ಸುರಪುರ: ಆಸ್ತಿ ವರ್ಗಾವಣೆಯಲ್ಲಿ ಲೋಪದೋಷ ಎಸಗುವ ಮೂಲಕ ಬಡ ದಲಿತರಿಗೆ ಅನ್ಯಾಯ ಮಾಡಿರುವ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಒತ್ತಾಯಿಸಿ ಎಚ್.ಡಿ. ಕುಮಾರಸ್ವಾಮಿ ಸೇನೆ ಕಾರ್ಯಕರ್ತರು ಶುಕ್ರವಾರ ನಗರದ ಮಹಾತ್ಮಾ ಗಾಂಧೀಜಿ ವೃತ್ತದಲ್ಲಿ ಪ್ರತಿಭಟಿಸಿದರು.
ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ವೆಂಕೋಬ ದೊರೆ ಮಾತನಾಡಿ, ದಲಿತ ಸಮುದಾಯಕ್ಕೆ ಸೇರಿದ ತಾಲೂಕಿನ ಬಾದ್ಯಾಪುರ ಗ್ರಾಮದ ಬಡವರು ಆಸ್ತಿ ಮಾರಾಟದ ವಿಷಯದಲ್ಲಿ ಕಂದಾಯ ಅಧಿಕಾರಿಗಳು ಲೋಪದೋಷ ಎಸಗಿದ್ದಾರೆ ಎಂದು ಆರೋಪಿಸಿದರು.
ಸಂಸಾರ ಅಡಚಣೆ ನಿಮಿತ್ತ ಬಡವರು ತಮ್ಮ ಆಸ್ತಿ ಮಾರಾಟ ಮಾಡಿದ್ದು ನಿಜ ಇರುತ್ತದೆ, ಈ ಕುರಿತು ಖರೀದಿ ಪತ್ರದಲ್ಲಿ ತೋರಿಸಿದಂತೆ ಖರೀದಿರಾರಿಗೆ ಆಸ್ತಿ ವರ್ಗಾವಣೆ ಮಾಡಬೇಕಿತ್ತು. ಆದರೆ ಕಂದಾಯ ಅಧಿಕಾರಿಗಳು ಖರೀದಿದಾರರಿಂದ ಲಂಚ ಪಡೆದು ಮಾರಾಟಕ್ಕಿಂತ ಹೆಚ್ಚಿನ ಭೂಮಿಯನ್ನು ವರ್ಗಾವಣೆ ಮಾಡುವ ಮೂಲಕ ಬಡವರಿಗೆ ವಂಚನೆ ಮಾಡಿದ್ದಾರೆ ಎಂದು ದೂರಿದರು.
ಮಾರಾಟಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆಯಿಂದ ದಾಖಲಾತಿಗಳ ತೆಗೆದುಕೊಂಡು ಈ ರೀತಿ ಮೋಸವಾಗಿದೆ. ಮಾರಾಟಕ್ಕಿಂತ ಹೆಚ್ಚಿನ ಭೂಮಿ ವರ್ಗಾವಣೆ ಮಾಡಲಾಗಿದೆ. ಇದನ್ನು ಸರಿ ಪಡಿಸಿಕೊಡುವಂತೆ ಬಡವರು ಮನವಿ ಮಾಡಿದರೆ ಕಂದಾಯ ಅಧಿಕಾರಿಗಳು ಬಡವರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಈ ಕುರಿತು ಪುರ್ನಃ ಸರ್ವೇ ಮಾಡಿಸಿ ಖರೀದಿ ಪತ್ರದಂತೆ ವರ್ಗಾವಣೆ ಮಾಡಿ ಉಳಿದ ಭೂಮಿಯನ್ನು ಮಾರಟಗಾರರ ಹೆಸರಿಗೆ ವರ್ಗಾಹಿಸಿಕೊಡಲು ತಹಶೀಲ್ದಾರರಿಗೆ ಆದೇಶಿಸಬೇಕು. ನಿರ್ಲಕ್ಷ್ಯ ವಹಿಸಿದಲ್ಲಿ ತಹಶೀಲ್ದಾರ್ ಕಚೇರಿ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸೇನೆಯ ಗೋಪಾಲ ಬಾಗಲಕೋಟೆ, ಕೃಷ್ಣಾ ದಿವಾಕರ, ಬಸವರಾಜ ಕವಡಿಮಟ್ಟಿ, ಕೇಶಣ್ಣ ದೊರೆ, ಭೀಮರಾಯ ಭಜಂತ್ರಿ, ದೇವಪ್ಪ ರತ್ತಾಳ, ಭೀಮಪ್ಪ ಭಜಂತ್ರಿ, ಮಲ್ಲಪ್ಪ ಭಜಂತ್ರಿ, ಮಲ್ಲಿಕಾರ್ಜುನ ಭಜಂತ್ರಿ, ಮೈಲಾರಿ ಭಜಂತ್ರಿ. ಹಣಮಂತ ಭಜಂತ್ರಿ, ಮಲ್ಲಿಕಾರ್ಜುನ ಭೀಮಪ್ಪ ಭಜಂತ್ರಿ, ಶರಣಪ್ಪ ಭಜಂತ್ರಿ ಇದ್ದರು.