ಸುರಪುರ: ವಿಜ್ಞಾನ, ತಂತ್ರಜ್ಞಾನ, ಉಡಿಗೆ, ತೊಡಿಗೆ, ಊಟ, ಉಪಹಾರ ಸೇರಿದಂತೆ ಎಲ್ಲದರಲ್ಲೂ ಬದಲಾವಣೆ ಕಾಣುತ್ತಿದ್ದೇವೆ. ಪ್ರತಿಯೊಂದರಲ್ಲೂ ಆಧುನಿಕತೆ ನಮ್ಮನ್ನು ಆವರಿಸಿಕೊಂಡಿದೆ. ಆದರೂ ಹೆಣ್ಣು ಮಕ್ಕಳನ್ನು ನೋಡುವ ದೃಷ್ಠಿಕೋನ ಮಾತ್ರ ಬದಲಾಗುತ್ತಿಲ್ಲ ಇದರ ಬದಲಾವಣೆ ಮತ್ತು ಮಹಿಳೆಯರ ಶಿಕ್ಷಣ, ಸುರಕ್ಷತೆ ಕುರಿತು ಅರಿವು ಮೂಡಿಸುವುದೇ ರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ ಉದ್ದೇಶವಾಗಿದೆ ಎಂದು ಗ್ರೇಡ್-2 ತಹಶೀಲ್ದಾರ್ ಸುಫೀಯಾ ಸುಲ್ತಾನ್ ಹೇಳಿದರು.
ತಾಲೂಕಿನ ರುಕ್ಮಾಪುರದ ಶ್ರೀ ಮಹರ್ಷಿ ವಾಲ್ಮೀಕಿ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಶಿಶು ಅಭಿವೃದ್ಧಿ ಯೋಜನೆ ಇಲಾಖೆ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಮತ್ತು ಮಹಿಳಾ ಶಕ್ತಿ ಕೇಂದ್ರದ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಹೆಣ್ಣು ಮಗು ದಿನಾಚರಣೆ, ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪುರುಷನಿಗೆ ಸರಿ ಸಮನಾಗಿ ಕೆಲಸ ಮಾಡುತ್ತಿದ್ದರು ಸಹ ಮಹಿಳೆಯರನ್ನು ತಾತ್ಸಾರ ಭಾವದಿಂದ ನೋಡಲಾಗುತ್ತಿದೆ. ಇದನ್ನು ಹೋಗಲಾಡಿಸಿ ಪಾಲಕ-ಪೋಷಕರಲ್ಲಿ ಹೆಣ್ಣು ಮಕ್ಕಳ ಸುರಕ್ಷತೆ ಮತ್ತು ಶಿಕ್ಷಣದ ಅರಿವು ಮೂಡಿಸುವ ದಿನವಾಗಿದೆ ಎಂದು ಹೇಳಿದರು. ಕ್ಷೇತ್ರ ಶಿಕ್ಷಣಾಧಿಕಾರಿ ನಾಗರತ್ನ ಓಲೇಕಾರ ಮಾತನಾಡಿ, ಹೆಣ್ಣು ಮಕ್ಕಳ ಸುರಕ್ಷತೆ, ಶಿಕ್ಷ‚ಣಕ್ಕಾಗಿ ಸರಕಾರ ಹಲವಾರು ಯೋಜನೆ, ಕಾರ್ಯಕ್ರಮ ಜಾರಿಗೆ ತಂದಿದೆ. ಹೆಣ್ಣು ಮಕ್ಕಳಿಗೆ ಶಿಕ್ಷಣ ಅವಶ್ಯ ಹಾಗೂ ಹಕ್ಕು ಸಹ ಆಗಿದೆ. ಈಗ ಎಲ್ಲ ರಂಗಗಳಲ್ಲಿ ಹೆಣ್ಣು ಮಕ್ಕಳು ಇದ್ದಾರೆ. ಅದಕ್ಕೆ ಶಿಕ್ಷಣವೇ ಕಾರಣ. ಶಿಕ್ಷಣದಿಂದ ಮಾತ್ರ ಹೆಣ್ಣು ಉನ್ನತ ಹುದ್ದೆ ಪಡೆಯಲು ಸಾಧ್ಯ. ಕಾರಣ ಹೆಣ್ಣು ಮಕ್ಕಳು ಚೆನ್ನಾಗಿ ಓದಿ ಉತ್ತಮ ಫಲಿತಾಂಶ ಪಡೆದು ಸಮಾಜದಲ್ಲಿ ಮುಂದೆ ಬರಬೇಕು ಎಂದು ಸಲಹೆ ನೀಡಿದರು.
ಸಿಡಿಪಿಒ ಲಾಲಸಾಬ್ ಪೀರಾಪುರ ಮಾತನಾಡಿ, ಹೆಣ್ಣು ಮಕ್ಕಳ ಪೋಷಣೆ, ರಕ್ಷಣೆ ಮನೆಯಿಂದಲೇ ಆರಂಭವಾಗುತ್ತದೆ. ಮಕ್ಕಳನ್ನು ಪೋಷಕರು ಸನ್ಮಾಮಾರ್ಗದಲ್ಲಿ ನಡೆಸಿಕೊಂಡು ಹೋಗಬೇಕು ಎಂದು ಹೇಳಿದರು.
ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಮೌನೇಶ ಕಂಬಾರ ಮಾತನಾಡಿ, ಹೆಣ್ಣು ಮಗುವಿನ ಸುರಕ್ಷತೆ ಮತ್ತು ಶಿಕ್ಷಣದ ಬಗ್ಗೆ ಪ್ರತಿಯೊಬ್ಬರು ಯೋಚಿಸಬೇಕು. ಹೆಣ್ಣು ಮಕ್ಕಳನ್ನು ರಕ್ಷಿಸಿ ಅವರಿಗೆ ಸೂಕ್ತ ಶಿಕ್ಷಣ ಕೊಡಿಸುವುದು ಮತ್ತು ಹೆಣ್ಣು ಮಕ್ಕಳ ಹಕ್ಕುಗಳ ಬಗ್ಗೆ ಎಲ್ಲರು ಹೆಚ್ಚಿನ ಅರಿವು ಬೆಳೆಸಿಕೊಳ್ಳುವುದು ಅಗತ್ಯವಾಗಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಭಿವೃದ್ಧಿ ನೀರಿಕ್ಷಕಿ ಶಿವಮಂಗಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ಶೇಡದ ಅಂಚೆ ಇಲಾಖೆಯ ಸುಕನ್ಯಾ ಸಮೃದ್ಧಿ ಯೋಜನೆ ಕುರಿತು ಮಾತನಾಡಿದರು. ಮಹಿಳಾ ಶಕ್ತಿ ಕೇಂದ್ರದ ಕಲ್ಯಾಣಾಧಿಕಾರಿ ಬಸಲಿಂಗಮ್ಮ ಪ್ರತಿಜ್ಞಾ ವಿಧಿ ಬೋಧಿಸಿದರು. ನ್ಯಾಯವಾದಿ ಜಯಲಲಿತಾ ಪಾಟೀಲ ಹೆಣ್ಣು ಮಕ್ಕಳ ಕಾನೂನು ಕುರಿತು ಉಪನ್ಯಾಸ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಶಾಲೆ ಮುಖ್ಯ ಶಿಕ್ಷಕ ಮಹೇಶ ಕುಂಟೋಜಿ ಹೆಣ್ಣು ಮಕ್ಕಳ ಪ್ರಾಮುಖ್ಯತೆ ಕುರಿತು ಮಾತನಾಡಿದರು. ಆರೋಗ್ಯ ಸಹಾಯಕಿ ಸವಿತಾ, ಅಂಗನವಾಡಿ ಕಾರ್ಯಕರ್ತೆಯರಾದ ಶಂಕ್ರಮ್ಮ ಭಾವಿ, ಅಕ್ಕಮಹಾದೇವಿ ಯಾಳಗಿ, ಜಯಶ್ರೀ ಬೋಂದಡೆ, ಸಂಗೀತ ಸೇರಿ ಆಶಾ ಕಾರ್ಯಕರ್ತೆಯರು ಇದ್ದರು. ಅಂಗನವಾಡಿ ಮೇಲ್ವಿಚಾರಕಿ ಸತ್ಯಮ್ಮ ಸ್ವಾಗತಿಸಿದರು. ಶಿಕ್ಷಕ ಈರಣ್ಣ ಸಿಂಪಿ ನಿರೂಪಿಸಿದರು.