Advertisement

ಗರಡಿ ಮನೆಯಲ್ಲೇ ದೇವಿಕೇರಾ ಗ್ರಂಥಾಲಯ

04:35 PM Nov 11, 2019 | Naveen |

ಸುರಪುರ: ತಾಲೂಕಿನ ದೇವಿಕೇರಾದಲ್ಲಿರುವ ಗ್ರಂಥಾಲಯಕ್ಕೆ ಸ್ವಂತ ಕಟ್ಟಡ ಇಲ್ಲ. ಹಾಗಾಗಿ ಕಿರಿದಾದ ಕೋಣೆಯಲ್ಲಿ ಓದುವುದು ಅನಿವಾರ್ಯವಾಗಿದೆ. ಗ್ರಾಮದಲ್ಲಿ ಸಾಕಷ್ಟು ಓದುಗರಿದ್ದಾರೆ. ಗ್ರಾಮದ ಯುವ ಸಮುದಾಯಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸರಕಾರ 2009ರಲ್ಲಿ ಗ್ರಂಥಾಲಯ ಮಂಜೂರಿ ಮಾಡಿತು. ಆದರೆ ಅದಕ್ಕೆ ಬೇಕಾದ ಸೂಕ್ತ ಕಟ್ಟಡ ಮತ್ತು ಮೂಲ ಸೌಕರ್ಯ ಒದಗಿಸುವುದನ್ನೇ ಮರೆತು ಬಿಟ್ಟಿದೆ.

Advertisement

ಗರಡಿ ಮನೆಯಲ್ಲಿ ಗ್ರಂಥಾಲಯ: ಗ್ರಂಥಾಲಯಕ್ಕೆ ಸ್ವಂತ ಕಟ್ಟಡವಿಲ್ಲ. ಗ್ರಾಪಂಗೆ ಒಳಪಡುವ ಗರಡಿ ಮನೆಯ ಕೊಠಡಿಯಲ್ಲಿಯೇ ಗ್ರಂಥಾಲಯ ನಡೆಸಲಾಗುತ್ತಿದೆ. ಕೊಠಡಿ ಅತ್ಯಂತ ಕಿರಿದಾಗಿದ್ದು, ಪುಸ್ತಕಗಳ ರ್ಯಾಕ್ಸ್‌ ಇಡಲು ಜಾಗವೇ ಇಲ್ಲ. ಒಂದು ಕುರ್ಚಿ ಟೇಬಲ್‌ ಬಿಟ್ಟರೆ ಏನೊಂದು ಇಡಲು ಸ್ಥಳವೇ ಇಲ್ಲ. ಕೊಠಡಿ ನಿರ್ಮಾಣ ಆದಾಗಿನಿಂದ ಇಲ್ಲವರೆಗೆ ಸುಣ್ಣ ಬಣ್ಣ ಕಂಡಿಲ್ಲ. ವಿದ್ಯುತ್‌ ಸಂಪರ್ಕ ಇಲ್ಲವೇ ಇಲ್ಲ.

ಧೂಳು ತಿನುತ್ತಿವೆ ಪುಸ್ತಕಗಳು: ಗ್ರಂಥಾಲಯದಲ್ಲಿ ಸಾಕಷ್ಟು ಪುಸ್ತಕಗಳಿವೆ. ಕೊಠಡಿ ಚಿಕ್ಕದಾಗಿದ್ದು, ಅಲಮಾರಿ ಇಡಲು ಸ್ಥಳವೇ ಇಲ್ಲ. ಎಲ್ಲ ಪುಸ್ತಕಗಳನ್ನು ಇರುವ ಎರಡು ಅಲಮಾರಿಗಳಲ್ಲಿ ತುರುಕಲಾಗಿದೆ. ಪುಸ್ತಕಗಳು ಬಿಡಿಯಾಗಿಲ್ಲ. ಒಂದಕ್ಕೊಂದು ಅಂಟಿಕೊಂಡಿದ್ದು, ಪುಸ್ತಕದ ಪುಟಗಳು ಹರಿದೋಗುವ ಸ್ಥಿತಿಯಲ್ಲಿವೆ. ಇದರಿಂದ ಗೆದ್ದಲು ಹಿಡಿದು ಪುಸ್ತಕಗಳು ಧೂಳು ತಿನ್ನುತ್ತಿವೆ.

ಬಯಲೇ ಓದುವ ಸ್ಥಳ: ಗ್ರಂಥಾಲಯ ಒಂದೇ ಕೊಠಡಿ ಹೊಂದಿದೆ. ಅದು ಕಿರಿದಾಗಿದ್ದು, ಕುಳಿತು ಓದಲು ಸ್ಥಳವೇ ಇಲ್ಲ. ಇರುವ ಒಂದಿಷ್ಟು ಜಾಗದಲ್ಲಿ ಗ್ರಂಥಾಲಯ ಸಹಾಯಕರು ಕೂರಲು ಕುರ್ಚಿ, ಟೇಬಲ್‌ ಇಡಲಾಗಿದೆ. ಹೀಗಾಗಿ ಓದುಗರು ಕುಳಿತು ಓದಲು ಸ್ಥಳವೇ ಇಲ್ಲ. ಯುವಕರು ಮತ್ತು ವಿದ್ಯಾರ್ಥಿಗಳು ಬಯಲಲ್ಲೇ ಕುಳಿತು ದಿನಪತ್ರಿಕೆ ಓದುತ್ತಾರೆ.

25 ಲಕ್ಷ ರೂ ಮಂಜೂರು: ಸ್ವಂತ ಕಟ್ಟಡ ನಿರ್ಮಾಣಕೆ ಗ್ರಂಥಾಲಯ ಇಲಾಖೆ 25 ಲಕ್ಷ ರೂ. ಮಂಜೂರು ಮಾಡಿದೆ. ಅಲ್ಲದೇ ನಿವೇಶನ ಕೂಡ ಗುರುತಿಸಲಾಗಿದೆ. ಆದರೆ ನಿವೇಶನ ಹಸ್ತಾಂತರಿಸುವಲ್ಲಿ ಗ್ರಾಪಂ ಕಾಲಹರಣ ಮಾಡುತ್ತಿದೆ. 5 ಸಾವಿರ ಪುಸ್ತಕಗಳು: ಗ್ರಂಥಾಲಯದಲ್ಲಿ ವಿವಿಧ ವಿಷಯಕ್ಕೆ ಸಂಬಂಧಿಸಿದ ಸುಮಾರು 5 ಸಾವಿರಕ್ಕೂ ಮೇಲ್ಪಟ್ಟು ಪುಸ್ತಕಗಳಿವೆ. 300ಕ್ಕೂ ಅಧಿಕ ಸದಸ್ಯರಿದ್ದಾರೆ. ಪ್ರತಿ ದಿನ 15ರಿಂದ 20 ಜನ ಪುಸ್ತಕಗಳನ್ನು ಓದಲು ಎರವಲು ಕೊಂಡೊಯುತ್ತಾರೆ. ಮೂರು ದಿನ ಪತ್ರಿಕೆ, ವಾರ ಪತ್ರಿಕೆ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಪತ್ರಿಕೆ ಹಾಗೂ ಮಾಸಿಕ ಪತ್ರಿಕೆಗಳನ್ನು ತರಿಸಲಾಗುತ್ತಿದೆ. ಆದರೆ ಅನುದಾನದ ಕೊರತೆಯಿಂದ ಹೆಚ್ಚಿನ ಪತ್ರಿಕೆ ತರಿಸಲಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next