Advertisement

ಅಂಕಪಟ್ಟಿ ತಿದ್ದುಪಡಿ: ಕ್ರಮ ಕೈಗೊಂಡಿಲ್ಲ ಏಕೆ?

12:15 PM Dec 11, 2019 | Naveen |

ಸುರಪುರ: ತಾಲೂಕಿನ ಯಕ್ತಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏಳನೇ ತರಗತಿ ಪ್ರತಿಭಾವಂತ ವಿದ್ಯಾರ್ಥಿ ಅಂಕಪಟ್ಟಿ ತಿದ್ದುಪಡಿ ಮಾಡಿದ ಪ್ರಧಾನ ಶಿಕ್ಷಕರ ಮೇಲೆ ಏಕೆ ಕ್ರಮ ತೆಗೆದುಕೊಂಡಿಲ್ಲ ಎಂದು ಲೋಕಾಯುಕ್ತ ಡಿವೈಎಸ್‌ಪಿ ಯು.ಬಿ. ಚಿಕ್ಕಮಠ ಶಿಕ್ಷಣ ಸಮನ್ವಯ ಅಧಿಕಾರಿಯನ್ನು ಪ್ರಶ್ನಿಸಿದರು.

Advertisement

ನಗರದ ತಾಪಂ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಲೋಕಾಯುಕ್ತ ಅಧಿಕಾರಿಗಳಿಂದ ಸಾರ್ವಜನಿಕರ ದೂರು, ಕುಂದು ಕೊರತೆ ಸ್ವೀಕರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯಕ್ತಾಪುರ ಎಸ್‌ಡಿಎಂಸಿ ಅಧ್ಯಕ್ಷ ಲಿಂಗಪ್ಪ ಹೊಸಮನಿ ಅವರು ದೂರು ಸಲ್ಲಿಸಿ ನಾಲ್ಕು ವರ್ಷವಾದರೂ ಏಕೆ ಕ್ರಮ ತೆಗೆದುಕೊಂಡಿಲ್ಲ. ಈ ಕುರಿತು ವಾರದೊಳಗಾಗಿ ಕ್ರಮ ತೆಗೆದುಕೊಂಡು ನೋಂದವರಿಗೆ ನ್ಯಾಯ ಒದಗಿಸಿಕೊಡಬೇಕು. ನಿರ್ಲಕ್ಷ್ಯ ವಹಿಸಿದರೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ಎಚ್ಚರಿಸಿದರು.

ಜನರು ತಪ್ಪು ಮಾಡುವುದು ಸಹಜ. ಅದನ್ನು ಸರಿಪಡಿಸುವುದಕ್ಕಾಗಿಯೇ ಅಧಿಕಾರಿಗಳು ಇರುವುದು. ಹೀಗಾಗಿ ಪ್ರತಿಯೊಂದನ್ನು ಸೂಕ್ಷ್ಮವಾಗಿ ಗಮನಿಸಬೇಕು. ಸಮಸ್ಯೆ ಹೊತ್ತು ಬಂದವರಿಗೆ ಸಮಾಧಾನದಿಂದ ಉತ್ತರಿಸಬೇಕು ಮತ್ತು ಸರಿಯಾದ ಮಾರ್ಗದರ್ಶನ ನೀಡಬೇಕು.

ಯೋಜನೆಗಳ ಕುರಿತು ಜನರಿಗೆ ತಪ್ಪು ಮಾಹಿತಿ ನೀಡುವುದಾಗಲಿ. ಬ್ಲಾಕ್‌ ಮೇಲ್‌ ಮಾಡುವುದಾಗಲಿ, ಕಡತಗಳನ್ನಿಟ್ಟುಕೊಂಡು ಅನಾವಶ್ಯಕ ತೊಂದರೆ ಕೊಡುವುದು ಅಪರಾಧ. ಕಾರಣ ಅಧಿಕಾರಿಗಳು ಇದನ್ನು ಅರಿತು ಸಾರ್ವಜನಿಕರಿಗೆ ಸೇತುವಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು. ನನ್ನ ತಾಯಿ ಜೀವಂತ ಇದ್ದರು ಕೂಡ ನನ್ನ ಅಣ್ಣನಿಂದ ಕಂದಾಯ ಇಲಾಖೆ ಅಧಿಕಾರಿಗಳು ಲಂಚ ಪಡೆದು ಮೃತಪತ್ರ ನೀಡಿದ್ದಾರೆ. ಮರಣ ಪತ್ರ ರದ್ದುಪಡಿಸುವಂತೆ ಕಳೆದ ನಾಲ್ಕು ವರ್ಷಗಳಿಂದ ತಹಶೀಲ್ದಾರ್‌ ಕಚೇರಿಗೆ ದೂರು ಸಲ್ಲಿಸಿ ಅಲಿಯುತ್ತಿದ್ದೇನೆ. ಆದರು ಸಹ ಕಂದಾಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಮಂಗಳೂರು ಗ್ರಾಮದ ಅಲ್ಲಿಸಾಬ್‌ ಅಹವಾಲು ಸಲ್ಲಿಸಿದರು.

Advertisement

ಈ ಕುರಿತು ಪರಿಶೀಲಿಸಿ 15 ದಿನದೊಳಗಾಗಿ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್‌ ನಿಂಗಪ್ಪ ಬಿರಾದಾರ ಅವರಿಗೆ ಸೂಚಿಸಿದರು. ಆಶ್ರಮ ಮನೆ ಹಣ ಪಾವತಿಸುವಲ್ಲಿ ಪಿಡಿಒ ನಿರ್ಲಕ್ಷ್ಯ ವಹಿಸಿದ್ದಾರೆ. ಅನಗತ್ಯ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ರಾಯನಗೋಳದ ಹಣಮಂತ ನೀಡಿದ ದೂರು ಸ್ವೀಕರಿಸಿದ ಅಧಿಕಾರಿಗಳು ಈ ಕುರಿತು ಪರಿಶೀಲಿಸಿ ಫಲಾನುಭವಿಗೆ ಹಣ ಸಂದಾಯ ಮಾಡುವಂತೆ ತಾಪಂ ಇಒ ಅಮರೇಶ ಅವರಿಗೆ ಸೂಚಿಸಿದರು.

ದೇವಾಪುರ ಹತ್ತಿರದ 5 ಕಿಮೀ ರಸ್ತೆ ಕಾಮಗಾರಿ ಸ್ಥಗಿತದಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ. ದೊಡ್ಡ ದೊಡ್ಡ ತಗ್ಗುಗಳು ಬಿದ್ದಿವೆ. ತಾತ್ಕಾಲಿಕವಾದರು ರಸ್ತೆ ದುರಸ್ತಿಗೊಳಿಸುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ತಾಲೂಕಿನ ಆರೋಗ್ಯ ಕೇಂದ್ರಗಳಲ್ಲಿ ಸರಿಯಾದ ರಿಜಿಸ್ಟ್ರಾರ್‌ ನಿರ್ವಹಣೆ ಮಾಡುತ್ತಿಲ್ಲ.ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿದಾಗ ಅಧಿಕಾರಿಗಳು ಇಲ್ಲದಿರುವುದು ಕಂಡು ಬಂದಿದೆ. ಕೆಲವು ಅಧಿಕಾರಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಈ ಬಗ್ಗೆ ಎಚ್ಚರಿವಸುವಂತೆ ಲೋಕಾಯುಕ್ತರು ತಾಲೂಕು ಆರೋಗ್ಯ ಅಧಿಕಾರಿಗೆ ಸೂಚಿಸಿದರು.

ಅಂಗನವಾಡಿಗಳಲ್ಲಿ ಸ್ವತ್ಛತೆಯಿಲ್ಲ. ಪೌಷ್ಟಿಕಾಂಶಯುಕ್ತ ಆಹಾರ ನೀಡುತ್ತಿಲ್ಲವಾದ ಕಾರಣ ವರದಿ ಸಲ್ಲಿಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳಿಗೆ ಸೂಚಿಸಿದರೂ ವರದಿ ನೀಡಿಲ್ಲ. ಕೂಡಲೇ ವರದಿ ನೀಡುವಂತೆ ಸೂಚಿಸಿದರು.

ತಾಪಂ ಇಒ ಅಮರೇಶ, ಗ್ರೇಡ್‌-2 ತಹಶೀಲ್ದಾರ್‌ ಸೋಫಿಯಾ ಸುಲ್ತಾನ್‌, ತಾಲೂಕು ಆರೋಗ್ಯ ಅಧಿಕಾರಿ ಡಾ| ಆರ್‌.ವಿ.
ನಾಯಕ, ಲೋಕಾಯುಕ್ತ ಪೊಲೀಸ್‌ ಇನ್ಸ್ ಪೆಕ್ಟರ್‌ ಗುರುರಾಜ ಕಟ್ಟಿಮನಿ, ಮುಖ್ಯ ಪೇದೆಗಳಾದ ಹಣಮಂತ್ರಾಯ ಬಾದ್ಯಾಪುರ, ರಾಮನಗೌಡ, ಮೊಹ್ಮದ್‌ ಗೌಸ್‌, ಶ್ರೀದೇವಿ ಹಾಗೂ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next