Advertisement

ಎರಡು ಬೆಳೆಗೆ ಕಾಲುವೆ ನೀರೊದಗಿಸಲು ರೈತರ ಒತ್ತಾಯ

05:27 PM Aug 02, 2019 | Naveen |

ಸುರಪುರ: ನಾರಾಯಣಪುರ ಮತ್ತು ಆಲಮಟ್ಟಿ ಜಲಾಶಯಗಳು ಸಂಪೂರ್ಣ ಭರ್ತಿಯಾಗಿವೆ. ಜಲಾಶಯದಲ್ಲಿ ಎರಡು ಬೆಳೆಗಾಗುವಷ್ಟು ನೀರು ಸಂಗ್ರಹಿಸಿಟ್ಟುಕೊಂಡು ಕಾಲುವೆಗಳ ಮೂಲಕ ಎರಡು ಬೆಳೆಗೆ ಸಂಪೂರ್ಣ ಒದಗಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಪುಟ್ಟಯ್ಯ ಆಗ್ರಹಿಸಿದರು.

Advertisement

ನಗರದ ಟೇಲರ್‌ ಮಂಜಿಲ್ನಲ್ಲಿ ಗುರುವಾರ ಏರ್ಪಡಿಸಲಾಗಿದ್ದ ರೈತ ಸಂಘದ ಸಭೆಯಲ್ಲಿ ಅವರು ಮಾತನಾಡಿದರು.

ಕಳೆದ ಎರಡು ವರ್ಷಗಳಿಂದ ಜಲಾಶಯದಲ್ಲಿ ನೀರಿನ ಕೊರತೆಯಿಂದ ಸಮರ್ಪಕವಾಗಿ ಸಿಗದೆ ರೈತರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಈ ಬಾರಿ ಮುಂಚಿತವಾಗಿಯೇ ಜಲಾಶಯ ಭರ್ತಿಯಾಗಿದೆ. ಒಳ ಹರಿವು ನೆಪದಲ್ಲಿ ನದಿಗೆ ಅನಗತ್ಯ ನೀರು ಹರಿಬಿಡುವುದು ಬೇಡ. ಈಗಲೇ ಎಚ್ಚೆತ್ತುಕೊಂಡು ಎರಡು ಬೆಳೆಗೆ ಅಗತ್ಯವಿರುಷ್ಟು ನೀರು ಉಳಿಸಿಕೊಳ್ಳಲು ನೀರಾವರಿ ಸಮಿತಿ ಮತ್ತು ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಭಾಗದ ಯಾವೊಬ್ಬ ರೈತರಿಗೂ ಸಾಲ ಮನ್ನಾ ಯೋಜನೆ ತಲುಪಿಲ್ಲ. ಸಾಲ ಮನ್ನಾ ಆಗಿರುವ ಬಗ್ಗೆ ಬ್ಯಾಂಕಿನವರು ಇದುವರೆಗೂ ಅಧಿಕೃತವಾಗಿ ತಿಳಿಸುತ್ತಿಲ್ಲ. ಹೀಗಾಗಿ ರೈತರಲ್ಲಿ ಗೊಂದಲ ಉಂಟಾಗಿದೆ. ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆ ಕೂಡ ಇದಕ್ಕೆ ಹೊರತಾಗಿಲ್ಲ. ಫಸಲ ಬಿಮಾ ಯೋಜನೆ ರೈತರನ್ನು ಮೋಸಗೊಳಿಸುವ ಷಡ್ಯಂತ್ರವಾಗಿದೆ. ರೈತರಿಗೆ ಇದರ ಲಾಭ ದೊರಕುತ್ತಿಲ್ಲ. ರಾಜ್ಯದಲ್ಲಿ ನೂತನವಾಗಿ ಅಧಿಕಾರಕ್ಕೆ ಬಂದಿರುವ ಸರಕಾರ ಈ ಎಲ್ಲ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ದಿಟ್ಟ ನಿರ್ಧಾರ ಕೈಗೊಳ್ಳಬೇಕು. ರೈತರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾಧ್ಯಕ್ಷ ಅಯ್ಯಣ್ಣ ಹಾಲಭಾವಿ ಮಾತನಾಡಿ, ಕಳೆದ ಸಾಲಿನ ಬರ ಪರಿಹಾರ ಮತ್ತು ಬೆಳೆ ನಷ್ಟ ಪರಿಹಾರ ರೈತರಿಗೆ ಇದುವರೆಗೂ ತಲುಪಿಲ್ಲ. ನಮ್ಮನ್ನಾಳುವ ಸರಕಾರ ಮತ್ತು ನಮ್ಮ ಜನಪ್ರತಿನಿಧಿಗಳಿಗೆ ರೈತರ ಬಗ್ಗೆ ಎಳ್ಳಷ್ಟು ಕಾಳಜಿ ಇಲ್ಲ ಸರಕಾರ ಕೂಡಲೇ ಬೆಳೆ ನಷ್ಟ ಮತ್ತು ಬರ ಪರಿಹಾರ ಒದಗಿಸಿಕೊಡಬೇಕು. ಪ್ರಸಕ್ತ ಸಾಲಿನ ಬೆಳೆ ಸಮೀಕ್ಷೆ ಕಾರ್ಯವನ್ನು ತ್ವರಿತವಾಗಿ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Advertisement

ಕೋಟ್ಯಂತರ ರೂ. ವೆಚ್ಚ ಮಾಡಿ ನಿರ್ಮಿಸಲಾಗಿರುವ ಬೋನ್ಹಾಳ ಏತ ನೀರಾವರಿ ಸುಮಾರು ವರ್ಷಗಳಿಂದ ಸ್ಥಗಿತಗೊಂಡಿದೆ. ಈ ಬಗ್ಗೆ ಸಂಘಟನೆ ಸಾಕಷ್ಟು ಬಾರಿ ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ. ಕೂಡಲೇ ಬೋನ್ಹಾಳ ಏತ ನೀರಾವರಿ ಪುನರಾಂಭಿಸಬೇಕು. ತಾಲೂಕಿನ ಗ್ರಾಮೀಣ ರಸ್ತೆಗಳ ಸುಧಾರಣೆಗೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ಶಮಷಾದಬೇಗಂ, ಕಲಬುರಗಿ ವಿಭಾಗೀಯ ಕಾರ್ಯದರ್ಶಿ ಮಹಾದೇವಿ ಬೇವಿನಾಳಮಠ, ಜಿಲ್ಲಾ ಉಪಾಧ್ಯಕ್ಷ, ತಿಮ್ಮಣ್ಣ ಜಂಪಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಶರಣ ಸಾಹು ರುಕ್ಮಾಪುರ, ಹಣಸಗಿ ತಾಲೂಕು ಅಧ್ಯಕ್ಷ ಮುದ್ದಣ್ಣ ಅಮ್ಮಾಪುರ, ಉಪಾಧ್ಯಕ್ಷ ಸಿದ್ದಣ್ಣ ಮೇಟಿ, ಶಹಾಪುರ ತಾಲೂಕು ಕಾರ್ಯದರ್ಶಿ ಲಕ್ಷ್ಮೀಕಾಂತ ನಾಯಕ, ಪರಮಣ್ಣ ಮೇಟಿ, ಪ್ರಮುಖರಾದ ತಿಪ್ಪಣ್ಣ ಇಟ್ಟಂಗಿ, ಸುರೇಶ ದರಬಾರಿ, ಪ್ರಧಾನಿ ಪೂಜಾರಿ, ಅಯ್ಯಪ್ಪ ಶಾಂತಪುರ, ಮಲ್ಲಪ್ಪ ಶ್ರೀನಿವಾಸಪುರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next