಿರ್ಧರಿಸಿ ಆತನ ಅಂಗಾಗಳನ್ನು ದಾನ ಮಾಡಲು ನಿರ್ಧರಿಸಿದರು. ಈ ಕುರಿತು ಆಸ್ಪತ್ರೆ ವೈದ್ಯರಿಗೆ ತಿಳಿಸಿ, ಅಂಗಾಗ ದಾನಕ್ಕೆ ಸಹಕರಿಸಿದರು. ಆಸ್ಪತ್ರೆ ವೈದ್ಯರು ತಕ್ಷಣ ಕಾರ್ಯಪ್ರವೃತ್ತರಾದರು. ಅಗತ್ಯವಿರುವ ಆಸ್ಪತ್ರೆಗಳಿಗೆ ಸಂಪರ್ಕಿಸಿ ವಿಷಯ ತಿಳಿಸಿದರು. ತಕ್ಷಣಕ್ಕೆ ಅಗತ್ಯವಿರುವ ಆಸ್ಪತ್ರೆಯವರು ಸೊಲ್ಲಾಪುರ ಯೋಶಧಾ ಆಸ್ಪತ್ರೆಗೆ ಧಾವಿಸಿದರು. ಹೃದಯ, ಕಿಡ್ನಿ, ಲಿವರ್‌, ಕಣ್ಣುಗಳನ್ನು ದಾನವಾಗಿ ಪಡೆದುಕೊಂಡರು.

ಪುಣೆ ರುಬಿಯಾ ಆಸ್ಪತ್ರೆಗೆ ಹೃದಯ: ಪುಣೆ ರುಬಿಯಾ ಆಸ್ಪತ್ರೆ ವೈದ್ಯರು ಆರ್ಮಿ ತಂಡ ದೊಂದಿಗೆ ಹೃದಯ ಕೊಂಡೊಯ್ಯಲು ಹೆಲಿಕಾಪ್ಟರ್‌ ತೆಗೆದುಕೊಂಡು ಬಂದಿದ್ದರು. ಆಸ್ಪತ್ರೆಯಿಂದ ಹೆಲಿಪ್ಯಾಡ್‌ ವರೆಗೆ ವಾಹನದಲ್ಲಿ ಹೃದಯ ಸಾಗಿಸಲಾಯಿತು. ಮಹಾರಾಷ್ಟ್ರ ಆರೋಗ್ಯ ಸಚಿವರ ಸೂಚನೆ ಮೇರೆಗೆ ಆಸ್ಪತ್ರೆ ಯಿಂದ ಹೆಲಿಪ್ಯಾಡ್‌ ವರೆಗೆ ಝೀರೋ ಟ್ರಾಫಿಕ್‌ ನಿರ್ಮಿಸಲಾಗಿತ್ತು. ಅಲ್ಲಿಂದ ಹೆಲಿಕಾಪ್ಟರ್‌ ಮೂಲಕ ಹೃದಯವನ್ನು ಪುಣೆ ಆಸ್ಪತ್ರೆಗೆ ಕೊಂಡೊಯ್ಯಲಾಯಿತು.

Advertisement

ಪುಣೆಯ ಸೈಯಾದ್ರಿ ಆಸ್ಪತ್ರೆ ವೈದ್ಯರ ತಂಡ ಸೊಲ್ಲಾಪುರದ ಯಶೋಧಾ ಆಸ್ಪತ್ರೆಗೆ ಆಗಮಿಸಿ ಲಿವರ್‌ ಕೊಂಡೊಯ್ದರು. ಮಹಾರಾಷ್ಟ್ರದ ನಾಸಿಕ್‌ ಜಿಲ್ಲೆಯ ಅಪೋಲೋ ಮತ್ತು ಪುಣೆಯ ಡಿ.ವೈ. ಪಾಟೀಲ ಆಸ್ಪತ್ರೆ ವೈದ್ಯರು ಕಿಡ್ನಿ ಕೊಂಡೊಯ್ದರು.

ಸೊಲ್ಲಾಪುರದ ಸಿವಿಲ್ ಆಸ್ಪತ್ರೆಯವರು ಎರಡು ಕಣ್ಣುಗಳನ್ನು ದಾನವಾಗಿ ಪಡೆದುಕೊಂಡು ಹೋದರು.

ಕುಟುಂಬದ ಸ್ಥಿತಿ ಕರುಣಾಜನಕ: ಕೀರಪ್ಪ ಬಡಗಾ ಭಾರತಿ ಕೀರಪ್ಪ ಬಡಗಾ ದಂಪತಿ ಗ್ರಾಮದಲ್ಲಿ ಸಣ್ಣ ಕಿರಾಣಿ ಅಂಗಡಿ ಇಟ್ಟುಕೊಂಡು ಉಪಜೀವನ ನಡೆಸುತ್ತಿದ್ದಾರೆ. ಇವರಿಗೆ ಮೂವರು ಗಂಡು ಮಕ್ಕಳಿದ್ದರು. ಈಗಾಗಲೇ ಇಬ್ಬರು ಪುತ್ರರು ಅಕಾಲಿಕ ಮರಣಕ್ಕೆ ತುತ್ತಾಗಿ ಅಸುನೀಗಿದ್ದಾರೆ. ಅಂತ್ಯಕ್ರಿಯೆ: ಅಂಗಾಗ ದಾನ ಮಾಡಿದ ಮಗನ ಕಳೆಬರವನ್ನು ಶುಕ್ರವಾರ ಬೆಳಗ್ಗೆ ಸ್ವ-ಗ್ರಾಮ ರುಕ್ಮಾಪುರಕ್ಕೆ ತರಲಾಗಿತ್ತು. ಸಂಜೆ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಿತು.

ರುಕ್ಮಾಪುರ ಗ್ರಾಮದ ಕಾರ್ತಿಕ ಸಾವು ಅಚ್ಚರಿ ಮೂಡಿಸಿದರೂ ಸಾವಿನಲ್ಲೂ ಮಾನವಿಯತೆ ಮೆರೆದ ಹೆಗ್ಗಳಿಕೆ ಬಡಗಾ ಕುಟುಂಬಕ್ಕೆ ಸಲ್ಲುತ್ತದೆ. ತಾನು ಸತ್ತು ಇತರೆ ಐವರ ಜೀವ ಉಳಿಸುವ ಮೂಲಕ ಅವರಿಗೆ ಮರುಜನ್ಮ ನೀಡಿದ ಪುಣ್ಯಾತ್ಮ. ಬಡಗಾ ಕುಟುಂಬದ ನಿರ್ಧಾರ, ತ್ಯಾಗ ಭಾವನೆ ಇತರರಿಗೆ ಮಾದರಿಯಾಗಿದೆ. ಮಗನ ಸಾವಿನ ದುಃಖ ಸಹಿಸಿಕೊಳ್ಳುವ ಶಕ್ತಿಯನ್ನು ದೇವರು ಬಡಗಾ ಕುಟುಂಬಕ್ಕೆ ನೀಡಲಿ.
ರಾಜುಗೌಡ, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next