ಸುರಪುರ: ಕುಡಿಯುವ ನೀರು ಸಂಗ್ರಹಣೆ ಹಿನ್ನೆಲೆಯಲ್ಲಿ ಶುಕ್ರವಾರ ನಗರದ ಯಲ್ಲಪ್ಪನ ಬಾವಿ ಹತ್ತಿರ ಮತ್ತು ಮಲ್ಲಿಬಾವಿ ರಸ್ತೆಯಲ್ಲಿರುವ ಕೆರೆಗಳನ್ನು ಶಾಸಕ ನರಸಿಂಹ ನಾಯಕ (ರಾಜುಗೌಡ) ವೀಕ್ಷಿಸಿದರು.
ನದಿಯಿಂದ ನೀರು ಸಂಗಹ್ರಹಿಸಿಕೊಂಡು ನಗರಕ್ಕೆ ಕುಡಿಯುವ ನೀರು ಸರಬರಾಜು ಶಾಶ್ವತ ಪರಿಹಾರ ಕಂಡುಕೊಳ್ಳಲು ಕಂದಾಯ ಇಲಾಖೆ ಮತ್ತು ನಗರಸಭೆ ಅಧಿಕಾರಿಗಳ ಜತೆಯಲ್ಲಿ ಸಮೀಕ್ಷೆ ನಡೆಸಿದರು. ಯಲ್ಲಪ್ಪನ ಬಾವಿ ಹತ್ತಿರ ಫಾಲನ್ ಬಂಗ್ಲೆ ಹಿಂದಿನ ಪ್ರದೇಶವನ್ನು ಪರಿಶೀಲಿಸಿ ನೀರು ಸಂಗ್ರಹಣೆ ಕುರಿತು ಅಧಿಕಾರಿಗಳ ಜತೆ ಚರ್ಚಿಸಿದರು. ಇದು ಸರ್ಕಾರಿ ಸ್ಥಳವಾಗಿದ್ದು, ಇಲ್ಲಿ ಕೆರೆ ನಿರ್ಮಿಸಿ ನೀರು ಶೇಖರಿಸಿಟ್ಟುಕೊಳ್ಳಬಹುದು ಎಂದು ಹೇಳಿದರು.
ನಂತರ ಮಲ್ಲಿಬಾವಿ ಗುಡ್ಡದ ರಸ್ತೆಯಲ್ಲಿರುವ 25 ಎಕರೆ ವಿಸ್ತೀರ್ಣವುಳ್ಳ ಕೆರೆಯನ್ನು ಸಹ ನೋಡಿ, ಇದು ಕೂಡ ನೀರು ಸಂಗ್ರಹಣೆಗೆ ಸೂಕ್ತವಾಗಿದೆ ಎಂದು ಅ ಧಿಕಾರಿಗಳಿಗೆ ತಿಳಿಸಿದರು. ಈ ಕೆರೆಯನ್ನು ಹೊಳೆತ್ತಿದರೆ ನೀರು ಶೇಖರಣೆಗೆ ಅನುಕೂಲವಾಗಲಿದೆ ಎಂದು ನುಡಿದರು.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಬೇಸಿಗೆ ಮತ್ತು ಇನ್ನಿತರ ದಿನಗಳಲ್ಲಿ ಈ ಎರಡು ಕೆರೆಗಳಲ್ಲಿ ನೀರು ಸಂಗ್ರಹಿಸಿದರೆ ಸುಮಾರು 20ಕ್ಕೂ ಹೆಚ್ಚು ದಿನ ನೀರು ಸಿಗಲಿದೆ. ಜತೆಯಲ್ಲಿ ಅಂತರ್ಜಲ ಮಟ್ಟಕ್ಕೂ ಸಹಕಾರಿಯಾಗಲಿದೆ. ಇದಕ್ಕಾಗಿ ಸರ್ಕಾರದಿಂದ 20 ಕೋಟಿ ಅನುದಾನ ತಂದು ಎರಡು ಕೆರೆಗಳನ್ನು ಅಭಿವೃದ್ಧಿಗೊಳಿಸಿ, ನೀರು ಸಂಗ್ರಹಿಸಿ ನಗರದ ಜನತೆಗೆ ಶುದ್ಧವಾದ ಕುಡಿಯುವ ನೀರು ಪೂರೈಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ನಗರದ ಕುಡಿಯುವ ನೀರಿನ ಸಮಸ್ಯೆ ಸದ್ಯಕ್ಕೆ ಮೊದಲಿನಷ್ಟಿಲ್ಲ. ವಾರಕ್ಕೆ ಒಮ್ಮೆ ಅಥವಾ ಎರಡು ಬಾರಿ ನೀರು ಪೂರೈಕೆಯಾಗುತ್ತಿದೆ. ಶಾಶ್ವತ ಪರಿಹಾರಕ್ಕೆ ಪ್ರಯತ್ನಿಸಲಾಗುತ್ತಿದೆ. ಈಗಾಗಲೇ ಅದಕ್ಕೆ ಅನುದಾನ ಸಹ ದೊರೆತಿದೆ ಎಂದರು. ನಗರಸಭೆ ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ, ವ್ಯವಸ್ಥಾಪಕ ಯಲ್ಲಪ್ಪ ನಾಯಕ ಡೊಣ್ಣಿಗೇರೆ, ಕಂದಾಯ ಇಲಾಖೆ ಅಧಿ ಕಾರಿಗಳು ಇದ್ದರು.