ಸುರಪುರ: ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಪತನವಾದ ಹಿನ್ನೆಲೆಯಲ್ಲಿ ಮಂಗಳವಾರ ಬಿಜೆಪಿ ಮುಖಂಡರು ನಗರದ ಬಿಜೆಪಿ ಕಚೇರಿಯಲ್ಲಿ ವಿಜಯೋತ್ಸವ ಆಚರಿಸಿದರು.
ನಂತರ ಬೈಕ್ ರ್ಯಾಲಿ ನಡೆಸಿ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತ, ಡಾ| ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತದಲ್ಲಿ ಮಹಾತ್ಮರ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಿ ಜೈ ಘೋಷ ಹಾಕಿದರು. ನಂತರ ಮಹಾತ್ಮ ಗಾಂಧಿ ವೃತ್ತದಲ್ಲಿ ಸಮವೇಶಗೊಂಡು ಪಟಾಕಿ ಸಿಡಿಸಿ ಪರಸ್ಪರ ಗುಲಾಲು ಎರಚಿ, ಸಿಹಿ ಹಂಚಿ ಸಂಭ್ರಮಾಚರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ, ಜಿಪಂ ಮಾಜಿ ಅಧ್ಯಕ್ಷ ರಾಜಾಹನುಮಪ್ಪ ನಾಯಕ ತಾತ ಮಾತನಾಡಿ, 18 ದಿನಗಳಿಂದ ನಡೆಯುತ್ತಿದ್ದ ಸಮ್ಮಿಶ್ರ ಸರ್ಕಾರದ ಹೈ ಡ್ರಾಮಾ ಕೊನೆಗೂ ತೆರೆಗೊಂಡಿದೆ. ವಿಶ್ವಾಸ ಮತಯಾಚನೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಗೆ ಹಿನ್ನಡೆಯಾಗಿದ್ದು, ಎರಡು ಪಕ್ಷಗಳಿಗೆ ಸೋಲಾಗಿದೆ. ರಾಜ್ಯದಲ್ಲಿ ಬಿಜೆಪಿಯಿಂದ ಹೊಸ ಶಕೆ ಆರಂಭವಾಗಲಿದೆ ಎಂದರು.
ಕಳೆದ ಒಂದೂವರೆ ವರ್ಷದಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಮಾಯವಾಗಿದೆ. ಯಾವ ಕ್ಷೇತ್ರದಲ್ಲಿ ಗಣನೀಯ ಪ್ರಗತಿ ಕಂಡಿಲ್ಲ. ರಾಜ್ಯದ ಜನರ ಅಪೇಕ್ಷೆಯಂತೆ ಇಂದು ಮೈತ್ರಿ ಸರ್ಕಾರದ ಆಡಳಿತ ಕೊನೆಯಾಗಿದ್ದು, ಬಿಜೆಪಿ ಅಧಿಕಾರದ ಗದ್ದುಗೆ ಹೇರಲಿದೆ. ಇನ್ನು ಮುಂದೆ ಕೇವಲ ಅಭಿವೃದ್ಧಿ ಮಂತ್ರ ಜಪಿಸಲಿದೆ ಎಂದು ಹೇಳಿದರು.
ಮುಖಂಡ ಶಂಕರ ನಾಯಕ ಮಾತನಾಡಿ, ಕೇಂದ್ರ ಸರ್ಕಾರದ ನಾಯಕರ ನಿರ್ದೇಶನದ ಮೇರೆೆಗೆ ರಾಜ್ಯದಲ್ಲಿ ಆಡಳಿತ ನಡೆಯಲಿದೆ. ಬಿಜೆಪಿ ಸರ್ಕಾರದಲ್ಲಿ ಯಾದಗಿರಿಯ ಜಿಲ್ಲೆ ಅಭಿವೃದ್ಧಿಗಾಗಿ ಸುರಪುರ ಕ್ಷೇತ್ರದ ಶಾಸಕ ರಾಜುಗೌಡ ಅವರಿಗೆ ಸಚಿವ ಸ್ಥಾನ ದೊರೆಯುವ ನಿರೀಕ್ಷೆಯಿದೆ. ಸರ್ಕಾರ ಪತನವಾದ ಹಿನ್ನೆಲೆಯಲ್ಲಿ ಕ್ಷೇತ್ರದ ಬಿಜೆಪಿ ಕಾರ್ಯಕರ್ತರಲ್ಲಿ ಸಂತಸ ಮನೆ ಮಾಡಿದೆ. ಬಿಜೆಪಿ ಮುಖಂಡರು ಒಗ್ಗಟ್ಟಾಗಿ ರಾಜ್ಯದ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ. ಮೈತ್ರಿ ಸರ್ಕಾರದಂತೆ ಬಿಜೆಪಿ ಕಚ್ಚಾಟದಲ್ಲಿ ತೊಡಗುವುದಿಲ್ಲ. ಜನರ ಆಸೆಯಂತೆ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ರಚನೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವೇಣುಮಧವ ನಾಯಕ, ಪಾರಪ್ಪ ಗುತ್ತೇದಾರ, ದೊಡ್ಡ ದೇಸಾಯಿ, ಸಣ್ಣ ದೇಸಾಯಿ ದೇವರಗೋನಾಲ, ಬಲಭೀಮ ನಾಯಕ ಬೈರಿಮಡ್ಡಿ, ವಿಷ್ಣು ಗುತೇದಾರ, ನರಸಿಂಹಕಾಂತ ಪಂಚಮಗಿರಿ, ಸೋಫಿಸಾಬ ನಾಗರಾಳ, ಮಹೇಶ ಪಾಟೀಲ, ಶರಣು ನಾಯಕ ಬೈರಿಮಡ್ಡಿ, ಶರಣು ಹೊಸ್ಮನಿ, ಚಂದ್ರು ಎಲಿಗಾರ, ಸೂಗೂ ಮೋದಿ ಹೆಡಗಿನಾಳ, ಮಲೇಶಿ ಪೂಜಾರಿ, ಜಕ್ಕಪ್ಪ ಕಟ್ಟಿಮನಿ, ವೆಂಕಟೇಶ ಗದ್ವಾಲ ಪರಶುರಾಮ ಹಸನಾಪುರ, ಶೇಖಪ್ಪ ತೇಲ್ಕರ್ ಇತರರಿದ್ದರು.