ಸುರಪುರ: ತಾಲೂಕಿನಲ್ಲಿ ಗ್ರಾಮೀಣ ಸಾರಿಗೆ ಸಂಚಾರದ ಸಮಸ್ಯೆಯಾಗಿದ್ದು, ಜನ ಸಾಮಾನ್ಯರು ಸೇರಿದಂತೆ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ಕಾರ್ಯಕರ್ತರು ಶನಿವಾರ ಇಲ್ಲಿಯ ಬಸ್ ಘಟಕದ ಎದುರು ಪ್ರತಿಭಟಿಸಿದರು.
ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಸಿದ್ದನಗೌಡ ಎನ್. ಬಿರಾದಾರ ಮಾತನಾಡಿ, ಹಳ್ಳಿಗಳಿಗೆ ಬಸ್ ಸೌಕರ್ಯ ಇಲ್ಲವಾಗಿದೆ. ಇದರಿಂದ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಶಾಲಾ ಕಾಲೇಜುಗಳಿಗೆ ತಲುಪಲಾಗುತ್ತಿಲ್ಲ. ದಿನನಿತ್ಯದ ಕೆಲಸ ಕಾರ್ಯಗಳಿಗೆ ನಗರಕ್ಕೆ ಆಗಮಿಸುವ ಸಾರ್ವಜನಿಕರು ತೊಂದರೆ ಪಡುವಂತ್ತಾಗಿದೆ. ಈ ಕುರಿತು ವಿದ್ಯಾರ್ಥಿಗಳು ಅನೇಕ ಬಾರಿ ಹೋರಾಟ ಮಾಡಿದರು ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ಸುರಪುರದಿಂದ ಮರಕಲ್ಗೆ ಹೋಗುವ ಬಸ್ ಸರಿಯಾದ ಸಮಯಕ್ಕೆ ಬರುತ್ತಿಲ್ಲ. ಇದರಿಂದ ಸತ್ಯಂಪೇಟೆ, ಶಾಖಾಪೂರ, ಹಾಲಗೇರಾ, ಹೆಮನೂರು, ಮರಕಲ್ ಗ್ರಾಮದ ವಿದ್ಯಾರ್ಥಿಗಳಿಗೆ ಅನಾನುಕೂಲವಾಗುತ್ತಿದೆ. ಈ ಹಿಂದೆ ಈ ಮಾರ್ಗದಲ್ಲಿ ಓಡಿಸುತ್ತಿದ್ದ ಬಸ್ ಸಮಯನ್ನು ತೆಗೆದಿರುವದರಿಂದ ವಿದ್ಯಾರ್ಥಿ ಮತ್ತು ಸಾರ್ವಜನಿಕರಿಗೆ ಸಮಸ್ಯೆಯಾಗಿದೆ ಎಂದು ದೂರಿದರು.
ವಿದ್ಯಾರ್ಥಿಗಳು ಬೆಳಗ್ಗೆ 8:00 ಗಂಟೆಗೆ ಮನೆ ಬಿಟ್ಟು ಹೊರಡುತ್ತಾರೆ. ಆದರೆ ಸಂಜೆ 4:00 ಗಂಟೆಗೆ ಮನೆಗೆ ಹಿಂದಿರುಗಬೇಕಾಗುತ್ತದೆ. 1:30ಕ್ಕೆ ಇರುವ ಬಸ್ ಸರಿಯಾದ ಸಮಯಕ್ಕೆ ಬಿಡುವುದಿಲ್ಲ. ಬಸ್ ಸೌಕರ್ಯವಿಲ್ಲದ ಕಾರಣ ಅನೇಕ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳನ್ನು ಬಿಡುವಂತ ಪರಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಮರ್ಪಕ ಬಸ್ ಸೌಕರ್ಯ ಕಲ್ಪಿಸಬೇಕು. ಇಲ್ಲವಾದಲ್ಲಿ ಬಸ್ ಡಿಪೋಗೆ ಬೀಗ ಹಾಕಿ ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ನಂತರ ಡಿಪೋ ವ್ಯವಸ್ಥಾಪಕ ವಿ.ಆರ್. ರೆಡ್ಡಿ ಅವರಿಗೆ ಮನವಿ ಸಲ್ಲಿಸಿದರು.
ವಿದ್ಯಾರ್ಥಿಗಳಾದ ಶಾಂತಮ್ಮ, ಸಂಗೀತಾ, ರೇಣುಕಾ, ಮಲ್ಕಮ್ಮ, ವಸಂತಕುಮಾರ, ರವಿಕುಮಾರ, ಮೈಲಾರಿ, ಆರತಿ, ಶಿವಪುತ್ರ, ದೇವಮ್ಮ, ದೇವಿಕಾ, ಭಾಗ್ಯ ಸೇರಿದಂತೆ ಅನೇಕರಿದ್ದರು.