ಸುರಪುರ: ಇತ್ತೀಚೆಗೆ ಮಕ್ಕಳ ಕಾಣೆಯಾಗುವ ಪ್ರಕರಣ ಬೆಳಕಿಗೆ ಬರುತ್ತಿವೆ. ಈ ಬಗ್ಗೆ ಅನೇಕ ದೂರುಗಳು ಬರುತ್ತಿವೆ. ಮಕ್ಕಳ ರಕ್ಷಣೆಗಾಗಿ ಪೊಲೀಸ್ ಇಲಾಖೆ ಅಷ್ಟೇ ಪ್ರಯತ್ನಿಸಿದರೆ ಸಾಲದು, ಇದಕ್ಕೆ ವಿದ್ಯಾರ್ಥಿ ಮತ್ತು ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದು ಡಿವೈಎಸ್‌ಪಿ ಶಿವನಗೌಡ ಪಾಟೀಲ ಹೇಳಿದರು.
ನಗರದ ಶ್ರೀ ಪ್ರಭು ಜೆ.ಎಂ. ಬೋಹರಾ ಕಾಲೇಜಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ಆಪರೇಷನ್ ಮುಸ್ಕಾನ ಜಾಗೃತಿ ಅಭಿಯಾನದಲ್ಲಿ ಮಾತನಾಡಿದ ಅವರು, ಶಾಲೆಗಳ ಬಳಿ ಅಥವಾ ಮನೆ ಹತ್ತಿರ ಅನಾಮದೇಯ ವ್ಯಕ್ತಿಗಳು ಆಗಮಿಸಿ ಆಟ ಆಡುತ್ತಿರುವ ಮಕ್ಕಳಿಗೆ ತಿಂಡಿಗಳ ಆಸೆ ತೋರಿಸಿ ಮಕ್ಕಳನ್ನು ಎತ್ತಿಕೊಂಡು ಹೋಗುವ ಸಾಧ್ಯತೆ ಇದೆ. ಈ ಬಗ್ಗೆ ಪೋಷಕರು, ಶಾಲಾ ಶಿಕ್ಷಕರು ಜಾಗೃತಿ ವಹಿಸಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಇತ್ತೀಚೆಗೆ ಇಂತಹ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿವೆ. ಈ ಬಗ್ಗೆ ಸಾರ್ವಜನಿಕರಲ್ಲಿ, ಪಾಲಕ ಪೋಷಕರಲ್ಲಿ, ಶಾಲಾ ಕಾಲೇಜುಗಳ ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಜು. 1ರಿಂದ 31ರ ವರೆಗೆ ಪೊಲೀಸ್ ಇಲಾಖೆ ಜಾಗೃತಿ ಅಭಿಯಾನ ಹಮ್ಮಿಕೊಂಡಿದೆ. ಕಾರಣ ಸಾರ್ವಜನಿಕರು ಇಲಾಖೆಯೊಂದಿಗೆ ಕೈ ಜೋಡಿಸಬೇಕು ಎಂದು ಕೋರಿದರು.
ಠಾಣೆಯ ಪೊಲೀಸ್ ಸರ್ಕಲ್ ಇನ್ಸೆಪೆಕ್ಟರ್ ಆನಂದರಾವು ಮಾತನಾಡಿ, ಮಕ್ಕಳ ಕಳ್ಳ ಸಾಗಾಣಿಕೆ ಮಾಡುವುದು, ಮಕ್ಕಳನ್ನು ಬಿಕ್ಷಾಟನೆಗೆ ಸೇರಿಸುವುದು. ಅಂಗಾಗ ಮಾರಾಟ ಮಾಡುವುದು ಸೇರಿದಂತೆ ಹೀನ ಕೃತ್ಯಗಳಲ್ಲಿ ತೊಡಗಿಸಲಾಗುತ್ತಿದೆ. ಕಾರಣ ಈ ಬಗ್ಗೆ ಎಲ್ಲರೂ ಜಾಗೃತಿ ವಹಿಸಬೇಕು ಎಂದು ತಿಳಿಸಿದರು.
ಕಾಲೇಜಿನ ಪದವಿ ವಿಭಾಗದ ಪ್ರಾಚಾರ್ಯ ಎಸ್.ಹೆಚ್. ಹೊಸ್ಮನಿ ಅಧ್ಯಕ್ಷತೆ ವಹಸಿದ್ದರು. ಪಿಯು ಕಾಲೇಜಿನ ಪ್ರಾಚಾರ್ಯ ವಾರೀಸ್ ಕುಂಡಾಲೆ ಮಾತನಾಡಿದರು. ಪೇದೆ ದಯಾನಂದ ಸ್ವಾಗತಿಸಿದರು. ಡಾ| ಸಾಯಿಬಣ್ಣ ನಿರೂಪಿಸಿದರು. ಸಿ.ಎಂ. ಸುತಾರ ವಂದಿಸಿದರು.