Advertisement

ತೊಗರಿ ಖರೀದಿ ಕೇಂದ್ರದಲ್ಲಿ ಅಕ್ರಮ

12:15 PM Feb 20, 2020 | Naveen |

ಸುರಪುರ: ಹಸನಾಪುರದ ತೊಗರಿ ಖರೀದಿ ಕೇಂದ್ರದಲ್ಲಿ ಅಕ್ರಮ ನಡೆಯುತ್ತಿದ್ದು, ಹಮಾಲಿ ಹಣದಲ್ಲಿ ಹೆಚ್ಚುವರಿಯಾಗಿ ವಸೂಲು ಮಾಡುತ್ತಾರೆ. ಬಿಲ್‌ ನೀಡಲು ಪ್ರತಿ ರೈತರಿಂದ 2 ನೂರು ರೂಪಾಯಿ ವಸೂಲಿ ಮಾಡುತ್ತಿದ್ದು, ಕ್ವಿಂಟಲ್‌ಗೆ 3 ಕೆಜಿ ಸೂಟ್‌ ಮುರಿಯುತ್ತಿದ್ದಾರೆ ಎಂದು ಆರೋಪಿಸಿ ರೈತರು ಮತ್ತು ಖರೀದಿ ಕೇಂದ್ರದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

Advertisement

ಈ ವೇಳೆ ಎಪಿಎಂಸಿ ಅಧ್ಯಕ್ಷ ನಿಂಗಪ್ಪ ಬಾದ್ಯಾಪುರ ಮಾತನಾಡಿ, ತೊಗರಿ ಕೇಂದ್ರದಲ್ಲಿ ರೈತರು ತಂದಿರುವ ತೊಗರಿ ತೂಕದಲ್ಲಿ ಕ್ವಿಂಟಲ್‌ಗೆ 3ಕೆಜಿ ಸೂಟ್‌ ತೆಗೆದುಕೊಳ್ಳಲಾಗುತ್ತಿದೆ. ಬಳಿಕ ಬಿಲ್‌ ನೀಡುವುದಕ್ಕೆ 200 ರೂ. ವಸೂಲಿ ಮಾಡುವುದು ಯಾವ ನ್ಯಾಯ. ಸರಕಾರವೇ ಹಮಾಲಿ ಖರ್ಚನ್ನು ಭರಿಸುತ್ತಿದೆ. ಆದರೂ 20 ರೂ. ವಸೂಲಿ ಮಾಡುವ ಮೂಲಕ ಅಧಿಕಾರಿಗಳು ರೈತರಿಗೆ ಮೋಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ರೈತರು ಮಾತನಾಡಿ, ಬೆಳೆದ ತೊಗರಿಗೆ ಮಾರುಕಟ್ಟೆಯಲ್ಲಿ ಯೋಗ್ಯ ಬೆಲೆ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಖರೀದಿ ಕೇಂದ್ರಕ್ಕೆ ಬಂದಿದ್ದೇವೆ. ಆದರೆ ಇಲ್ಲಿ ಖರೀದಿ ಕೇಂದ್ರ ದವರು ಹಾಡುಹಗಲೇ ರೈತರ ಶೋಷಣೆ ನಡೆಸಿದ್ದಾರೆ. ಈ ಬಗ್ಗೆ ಯಾರೊಬ್ಬರು ಕೇಳುತ್ತಿಲ್ಲ ಎಂದು ಆರೋಪಿಸಿದರು.

ಅಮ್ಮಾಪುರದ ರೈತ ನಿಂಗಪ್ಪ ಮಾತನಾಡಿ, ಒಂದು ತಿಂಗಳಿಂದ ಪ್ರಯತ್ನ ಪಟ್ಟು ನೋಂದಣಿ ಮಾಡಿಕೊಂಡಿದ್ದೇವೆ. ಪ್ರತಿ ಕ್ವಿಂಟಲ್‌ ತೊಗರಿ ಗಾಡಿಯಿಂದ ಇಳಿಸಿ ಕಾಟ್‌ ಮಾಡಲು ಸರಕಾರ 15 ರೂಪಾಯಿ ನೀಡುತ್ತಿದೆ. ಆದರೆ ಖರೀದಿ ಕೇಂದ್ರದವರು ರೈತರಿಂದ ಪ್ರತಿ ಕ್ವಿಂಟಲ್‌ಗೆ 20 ರೂ. ಹಮಾಲಿ ಪಡೆಯುತ್ತಿದ್ದಾರೆ. ಹಮಾಲಿ ಖರ್ಚು ಬಿಟ್ಟು ಪ್ರತಿ ರೈತರಿಂದ 2 ನೂರು ರೂಪಾಯಿ ಹೆಚ್ಚುವರಿಯಾಗಿ ವಸೂಲಿ ಮಾಡುತ್ತಿದ್ದಾರೆ ಎಂದು ದೂರಿದರು.

ಖರೀದಿ ಕೇಂದ್ರದ ಶಿವರುದ್ರ ಉಳ್ಳಿ ಪ್ರತಿಕ್ರಿಯೆ ನೀಡಿ, ರೈತರಿಗೆ ಅನ್ಯಾಯ ಮಾಡುತ್ತಿಲ್ಲ. ರೈತರಿಂದ ನೂರು ರೂ. ಪಡೆಯುತ್ತೇವೆ. ಪ್ರತಿ ಕ್ವಿಂಟಲ್‌ಗೆ 3 ಕೆಜಿ ಸೂಟ್‌ ತೆಗೆಯುತ್ತಿಲ್ಲ. 50 ಕೆಜಿ ಚೀಲಕ್ಕೆ
1 ಕೆಜೆ ತೆಗೆಯುತ್ತಿದ್ದೇವೆ. 750 ಗ್ರಾಂ ಚೀಲದ್ದು, 250 ಗ್ರಾಂ ಹವಾನಿಯಂತ್ರಣ ಹಾಗೂ ಒಣಗುವುದರಿಂದ ತೂಕ ಕಡಿಮೆ ಆಗುತ್ತದೆ ಎಂಬ ಕಾರಣಕ್ಕೆ ಪಡೆಯುತ್ತೇವೆ. ಗಾಡಿಯಿಂದ ಇಳಿಸಿ ಚೈನ್‌ ಗೆ ಹಾಕಿ ಕಾಟ ಮಾಡಿ ಚೀಲ ಹೊಲಿದು ನಂತರ ನಿಟ್ಟಿಗೆ ಹಾಕಲು ಸರಕಾರ 15 ರೂ. ಹಮಾಲಿ ನಿಗ ದಿಪಡಿಸಿದೆ. ಈ ದರದಲ್ಲಿ ಹಮಾಲರು ಕೆಲಸ ಮಾಡಲು ಒಪ್ಪುತ್ತಿಲ್ಲ. 35 ರೂ ತೆಗೆದುಕೊಳ್ಳುತ್ತಾರೆ.

Advertisement

ಹೀಗಾಗಿ ಹೆಚ್ಚುವರಿಯಾಗಿ 20 ರೂ. ಹಮಾಲಿ ಪಡೆಯುತ್ತಿದ್ದೇವೆ. ನಾಲ್ಕು ಜನ ಸಹಾಯಕರನ್ನು ಕೆಲಸಕ್ಕೆ ತೆಗೆದುಕೊಂಡಿದ್ದು, ಅವರ ಊಟ, ಮತ್ತಿತರ ಖರ್ಚಿಗಾಗಿ 100 ರೂ. ಪಡೆಯುತ್ತಿದ್ದೇವೆ. ಎಪಿಎಂಸಿ ಅಧ್ಯಕ್ಷರು, ರೈತರು ವೃತ ಆರೋಪ ಮಾಡುತ್ತಿದ್ದಾರೆ ಎಂದು ಸ್ಪಷ್ಟ ಪಡಿಸಿದರು ಇಲ್ಲಿನ ವಾಸ್ತವ ಸ್ಥಿತಿಯನ್ನು ಜಿಲ್ಲಾ
ಧಿಕಾರಿ ಅವರಿಗೆ ತಿಳಿಸಿದ್ದೇವೆ. ನಾವು ಯಾವುದೇ ಮೋಸ ಮಾಡಿಲ್ಲ.
ಗುರುವಾರ ಬೆಳಗ್ಗೆ 9 ಗಂಟೆಗೆ ಖರೀದಿ ಆರಂಭಿಸಲಾಗುವುದು. ರೈತರ ತೊಗರಿಯನ್ನು ಖರೀದಿಸಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next