ಸುರಪುರ: “ಸುರಪುರ ಶೂರರ ಬೀಡು’ ಅಪ್ರತಿಮ ಹೋರಾಟದ ಅಮೃತಭೂಮಿ. ದೇಶದ 1857ರಲ್ಲಿ ಮೊಟ್ಟ ಮೊದಲ ಸ್ವಾತಂತ್ರ್ಯ ಸಂಗ್ರಾಮ ಇಲ್ಲಿಂದಲೇ ಪ್ರಾರಂಭವಾಯಿತು. ನಾಲ್ವಡಿ ರಾಜಾ ವೆಂಕಟಪ್ಪ ನಾಯಕರು ಹೋರಾಟ ನೇತೃತ್ವ ವಹಿಸಿರುವುದು ಸ್ಮರಣೀಯ. ಇತಿಹಾಸದ ಪುಟಗಳಲ್ಲಿ ಸುರಪುರಕ್ಕೆ ಎಂದೆಂದಿಗೂ ಶಾಶ್ವತವಾದ ಸ್ಥಾನವಿದೆ ಎಂದು ಸುರಪುರ ಸಂಸ್ಥಾನದ ಅರಸು ಮನೆತನದ ರಾಜಾಕೃಷ್ಣಪ್ಪ ನಾಯಕ ಹೇಳಿದರು.
ನಗರದ ಅರಮನೆ ಆವರಣದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಕಟಿತ ಶ್ರೀನಿವಾಸ ಜಾಲವಾದಿಯವರ “ಸ್ವಾತಂತ್ರ್ಯ ಹೋರಾಟದಲ್ಲಿ ಸುರಪುರ’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
“ಸಂಸ್ಥಾನದ ಇತಿಹಾಸದ ಬಗ್ಗೆ ಮತ್ತು ಆಳ್ವಿಕೆ ನಡೆಸಿದ ನಮ್ಮ ಪೂರ್ವಜರ ಬಗ್ಗೆ ಇನ್ನಷ್ಟು ಸಂಶೋಧನೆ ಆಗಬೇಕಿದೆ. ಸಂಶೋಧಕರನ್ನು ಆಹ್ವಾನಿಸಿ ಅಗತ್ಯ ಮಾಹಿತಿ ನೆರವು ನೀಡುತ್ತೇನೆ. ಸುರಪುರ ಸಂಸ್ಥಾನದ ಬಗ್ಗೆ ಹೊಸ ಹೊಸ ಸಂಶೋಧನೆ ನಡೆಯಲಿ, ಯುವ ಜನಾಂಗ ಇತಿಹಾಸ ತಿಳಿದುಕೊಳ್ಳಲು ಆಸಕ್ತಿ ವಹಿಸಬೇಕು ಎಂದರು.
ಸುರಪುರಕ್ಕೆ ತನ್ನದೇ ಆದ ಸ್ಥಾನವಿದೆ, ನ್ಯೂಬರಿಯನ್ನು ರುಕ್ಮಾಪುರದ ಹತ್ತಿರ ಹೊಡೆದರು. ಅಲ್ಲಿಯೇ ಅವರ ಸಮಾಧಿ ಇದೆ ಎಂದು ನಿವೃತ್ತ ಎಸ್ಪಿ ಸಿ.ಎನ್. ಭಂಡಾರಿ ಹೇಳಿದರು.
ವೇದಮೂರ್ತಿ ಕೇದಾರನಾಥ ಶಾಸ್ತ್ರೀಗಳು ಮಾತನಾಡಿ, ಸುರಪುರ ವೀರರ ನಾಡು. ಬ್ರಿಟೀಷರನ್ನು ಬಗ್ಗು ಬಡೆದ ಬೀಡು. ಈ ಬಗ್ಗೆ ಪುಸ್ತಕದಲ್ಲಿ ಚೆನ್ನಾಗಿ ಮೂಡಿಬಂದಿದೆ ಎಂದರು. ಸುರಪುರ ಸಂಸ್ಥಾನದ ಸಂಬಂಧಗಳನ್ನು, ಅರಸರು ತೋರಿದ ಪ್ರಜೆಗಳ ಹಿತಾಸಕ್ತಿ, ರಾಜಾ ಪಿಡ್ಡ ನಾಯಕರ ಔದಾರ್ಯ ಸೇರಿದಂತೆ ಅನೇಕ ಸ್ವಾರಸ್ಯಕರ ಸಂಗತಿಗಳನ್ನು ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಬಸವರಾಜ ಜಮದರಖಾನಿ ಮೆಲಕು ಹಾಕಿದರು.
ಲೇಖಕ ಶ್ರೀನಿವಾಸ ಜಾಲವಾದಿ ಮಾತನಾಡಿ, ದೇಶದಲ್ಲಿ ನಾಲ್ವಡಿ ರಾಜಾ ವೆಂಕಟಪ್ಪ ನಾಯಕನಂತ ಶೂರ ಅರಸರಿಲ್ಲ. ಬ್ರಿಟೀಷರೊಡನೆ ನಡೆದ ಹೋರಾಟದಲ್ಲಿ 23ನೇ ವಯಸ್ಸಿಗೇ ವೀರ ಮರಣವನ್ನಪ್ಪಿದ ಮಹಾನ್ ಅರಸ ಎಂದರು.
ಎಪಿಎಫ್ ಸಂಯೋಜಕ ಅನ್ವರ ಜಮಾದಾರ, ಕಮಲಾಕರ, ಕೃಷ್ಣ ದರಬಾರಿ ಇತರರಿದ್ದರು.